ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ಬಸವ ಜಯಂತಿ ನಿಮಿತ್ತ ಕರ್ನಾಟಕ ವಿವಿ ಬಸವೇಶ್ವರ ಪೀಠದಿಂದ ಮೇ 13, 14ರಂದು ಎರಡು ದಿನಗಳ ಕಾಲ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಮೇ 15ರಂದು ಬಸವೇಶ್ವರ ಪೀಠದ ಸುವರ್ಣ ಮಹೋತ್ಸವವನ್ನು ವಿವಿಯ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದೆ.ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ, ರಾಜ್ಯದಲ್ಲಿ ಸ್ಥಾಪನೆಯಾದ ಬಸವೇಶ್ವರ ಪೀಠ 50 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಮೂರು ದಿನಗಳ ಈ ಕಾರ್ಯಕ್ರಮ ದಾಸೋಹದ ಪರಿಕಲ್ಪನೆ ಆಧಾರದಲ್ಲಿ ನಡೆಯಲಿದೆ ಎಂದರು.
ಮೇ 13ರಂದು ಬೆಳಗ್ಗೆ 10ಕ್ಕೆ ಮುಂಡರಗಿ ತೋಂಟದಾರ್ಯ ಮಠದ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ರವಿಶಂಕರ ಬೋಪಲಾಪುರ ಉದ್ಘಾಟಿಸುವರು. ಅತಿಥಿಗಳಾಗಿ ಸಾಹಿತಿ ಗೋ.ರು. ಚೆನ್ನಬಸಪ್ಪ, ಡಾ. ನೀರಜ ಪಾಟೀಲ ಆಗಮಿಸುವರು. ನಂತರದಲ್ಲಿ ಎರಡು ದಿನಗಳ ಕಾಲ ನಡೆಯುವ ವಿವಿಧ ಗೋಷ್ಠಿಗಳಲ್ಲಿ ಸಂಸ್ಕೃತಿಯ ಪರಿಕಲ್ಪನೆ, ಸಾಂಸ್ಕೃತಿಕ ನಾಯಕನ ಗುಣಲಕ್ಷಣಗಳು, ಬಸವಣ್ಣನವರು ರೂಪಿಸಿದ ಶರಣ ಸಂಸ್ಕೃತಿ, ಬಸವಣ್ಣನವರ ಬಹುಮುಖ ವ್ಯಕ್ತಿತ್ವ, ಬಸವಣ್ಣನವರ ವಚನಗಳಲ್ಲಿ ಮನೋವಿಜ್ಞಾನ, ಸೇರಿ ವಿವಿಧ ವಿಷಯಗಳ ಕುರಿತು ಸುಮಾರು 16 ಜನ ಪಂಡಿತರು ಮಾತನಾಡಲಿದ್ದಾರೆ ಎಂದರು.ಮೇ 14ರಂದು ಮಧ್ಯಾಹ್ನ 3ಕ್ಕೆ ವಿಚಾರ ಸಂಕಿರಣ ಸಮಾರೋಪ ನಡೆಯಲಿದ್ದು, ಡಾ. ವೀರಣ್ಣ ರಾಜೂರ ಸಮಾರೋಪ ನುಡಿಗಳನ್ನಾಡುವರು. ಅತಿಥಿಗಳಾಗಿ ಡಾ. ನಿಜಲಿಂಗಪ್ಪ ಮಟ್ಟಿಹಾಳ, ಡಾ. ಸಿ. ಕೃಷ್ಣಮೂರ್ತಿ ಆಗಮಿಸಲಿದ್ದಾರೆ. ಕವಿವಿ ಕುಲಸಚಿವ ಡಾ. ಎ.ಚನ್ನಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
15ರಂದು ಸುವರ್ಣ ಮಹೋತ್ಸವ..ಮೇ 15ರಂದು ಬೆಳಗ್ಗೆ 10 ಗಂಟೆಗೆ ಸುವರ್ಣ ಮಹೋತ್ಸವ ಭವನದಲ್ಲಿ ಬಸವ ಜಯಂತಿ ಹಾಗೂ ಬಸವೇಶ್ವರ ಪೀಠದ ಸುವರ್ಣ ಮಹೋತ್ಸವಕ್ಕೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಚಾಲನೆ ನೀಡುವರು. ಡಾ. ತೋಂಟದ ಸಿದ್ದರಾಮ ಸ್ವಾಮೀಜಿ, ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಶ್ರೀ ಬಸವಲಿಂಗ ಪಟ್ಟದ್ದೇವರು, ಶ್ರೀ ನೀಲಕಂಠ ಸ್ವಾಮೀಜಿ, ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಗುರುಮಹಾಂತ ಸ್ವಾಮೀಜಿ, ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯ ವಹಿಸುವರು. ಅರವಿಂದ ಜತ್ತಿ, ಡಾ. ಸಿಎಚ್. ವಿಎಸ್.ವಿ. ಪ್ರಸಾದ ಅತಿಥಿಗಳಾಗಿ ಆಗಮಿಸುವರು ಎಂದರು.
