ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಜೈ ಜವಾನ್-ಜೈ ಕಿಸಾನ್ ಎನ್ನುವ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಘೋಷಣೆ ನಮ್ಮೆಲ್ಲರಿಗೂ ಸದಾ ಪ್ರೇರಣಾ ಶಕ್ತಿಯಾಗಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ತಾಲೂಕಿನ ಈಸೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ದೇಶದ ಸಮಗ್ರತೆ, ಸೌರ್ವಭೌಮತ್ವ, ಅಖಂಡತೆಗೆ ರೈತ ಮತ್ತು ಯೋಧರ ನಿಸ್ವಾರ್ಥ ಸೇವೆ ಅಪ್ರತಿಮವಾದದ್ದು. ರೈತರ ಹಾಗೂ ಯೋಧರ ಸೇವೆ ನಾವೆಂದಿಗೂ ಮರೆಯಬಾರದು. ಅವರ ಜೀವನ ನಮಗೆಲ್ಲರಿಗೂ ಸದಾ ಪ್ರೇರಣೆಯಾಗಬೇಕು. ಜಮ್ಮು ಕಾಶ್ಮೀರದ ಹೃದಯ ಭಾಗದಲ್ಲಿರುವ ಅತಿ ಎತ್ತರದ ಪ್ರದೇಶವಾದ ಕಾರ್ಗಿಲ್ ಪ್ರದೇಶವನ್ನು ಶತ್ರು ರಾಷ್ಟ್ರ ಪಾಕಿಸ್ತಾನ ತನ್ನ ಕುತಂತ್ರ ಬುದ್ದಿಯಿಂದ ವಶಪಡಿಸಿಕೊಳ್ಳಲು ಹೊಂಚುಹಾಕಿ ಕೂತಿರುವ ಸಂದರ್ಭದಲ್ಲಿ ನಮ್ಮ ಯೋಧರು ಕೆಚ್ಚೆದೆಯಿಂದ ಹೋರಾಡಿ ಶತ್ರುಗಳನ್ನು ಹೊಡೆದೋಡಿಸಿದರು. ಈ ಸುಸಂದರ್ಭದ ಸ್ಮರಣೆ ಮಾಡುತ್ತಿರುವುದು ಸಂತಸದ ಜತೆಗೆ ಬ್ರಿಟೀಷರ ವಿರುದ್ಧ ಮೊದಲ ಸ್ವಾತಂತ್ರ್ಯ ಗ್ರಾಮ ಎಂದು ಘೋಷಣೆ ಮಾಡಿಕೊಂಡ ಈಸೂರು ಗ್ರಾಮದಲ್ಲಿ ಆಚರಿಸುತ್ತಿರುವುದು ಹೆಚ್ಚು ಸಂತಸ ತಂದಿದೆ ಎಂದರು.
ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ಗ್ರಾಮಸ್ಥರ ನೆನಪಿಗಾಗಿ ನಿರ್ಮಿಸಿರುವ ಸ್ಮಾರಕ ಭವನದ ಆವರಣದಲ್ಲಿ ನಿವೃತ್ತ ಯೋಧರಿಗೆ ಸನ್ಮಾನಿಸಿ ಗೌರವಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಂಜಿನ ಮೆರವಣಿಗೆ ನಡೆಸುವ ಮೂಲಕ ಅರ್ಥಗರ್ಭಿತವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಹನುಮಂತಪ್ಪ ಸಂಕ್ಲಾಪುರ, ಮುಖಂಡ ಗುರುಮೂರ್ತಿ, ಅಗಡಿ ಅಶೋಕ್, ಸುಧೀರ್ ಮಾರವಳ್ಳಿ, ವೀರಣ್ಣಗೌಡ, ನಾಗರಾಜ ಕೊರಲಹಳ್ಳಿ, ಹಾಲೇಶ್ ಚಿಂದಿ, ರೇಖಾ ಪಾಟೀಲ್, ಸತೀಶ್, ಸುರೇಶ್ ಉಜ್ಜಳ್ಳಿ, ಬೇಗೂರು ಶಿವಪ್ಪ, ಜಗದೀಶ್, ಹುಚ್ಚರಾಯಪ್ಪ, ಎ.ಪರಮೇಶ್ವರಪ್ಪ, ವೀರೇಂದ್ರ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.