ಸಾರಾಂಶ
ಮಾಧ್ಯಮಗೋಷ್ಠಿ । ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ । ಸಾರ್ವಜನಿಕರಿಂದ ಸಲಹೆ ಆಹ್ವಾನ
ಕನ್ನಡಪ್ರಭ ವಾರ್ತೆ ಹಾಸನಹಾಸನ ಜಿಲ್ಲೆಯ ಸಮಗ್ರ ಮತ್ತು ಸಮರ್ಪಕ ಅಭಿವೃದ್ಧಿಯ ಕುರಿತು ಬೃಹತ್ ವಿಚಾರ ಸಂಕಿರಣ ಮತ್ತು ಪೂರ್ವಭಾವಿ ವಿಚಾರಗೋಷ್ಠಿಗಳು ಹಾಗೂ ಪ್ರಬಂಧ ಸ್ಪರ್ಧೆಯನ್ನು ಅ.೨೦ರಂದು ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ತಿಳಿಸಿದರು.
ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಹಾಸನ ಜಿಲ್ಲೆಯ ಕೃಷಿ, ಪರಿಸರ ಉಳಿಸಿ, ಕೈಗಾರಿಕೆಗಳನ್ನು ಸ್ಥಾಪಿಸಿ, ವಾಣಿಜ್ಯ ಮತ್ತು ಉದ್ಯೋಗ ಸೃಷ್ಟಿಸಿ ಎಂಬ ಘೋಷಣೆಯ ಅಡಿಯಲ್ಲಿ ಹಾಸನ ಜಿಲ್ಲೆಯ ಸಮಗ್ರ ಮತ್ತು ಸಮರ್ಪಕ ಅಭಿವೃದ್ಧಿಯ ಕುರಿತು ಅ.೨೦ರಂದು ಹಾಸನದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬೃಹತ್ ವಿಚಾರ ಸಂಕಿರಣ ಆಯೋಜಿಸಲಾಗುತ್ತಿದೆ. ಈ ಬೃಹತ್ ವಿಚಾರ ಸಂಕಿರಣದಲ್ಲಿ ಕೃಷಿ, ಪರಿಸರ, ಕೈಗಾರಿಕೆ ಮತ್ತು ವಾಣಿಜ್ಯದ ವಿಷಯಗಳ ತಜ್ಞರು ಹಾಗೂ ಸಾಮಾಜಿಕ ಮತ್ತು ಆರ್ಥಿಕ ಚಿಂತಕರಿಂದ ಹಾಸನ ಜಿಲ್ಲೆಗೆ ಸಂಬಂಧಿಸಿದ ಸಂಶೋಧನೆ ಮತ್ತು ಅಧ್ಯಯನದ ಆಧಾರದಲ್ಲಿ ಸಿದ್ಧಪಡಿಸಿದ ವಿಷಯಗಳ ಪ್ರಬಂಧ ಮಂಡನೆ, ಸಂವಾದ ಮತ್ತು ಚರ್ಚಾಗೋಷ್ಠಿಗಳನ್ನು ನಡೆಸಲಾಗುವುದು ಎಂದು ಹೇಳಿದರು.ಈ ಬೃಹತ್ ವಿಚಾರ ಸಂಕಿರಣಕ್ಕೆ ಜಿಲ್ಲೆಯ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಜಿಲ್ಲಾಡಳಿತದ ಪ್ರಮುಖ ಅಧಿಕಾರಿಗಳು, ಜಿಲ್ಲೆಯ ಕೃಷಿ, ವಾಣಿಜ್ಯ, ಕೈಗಾರಿಕೆ ಹಾಗೂ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದ ಪ್ರಮುಖರು, ಜಿಲ್ಲೆಯ ಪ್ರಮುಖ ದಲಿತ, ರೈತ, ಕಾರ್ಮಿಕ, ಪರಿಸರ ಮತ್ತು ಜನಪರ ಚಳವಳಿಗಳ ಮುಖಂಡರನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.
ಇದರ ಜತೆಗೆ ಈ ಬೃಹತ್ ವಿಚಾರ ಸಂಕಿರಣದ ಪೂರ್ವಭಾವಿಯಾಗಿ ಮತ್ತು ಸಿದ್ಧತೆಗಾಗಿ ಜಿಲ್ಲೆಯ ವಿವಿಧ ಪ್ರದೇಶ ಮತ್ತು ಸ್ಥಳಗಳಲ್ಲಿ ಜಿಲ್ಲೆಯ ಕೃಷಿ ಕ್ಷೇತ್ರದ ಪರಿಸ್ಥಿತಿ ಮತ್ತು ಅಭಿವೃದ್ಧಿಯಾಗಿರುವ ಸಾಧ್ಯತೆಗಳು, ಜಿಲ್ಲೆಯಲ್ಲಿ ಕೈಗಾರಿಕೆ, ವಾಣಿಜ್ಯಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗಿರುವ ಸಾಧ್ಯತೆಗಳು, ಲಿಂಗ ಅಸಮಾನತೆ ಮತ್ತು ಮಹಿಳೆಯರ ಘನತೆ ಮತ್ತು ಅಭಿವೃದ್ಧಿಗಿರುವ ಸಂಬಂಧ, ಪರಿಸರ ಸಂರಕ್ಷಣೆ, ಕಾಡು ಪ್ರಾಣಿ- ಮಾನವ ಸಂಘರ್ಷ ಮತ್ತು ಅಭಿವೃದ್ಧಿ, ಕಾಫಿ, ತೆಂಗು, ಕಬ್ಬು, ಆಲೂಗೆಡ್ಡೆ ಮತ್ತು ಕೃಷಿ ವಾಣಿಜ್ಯಾಭಿವೃದ್ಧಿ ಹಾಗೂ ಹಾಸನ ಜಿಲ್ಲೆಯಲ್ಲಿನ ಸಾಮಾಜಿಕ ಮತ್ತು ಆರ್ಥಿಕ ತಾರತಮ್ಯದ ಪ್ರಶ್ನೆಗಳು ಕುರಿತಾದ ವಿಚಾರಗೋಷ್ಠಿಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.ಜತೆಗೆ ಹಾಸನ ಜಿಲ್ಲೆಯಲ್ಲಿ ಕೃಷಿ, ