ಸಾರಾಂಶ
ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಸಂಘ ಸಂಸ್ಥೆಗಳ ಬೆಳವಣಿಗೆಯಲ್ಲಿ ನಿಸ್ವಾರ್ಥ, ಪ್ರಾಮಾಣಿಕ ಸದಸ್ಯರ ಶ್ರಮ ಬಹುಮುಖ್ಯ ಕಾರಣವಾಗಿದೆ. ಈ ದಿಸೆಯಲ್ಲಿ ಪಟ್ಟಣದ ಪೌರವಿಹಾರ ಬೃಹದಾಕಾರವಾಗಿ ಅಭಿವೃದ್ಧಿ ಹೊಂದಲು ಹಲವು ಹಿರಿಯ ಸದಸ್ಯರ ಶ್ರಮವನ್ನು ಸ್ಮರಿಸಿಕೊಳ್ಳಬೇಕಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.ಪಟ್ಟಣದ ಪೌರವಿಹಾರ ಸಂಸ್ಥೆ ವತಿಯಿಂದ ನಿರ್ಮಿಸಲಾದ ನೂತನ ಸಭಾಂಗಣ ಹಾಗೂ ಉದ್ಯಾನವನ ಉದ್ಘಾಟಿಸಿ ಮಾತನಾಡಿದ ಅವರು, 30 ಸಾವಿರ ಬಂಡವಾಳದ ಮೂಲಕ 1952 ರಲ್ಲಿ ಆರಂಭವಾದ ಪೌರವಿಹಾರ ಇದೀಗ 250 ಸದಸ್ಯರ ಮೂಲಕ ಕೋಟ್ಯಂತರ ಬೆಲೆಬಾಳುವ ಆಸ್ತಿ ಹೊಂದಿದೆ. ಆ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಸಂಸ್ಥೆ ಬೆಳವಣಿಗೆಯಲ್ಲಿ ಇದುವರೆಗಿನ ಆಡಳಿತ ಮಂಡಳಿ ಹಾಗೂ ಸದಸ್ಯರ ನಿಸ್ವಾರ್ಥ ಪ್ರಾಮಾಣಿಕ ಸೇವೆ ಬಹುಮುಖ್ಯ ಕಾರಣ. ಸರ್ಕಾರಿ ಸಂಸ್ಥೆಗೆ ಹೋಲಿಸಿದಲ್ಲಿ ಖಾಸಗಿ, ಸಾರ್ವಜನಿಕ ಸಂಸ್ಥೆಗಳು ಬೃಹದಾಕಾರವಾಗಿ ಅಭಿವೃದ್ಧಿ ಹೊಂದಲು ಆಡಳಿತ ಮಂಡಳಿ ಸದಸ್ಯರ ಶ್ರಮ ಪ್ರತ್ಯಕ್ಷ ಸಾಕ್ಷಿಯಾಗಿದೆ. ಈ ಹಿಂದೆ ಪೌರವಿಹಾರದ ಸದಸ್ಯನಾಗಿದ್ದು, ಅತೀವ ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.
