ಹಣಕ್ಕಾಗಿ ಪೀಡಿಸುತ್ತಿದ್ದ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಮಾರಾಟ ಮಾಡಿದ್ದಲ್ಲದೆ, ಪತ್ನಿಯನ್ನೂ ಕೊಲೆ ಮಾಡಿದ್ದಾನೆ ಎಂಬ ಗಂಭೀರ ಆರೋಪವನ್ನು ಆಕೆ ಪೋಷಕರು ಮಾಡಿದ್ದಾರೆ.
ಬಕ್ರೀದ್ ಹಬ್ಬದ ಪತ್ನಿ ಸಾವು: ಪೋಷಕರ ಆರೋಪ । ಚನ್ನರಾಯಪಟ್ಟಣದಲ್ಲಿ ಘಟನೆ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣಹಣಕ್ಕಾಗಿ ಪೀಡಿಸುತ್ತಿದ್ದ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಮಾರಾಟ ಮಾಡಿದ್ದಲ್ಲದೆ, ಪತ್ನಿಯನ್ನೂ ಕೊಲೆ ಮಾಡಿದ್ದಾನೆ ಎಂಬ ಗಂಭೀರ ಆರೋಪವನ್ನು ಆಕೆ ಪೋಷಕರು ಮಾಡಿದ್ದಾರೆ.
ಬಕ್ರೀದ್ ಹಬ್ಬದ ದಿನದಂದೇ ಗೃಹಿಣಿಯೊಬ್ಬರು ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಘಟನೆ ಬಳಿಕ ಪತಿ ಪರಾರಿಯಾಗಿದ್ದಾನೆ. ಮೃತ ಗೃಹಿಣಿಯನ್ನು ಗುಲ್ಕರ್ ಭಾನು (೩೩) ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಸಹೀಬು (೩೫) ವಿರುದ್ಧ ಮೃತಳ ಪೋಷಕರು ಕೊಲೆ ಆರೋಪ ಮಾಡಿದ್ದಾರೆ.ಘಟನೆಯ ವಿವರ:ಪಟ್ಟಣದ ಕಂಚಗಾರ ಬೀದಿಯಲ್ಲಿ ಬಕ್ರೀದ್ ಹಬ್ಬದ ದಿನ ಈ ದುರ್ಘಟನೆ ನಡೆದಿದೆ. ಗುಲ್ಕರ್ ಭಾನು ಹಾಗೂ ಸಹೀಬು ನಡುವೆ ಕಳೆದ ಹನ್ನೆರಡು ವರ್ಷಗಳ ಹಿಂದೆ ವಿವಾಹವಾಗಿತ್ತು. ಮದುವೆಯಾದ ಕೆಲ ವರ್ಷಗಳವರೆಗೆ ಚೆನ್ನಾಗಿಯೇ ಇದ್ದ ಈ ದಂಪತಿಯ ನಡುವೆ ಹಣದ ವಿಚಾರಕ್ಕೆ ಕಲಹ ಶುರುವಾಗಿತ್ತು.ಪತಿ ಸಹೀಬು ಹಣಕ್ಕಾಗಿ ಪ್ರತಿನಿತ್ಯ ಪತ್ನಿ ಗುಲ್ಕರ್ ಭಾನುಗೆ ಕಿರುಕುಳ ನೀಡುತ್ತಿದ್ದನು. ಕೇವಲ ಹಣದಾಸೆಗಾಗಿ ಈತ ತನ್ನ ಇಬ್ಬರು ಮಕ್ಕಳನ್ನು ಕೂಡ ಮಾರಾಟ ಮಾಡಿದ್ದಾನೆ ಎಂಬ ಆರೋಪವನ್ನು ಮೃತಳ ಪೋಷಕರು ಮಾಡಿದ್ದಾರೆ. ನಿರಂತರವಾಗಿ ಹಣಕ್ಕಾಗಿ ಪೀಡಿಸುತ್ತಿದ್ದ ಈತನೇ ಬಕ್ರೀದ್ ಹಬ್ಬದ ದಿನ ಪತ್ನಿಯನ್ನು ಕೊಲೆ ಮಾಡಿ, ಮನೆಯಲ್ಲಿಯೇ ಶವ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೋಷಕರು ದೂರಿದ್ದಾರೆ.ಪೊಲೀಸರ ಭೇಟಿ ಮತ್ತು ಪರಿಶೀಲನೆ:ಮನೆಯಲ್ಲಿ ಗುಲ್ಕರ್ ಭಾನು ಶವವಾಗಿ ಪತ್ತೆಯಾದ ಬಗ್ಗೆ ಮಾಹಿತಿ ಸಿಕ್ಕ ತಕ್ಷಣವೇ ನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ಬಳಿಕವಷ್ಟೇ ಸಾವು ಹೇಗೆ ಸಂಭವಿಸಿದೆ ಎಂಬುದರ ನಿಖರ ಕಾರಣ ತಿಳಿದುಬರಬೇಕಿದೆ.ಪ್ರಸ್ತುತ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಆರೋಪಿ ಪತಿ ಸಹೀಬುನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