ಇದಕ್ಕೂ ಪೂರ್ವದಲ್ಲಿ ಕವಿವಿ ಮುಖ್ಯ ಕಟ್ಟಡದಿಂದ ಸುವರ್ಣ ಮಹೋತ್ಸವ ಭವನದ ವರೆಗೆ ಏರ್ಪಡಿಸಿರುವ ಮೆರವಣಿಗೆಯಲ್ಲಿ ವಿದ್ಯಾರ್ಥಿನಿಯರು ವಚನ ಕುಂಭ ಮೇಳದಲ್ಲಿ ಬಸವೇಶ್ವರ ವಚನಗಳ ಪಠಣ ಮಾಡಲಿದ್ದಾರೆ. ವಿವಿಧ ಬಗೆಯ 15 ಪುಸ್ತಕಗಳ ಲೋಕಾರ್ಪಣೆ, ವಚನ ಬ್ಯಾಂಕ್, ಬಸವೇಶ್ವರ ಪೀಠದ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಮೌಲ್ಯಮಾಪನ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ, ಬಸವ ಪೀಠದ ಸಂಯೋಜಕ ಡಾ. ಸಿ.ಎಂ.ಕುಂದಗೋಳ, ಡಾ.ಬಿ.ಎಚ್.ನಾಗೂರ, ಡಾ.ಜೆ.ಎಂ. ಚಂದುನವರ, ಡಾ. ಸಂಜಯಕುಮಾರ ಮಾಲಗತ್ತಿ, ಡಾ.ಕಿರಣ ಬನ್ನಿಗೊಳ, ಡಾ.ಪ್ರಭಾಕರ ಕಾಂಬಳೆ ಇದ್ದರು.ಟಾಪ್ ವಿವಿಗಳ ಪಟ್ಟಿಯಲ್ಲಿ ಕವಿವಿ
ಧಾರವಾಡ: ಲಂಡನ್ ಮೂಲದ ದಿ ಟೈಮ್ಸ್ ಹೈಯರ್ ಎಜ್ಯುಕೇಶನ್ ಮ್ಯಾಗಝೀನ್ ಪ್ರಸಕ್ತ ಸಾಲಿಗೆ (2024) ಏಷಿಯಾದ ಟಾಪ್ ವಿಶ್ವ ವಿದ್ಯಾಲಯಗಳ ಪಟ್ಟಿಬಿಡುಗಡೆ ಮಾಡಿದ್ದು, ರಾಜ್ಯದ 19 ಸರ್ಕಾರಿ ವಿವಿಗಳಲ್ಲಿ ಕವಿವಿ ಮೊದಲ ಸ್ಥಾನ ಪಡೆದಿದೆ ಎಂದು ಪ್ರೊ. ಕೆ.ಬಿ. ಗುಡಸಿ ತಿಳಿಸಿದರು.ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು, ಏಷಿಯಾದ ಒಟ್ಟು 31 ರಾಷ್ಟ್ರಗಳ ವಿಶ್ವ ವಿದ್ಯಾಲಯಗಳ ಬೊಧನೆ, ಸಂಶೋಧನೆ ಪರಿಸರ ಮತ್ತು ಗುಣಮಟ್ಟ, ಕೈಗಾರಿಕೆ ಮತ್ತು ಅಂತಾರಾಷ್ಟ್ರೀಯ ದೃಷ್ಟಿಕೋನ ಸೇರಿ ಒಟ್ಟು ಪ್ರಮುಖ ಐದು ವಿಷಯ ಮಾಪನ ಒಳಗೊಂಡ 18 ಸೂಚ್ಯಂಕಗಳ ಮಾನದಂಡಗಳಲ್ಲಿ ಜಾಗತಿಕ ವಿಶ್ವ ವಿದ್ಯಾಲಯಗಳ 3.0 ಸಂಶೋಧನಾ ಪದ್ಧತಿಯಲ್ಲಿ ಸಂಸ್ಥೆಗಳನ್ನು ಸರ್ವೆ ಮಾಡಲಾಗಿದೆ ಎಂದರು.ಕರ್ನಾಟಕದ ಮೈಸೂರು ವಿವಿ ಸೇರಿ ಇತರ ಅನೇಕ ಖಾಸಗಿ ವಿವಿಗಳನ್ನು ಹಿಂದಿಕ್ಕಿರುವ ಕವಿವಿ ಉತ್ತಮ ರ್‍ಯಾಂಕಿಂಗ್ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಪ್ರೊ. ಕೆ.ಬಿ. ಗುಡಸಿ ಸಂತಸ ವ್ಯಕ್ತಪಡಿಸಿದರು.