ಜಿಲ್ಲೆ ಸರ್ವತೋಮುಖ ಅಭಿವೃದ್ಧಿ:ಪೌರವಿಹಾರ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗದೇ, ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಹಿರಿಯ ಸದಸ್ಯರ ದೂರದೃಷ್ಠಿಯಿಂದಾಗಿ ಇದೀಗ ಜಿಲ್ಲೆ, ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಜಿಲ್ಲೆಯು ಸಮಗ್ರ ಅಭಿವೃದ್ಧಿ ಮೂಲಕ ಜಾಗತಿಕಮಟ್ಟದಲ್ಲಿ ಸ್ಪರ್ಧಿಸುವ ರೀತಿ ಸರ್ವತೋಮುಖವಾಗಿ ಬೆಳವಣಿಗೆ ಹೊಂದಿದೆ. ಇದಕ್ಕೆ ಪೂರಕವಾಗಿ ಶಿವಮೊಗ್ಗದಿಂದ ಶಿಕಾರಿಪುರಕ್ಕೆ ರೈಲ್ವೆ ಸಂಪರ್ಕಕ್ಕೆ ಹಳಿ ಜೋಡಿಸುವ ಕಾರ್ಯ ಭರದಿಂದ ಸಾಗಿದೆ. ಶೀಘ್ರದಲ್ಲಿಯೇ ರಾಣೇಬೆನ್ನೂರಿಗೆ ಸಂಪರ್ಕ ಕಲ್ಪಿಸಿದಲ್ಲಿ ಪ್ರವಾಸೋದ್ಯಮ, ವ್ಯಾವಹಾರಿಕ ಕ್ಷೇತ್ರಕ್ಕೆ ಅನುಕೂಲವಾಗಲಿದೆ. ಉತ್ತರ ಕರ್ನಾಟಕ ಮೂಲಕ ಹಲವು ರಾಜ್ಯಕ್ಕೆ ಸಂಪರ್ಕ ಕಲ್ಪಿಸುತ್ತದೆ. ಯಡಿಯೂರಪ್ಪನವರ ಬಹು ಮಹತ್ವಾಕಾಂಕ್ಷೆಯ ವಿಮಾನ ನಿಲ್ದಾಣ ಪೂರ್ಣಗೊಂಡಿದ್ದು, ಉಡುತಡಿಯಲ್ಲಿ ಅಕ್ಕಮಹಾದೇವಿ ಭವ್ಯ ಪ್ರತಿಮೆ ನಿರ್ಮಾಣ, ಶಾಶ್ವತ ನೀರಾವರಿ ಸಹಿತ ಅಗತ್ಯವಾದ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.
₹10 ಕೋಟಿ ಮಂಜೂರು:ಪಟ್ಟಣದ ಪ್ರಮುಖ ರಸ್ತೆಯ ಅಕ್ಕಪಕ್ಕದಲ್ಲಿ ಸೈಕಲ್ ಸವಾರರಿಗೆ ಹಾಗೂ ಪಾದಚಾರಿಗಳಿಗಾಗಿ ಪ್ರತ್ಯೇಕ ಟ್ರಾಕ್‌ಗಳನ್ನು ನಿರ್ಮಿಸಲು ₹10 ಕೋಟಿ ಮಂಜೂರಾಗಿದೆ. ಕಾಮಗಾರಿಗೆ ವೇಗದ ಚಾಲನೆ ನೀಡಲಾಗಿದೆ. ಇದರಿಂದಾಗಿ ಪೌರವಿಹಾರದ ನಿವೇಶನಗಳ ಮೌಲ್ಯ ವಿಪರೀತ ಹೆಚ್ಚಳವಾಗಲಿದೆ. ಶಿಕಾರಿಪುರ ಪುಣ್ಯಭೂಮಿಯಾಗಿದ್ದು, ಇಲ್ಲಿನ ಮಣ್ಣಿನ ಕಣಕಣದಲ್ಲಿ ಶಿವಶರಣರ ಹೆಜ್ಜೆಯ ಗುರುತಿದೆ. ಕಲ್ಲು ಎಡವಿದರೂ ಶಾಸನ ದೊರೆಯಲಿದೆ. ಇಲ್ಲಿ ಜನಿಸಿದ ಪ್ರತಿಯೊಬ್ಬರೂ ಪುಣ್ಯವಂತರು ಎಂದರು.
