೨೦೨೫ರ ಏ. ೧೯ರಂದು ಮುಜರಾಯಿ ಇಲಾಖೆಯ ಕನಕಾಚಲಪತಿ ದೇವಸ್ಥಾನದ ತೆಂಗಿನಕಾಯಿ ಸಗಟು ವ್ಯಾಪಾರದ ಬಹಿರಂಗ ಹರಾಜಿನಲ್ಲಿ ಪ್ರತಿ ಕಾಯಿಗೆ ₹೩೦ ನಿಗದಿಪಡಿಸಲಾಗಿತ್ತು.

ಕನಕಗಿರಿ: ಇಲ್ಲಿನ ಶ್ರೀಕನಕಾಚಲಪತಿ ದೇವಸ್ಥಾನದ ತೆಂಗಿನಕಾಯಿಯನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿ ಭಕ್ತರ ಜೇಬಿಗೆ ಕತ್ತರಿ ಹಾಕುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳರಿಗೆ ಕರವೇ ಕಾರ್ಯಕರ್ತರು (ಶಿವರಾಮೇಗೌಡ) ಶುಕ್ರವಾರ ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿ ಮನವಿ ಸಲ್ಲಿಸಿದರು.

ಸಂಘಟನೆಯ ತಾಲೂಕಾಧ್ಯಕ್ಷ ಹರೀಶ ಪೂಜಾರ ಮಾತನಾಡಿ, ೨೦೨೫ರ ಏ. ೧೯ರಂದು ಮುಜರಾಯಿ ಇಲಾಖೆಯ ಕನಕಾಚಲಪತಿ ದೇವಸ್ಥಾನದ ತೆಂಗಿನಕಾಯಿ ಸಗಟು ವ್ಯಾಪಾರದ ಬಹಿರಂಗ ಹರಾಜಿನಲ್ಲಿ ಪ್ರತಿ ಕಾಯಿಗೆ ₹೩೦ ನಿಗದಿಪಡಿಸಲಾಗಿತ್ತು. ಆದರೆ,ಈಗ ದೇವಸ್ಥಾನದ ನಿಯಮ ಗಾಳಿಗೆ ತೂರಿ ₹೫೦ಗೆ ಮಾರಾಟ ಮಾಡುತ್ತಿದ್ದಾರೆ. ಹೆಚ್ಚಿನ ದರಕ್ಕೆ ತೆಂಗಿನಕಾಯಿ ಖರೀದಿಸಿರುವ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಅಧಿಕಾರಿಗಳು ನೆಪಕ್ಕೆ ಎನ್ನುವಂತೆ ಹರಾಜುದಾರರಿಗೆ ನೋಟಿಸ್ ನೀಡಿ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ತಿಳಿಸಿ ಕೈ ತೊಳೆದುಕೊಂಡಿದ್ದಾರೆ.

ಟೆಂಡರದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳದಿರುವುದಕ್ಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಭಕ್ತರಿಗೆ ಮೋಸ ಮಾಡುವ ಹರಾಜುದಾರರ ಮೇಲೆ ಕ್ರಮ ವಹಿಸಬೇಕು. ಪ್ಲಾಸ್ಟಿಕ್ ನಿಷೇಧವಿದ್ದರೂ ಏಕ ಬಳಕೆಯ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ ಬಳಸಲಾಗುತ್ತಿದೆ. ಹರಾಜು ಪಡೆದವರು ದೇವಸ್ಥಾನದ ಬ್ಯಾಂಕ್ ಖಾತೆಗೆ ಜಮೆಯಾಗಬೇಕಾದ ಹಣ ತುಂಬಿಸಿಕೊಳ್ಳಬೇಕೆಂದು ಕೋರಿದರು.

ಕಾರ್ಯಕರ್ತರಾದ ಬಸವರಾಜ ಕೋರಿ, ರವಿಕುಮಾರ ಪಾತ್ರದ ಇತರರಿದ್ದರು.