ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುವ ಅಂಗನವಾಡಿ ಕಾರ್ಯಕರ್ತೆಯರ ಸೇವೆ ನಿಸ್ವಾರ್ಥವಾದುದು. ಅವರ ಸೇವೆ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸಂಯುಕ್ತಾಶ್ರಯದಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವಯೋನಿವೃತ್ತಿ ಹೊಂದಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಮಕ್ಕಳು ದೇಶದ ಭವಿಷ್ಯ, ಅವರನ್ನು ಉತ್ತಮ ವಾತಾವರಣದಲ್ಲಿ ಬೆಳೆಸಿ ಸಮಾಜದ ಸತ್ಪ್ರಜೆಗಳಾಗಿ ರೂಪಿಸುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿ. ಸರ್ಕಾರ ಮಕ್ಕಳ ಪಾಲನೆ, ಪೋಷಣೆ, ಶಿಕ್ಷಣ ಹಾಗೂ ಉತ್ತಮ ಬೆಳವಣಿಗೆಗೆ ಅಂಗನವಾಡಿ ಕೇಂದ್ರಗಳನ್ನು ತೆರೆದಿದ್ದು ಈ ಕೇಂದ್ರಗಳಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಮಾತೃ ವಾತ್ಸಲ್ಯದಿಂದ ಪೋಷಣೆ ಮಾಡುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಬಹುಮುಖ್ಯವಾಗಿದೆ ಎಂದರು.ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಅನೇಕ ಬಡ ಜನರು ಇಂದಿಗೂ ಪ್ರತಿದಿನ ಕೂಲಿ ಮಾಡಿ ತಮ್ಮ ಜೀವನ ನಿರ್ವಹಿಸುತ್ತಿದ್ದಾರೆ. ಕೂಲಿಯನ್ನೆ ನಂಬಿ ಬದುಕು ಸಾಗಿಸುತ್ತಿರುವ ಅವರು ತಮ್ಮ ಮಕ್ಕಳನ್ನು ಕೆಲಸದ ಸ್ಥಳಗಳಲ್ಲಿ ಇರಿಸಿ ಕೆಲಸ ನಿರ್ವಹಿಸುವುದು ಕಷ್ಟಕರ. ಅವರ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ಸರ್ಕಾರ ಅಂಗನವಾಡಿ ಕೇಂದ್ರ ಗಳಲ್ಲಿ ಮಕ್ಕಳನ್ನು ನೇಮಿಸಿಕೊಂಡು ಆಟ, ಪಾಠ ಹಾಗೂ ಪೌಷ್ಠಿಕ ಆಹಾರ ನೀಡಿ ಅವರ ಉತ್ತಮ ಬೆಳವಣಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ಪೋಷಣೆ ಮಾಡುತ್ತಿದೆ ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಚ್.ಎಸ್. ಕೀರ್ತನಾ ಮಾತನಾಡಿ, ಸರ್ಕಾರದ ಯೋಜನೆ ಗಳನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಬಹು ಮುಖ್ಯ. ಗ್ರಾಮದ ಜನರ ಹುಟ್ಟಿನಿಂದ ಸಾವಿನಾವರೆಗಿನ ಮಾಹಿತಿ ದಾಖಲಿಸುವ ಕೆಲಸ ಆಗುತ್ತಿದೆ. ಮಕ್ಕಳೊಂದಿಗೆ ಗರ್ಭಿಣಿ, ಬಾಣಂತಿ ಮಹಿಳೆ ಯರಿಗೆ ಸರ್ಕಾರ ಒದಗಿಸುವ ಪೌಷ್ಠಿಕ ಆಹಾರ ಪದಾರ್ಥಗಳು ತಲುಪಿಸುವುದರೊಂದಿಗೆ ಹಾಗೂ ಅವರ ಆರೋಗ್ಯ ಕ್ಷೇಮಾಭಿವೃದ್ಧಿ ವಿಚಾರಿಸಿ ಸುರಕ್ಷಿತವಾರಿಸಲು ಶ್ರಮಿಸುತ್ತಿದ್ದಾರೆ. ಜೊತೆಗೆ ಮಕ್ಕಳನ್ನು ಮಾತೃ ಹೃದಯದಿಂದ ಪೋಷಣೆ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಡಲು ಸಹಕರಿಸುತ್ತಿದ್ದಾರೆ ಎಂದರು.
ಮಹಿಳೆಯರ ಹಾಗೂ ಮಕ್ಕಳ ರಕ್ಷಣೆಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಬಡ ವರ್ಗದ ಜನರು ಕೂಲಿ ಕಾರ್ಮಿಕರು ಆರ್ಥಿಕ ವಾಗಿ ಸಬಲರಾಗಲು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿದೆ. ಇವರ ಸಾಮಾಜಿಕ ಸೇವೆ ಅಗಾಧವಾದುದು ಎಂದರು.ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಭಜಂತ್ರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಲೋಕೇಶ್ವರಪ್ಪ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸಂತೋಷ್, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ. ರಂಗನಾಥ್ ಉಪಸ್ಥಿತರಿದ್ದರು. 17 ಕೆಸಿಕೆಎಂ 6
ಚಿಕ್ಕಮಗಳೂರಿನ ಅಂಬೇಡ್ಕರ್ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಯೋನಿವೃತ್ತಿ ಹೊಂದಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಬೀಳ್ಕೊಡಲಾಯಿತು. ಶಾಸಕ ಎಚ್.ಡಿ. ತಮ್ಮಯ್ಯ, ಜಿಪಂ ಸಿಇಓ ಕೀರ್ತನಾ, ಮಹಾಂತೇಶ ಭಜಂತ್ರಿ, ಸಿ. ರಂಗನಾಥ್, ಸಂತೋಷ್ ಇದ್ದರು.