ಸಂಸ್ಥೆ ಕಾರ್ಯದರ್ಶಿ ಎಚ್.ಎಸ್ ರವೀಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆ ಬೆಳೆದು ಬಂದ ಹಾದಿ ಹಾಗೂ ಶ್ರಮಿಸಿದ ಹಿರಿಯರ ಶ್ರಮವನ್ನು ಸ್ಮರಿಸಿದರು.ಸಂಸದ ರಾಘವೇಂದ್ರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡ ಸಹಿತ ಸಂಸ್ಥೆ ಬೆಳವಣಿಗೆಗೆ ಶ್ರಮಿಸಿದ ಹಿರಿಯ ಸದಸ್ಯರು, ಹಾಲಿ ಆಡಳಿತ ಮಂಡಳಿ ಸದಸ್ಯರನ್ನು ಅಭಿನಂದಿಸಲಾಯಿತು. ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷ ಗಂಗಾಧರ್ ಮಡ್ಡಿ ವಹಿಸಿ ಮಾತನಾಡಿದರು. ಉಪಾಧ್ಯಕ್ಷ ಶ್ರೀಧರ ಕರ್ಕಿ, ನಿರ್ದೇಶಕರಾದ ಬಿ.ಪಿ ಉಮಾಶಂಕರ, ರೇಣುಕಸ್ವಾಮಿ, ಸಿದ್ದಲಿಂಗೇಶ್ ಹರಿಹರದ, ಕರಿಬಸಪ್ಪ, ಗುರುಪ್ರಸಾದ್, ಏಕೇಶ್ವರಪ್ಪ ಅಂಗಡಿ, ವ್ಯವಸ್ಥಾಪಕ ಜಿ.ಎಚ್. ಸಿದ್ದಯ್ಯ ಮತ್ತಿತರರು ಉಪಸ್ಥಿತರಿದ್ದರು.
- - - ಬಾಕ್ಸ್ ತೀರ್ಥಹಳ್ಳಿಗೂ ರೈಲ್ವೆ ಸೇವೆ ಕಲ್ಪಿಸಿ: ಆರ್ಎಂಎಂಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ ಮಾತನಾಡಿ, ಮಾಜಿ ಸಭಾಪತಿ, ಡಿಸಿಸಿ ಬ್ಯಾಂಕ್ ಪ್ರಥಮ ಅಧ್ಯಕ್ಷ ತಾಲೂಕಿನ ಹಲವು ಸಂಘ ಸಂಸ್ಥೆಗಳ ಸಂಸ್ಥಾಪಕ ಎಂಬ ಹಿರಿಮೆಯ ದಿ. ನರಸಪ್ಪ ಅವರು ಹುಟ್ಟಿಹಾಕಿದ ಪೌರವಿಹಾರ ಇದೀಗ ಅತ್ಯಂತ ಪ್ರತಿಷ್ಠಿತ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಸ್ಥೆ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗದಂತೆ ಜಾಗೃತಿ ವಹಿಸುವ ದಿಸೆಯಲ್ಲಿ ಕಂಟ್ರಿ ಕ್ಲಬ್, ಸಿಟಿ ಕ್ಲಬ್ ಎಂದು ಹೆಸರಿಸದೇ ಪೌರವಿಹಾರ ಎಂದು ಗೌರವ ಭಾವನೆ ಮೂಡಿಸುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಶಿವಮೊಗ್ಗ ಇದೀಗ ವಿಪರೀತ ಅಭಿವೃದ್ಧಿಯಾಗಿದೆ. ರಾಜಕೀಯ ಹೊರತುಪಡಿಸಿ ಅವಲೋಕಿಸಿದಾಗ ಅಭಿವೃದ್ಧಿಯಲ್ಲಿ ಯಡಿಯೂರಪ್ಪನವರ ಪಾತ್ರ ಬಹುಮುಖ್ಯವಾಗಿದೆ ಎಂದು ಸ್ಮರಿಸಿದ ಅವರು, ಸಂಸದರು ಶಿಕಾರಿಪುರ ರೀತಿ ತೀರ್ಥಹಳ್ಳಿಗೂ ರೈಲ್ವೆ ಸಂಪರ್ಕ ಕಲ್ಪಿಸುವ ಬಗ್ಗೆ ಹೆಚ್ಚು ಗಮನ ಹರಿಸುವಂತೆ ತಿಳಿಸಿದರು.
- - - -20ಕೆ.ಎಸ್.ಕೆಪಿ1:ಶಿಕಾರಿಪುರದ ಪೌರವಿಹಾರ ಸಂಸ್ಥೆಯಲ್ಲಿ ನಡೆದ ನೂತನ ಸಭಾಂಗಣ, ಉದ್ಯಾನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರನ್ನು ಸನ್ಮಾನಿಸಲಾಯಿತು.