ಸಾರಾಂಶ
ರಾಣಿಬೆನ್ನೂರು: 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಪರಿಕರ ಮಾರಾಟಗಾರರು ಗುಣಮಟ್ಟದ ಎಲ್ಲ ತರಹದ ಬಿತ್ತನೆ ಬೀಜ, ರಸಗೊಬ್ಬರಗಳನ್ನು ರೈತರಿಗೆ ಸಕಾಲಕ್ಕೆ ಮತ್ತು ಸರ್ಕಾರ ನಿಗದಿಪಡಿಸಿದ ದರದಲ್ಲಿ ಮಾರಾಟ ಮಾಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ಹೇಳಿದರು.
ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕೃಷಿ ಪರಿಕರ ಮಾರಾಟಗಾರರ ಸಭೆ ಹಾಗೂ ಸುರಕ್ಷಿತ ಕೀಟನಾಶಕ ಬಳಕೆ ಕುರಿತು ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೃಷಿ ಪರಿಕರ ಮಾರಾಟಗಾರರು ಪಿಓಎಸ್‌ನಲ್ಲಿ ಇರುವ ರಸಗೊಬ್ಬರದ ದಾಸ್ತಾನನ್ನು ತಮ್ಮ ಭೌತಿಕ ದಾಸ್ತಾನಿಗೆ ತಕ್ಕಂತೆ ನಿರ್ವಹಿಸಬೇಕು ಹಾಗೂ ಟಾಪ್-20 ಯೂರಿಯಾ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಇನ್ನು ಎರಡು ದಿನಗಳಲ್ಲಿ ದರಪಟ್ಟಿ ಮತ್ತು ದಾಸ್ತಾನು ವಿವರ ಪ್ರದರ್ಶನ ಮಾಡದಿದ್ದರೆ ಮಾರಾಟ ಪರವಾನಗಿಯನ್ನು 15 ದಿನಗಳಿಗೆ ಅಮಾನತಿನಲ್ಲಿ ಇಡಲಾಗುತ್ತದೆ ಎಂದು ಕೃಷಿ ಪರಿಕರ ಮಾರಾಟಗಾರರಿಗೆ ಸೂಚಿಸಿದರು.ಸಹಾಯಕ ಕೃಷಿ ನಿರ್ದೇಶಕ (ವಿಚಕ್ಷಣದಳ) ಶಿವಲಿಂಗಪ್ಪ ಮಾತನಾಡಿ, ಎಲ್ಲ ಕೃಷಿ ಕೃಷಿ ಪರಿಕರ ಮಾರಾಟಗಾರರು ತಾವು ಮಾರಾಟ ಮಾಡುವ ಬಿತ್ತನೆ ಬೀಜ, ಕೀಟನಾಶಕ ಮತ್ತು ರಸಗೊಬ್ಬರಗಳ ಪಿಸಿ ಮತ್ತು ಓ-ಫಾರ್ಮಮಗಳನ್ನು ತಮ್ಮ ಪರವಾನಗಿ ಪತ್ರದಲ್ಲಿ ನಮೂದಿಸಿಕೊಂಡು ಆನಂತರ ಮಾರಾಟ ಮಾಡಬೇಕು. ಕೃಷಿ ಪರಿಕರಗಳನ್ನು ಖರೀದಿಸಿದ ರೈತರಿಗೆ ಕಡ್ಡಾಯವಾಗಿ ಬಿಲ್ ನೀಡಬೇಕು ಎಂದರು.
ಕೃಷಿ ಪರಿಕರ ಮಾರಾಟಗಾರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಪಾಟೀಲ ಮಾತನಾಡಿ, ನಮ್ಮ ಕೃಷಿ ಪರಿಕರ ಮಾರಾಟಗಾರರು ಅಧಿಕಾರಿಗಳು ಸಭೆ ಕರೆದಾಗ ಸರಿಯಾದ ಸಮಯಕ್ಕೆ ಬರಬೇಕು. ತಾಲೂಕಿನ ಎಲ್ಲ ಕೃಷಿ ಪರಿಕರಗಳ ದರಪಟ್ಟಿ, ದಾಸ್ತಾನು ವಿವರಗಳನ್ನು ರೈತರಿಗೆ ಕಾಣಿಸುವಂತೆ ಪ್ರದರ್ಶಿಸಬೇಕು ಎಂದರು.ಕರ್ನಾಟಕ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ಕೃಷಿ ಪರಿಕರ ಮಾರಾಟಗಾರರು ರೈತರೊಂದಿಗೆ ಒಳ್ಳೆಯ ಒಡನಾಟ ಬೆಳೆಸಿಕೊಂಡು ರೈತರ ಶ್ರೇಯೋಭಿವೃದ್ಧಿಗೆ ಬದ್ಧರಾಗಿ ವ್ಯವಹರಿಸಬೇಕು ಎಂದರು.
ರೈತ ಸಂಘದ ಮುಖಂಡ ಈರಣ್ಣ ಹಲಗೇರಿ ಮಾತನಾಡಿ, ಕೃಷಿ ಪರಿಕರ ಮಾರಾಟಗಾರರು ತಮ್ಮಲ್ಲಿ ಯಾವುದಾದದರೂ ರಸಗೊಬ್ಬರ ಕೊರತೆ ಕಂಡು ಬಂದಲ್ಲಿ ಸಹಾಯಕ ಕೃಷಿ ನಿರ್ದೇಶಕರ ಗಮನಕ್ಕೆ ತರಬೇಕು. ನಮ್ಮ ರೈತ ಸಂಘಗಳು ಕೃಷಿ ಪರಿಕರ ಮಾರಾಟಗಾರರಿಗೆ ಸರ್ಕಾರದಿಂದ ರಸಗೊಬ್ಬರ ಪಡೆದುಕೊಳ್ಳಲು ಬೆಂಬಲ ನೀಡುವುದಾಗಿ ತಿಳಿಸಿದರು.ರೈತ ಸಂಘದ ಅಧ್ಯಕ್ಷ ಸುರೇಶ ಹೊನ್ನಪ್ಪಳವರ, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಶಿವಾನಂದ ಹಾವೇರಿ, ಅರವಿಂದ ಎ., ವೀರೇಶ ಜೆ.ಎಂ., ಜಗದೀಶ ಬಣಕಾರ ಉಪಸ್ಥಿತರಿದ್ದರು.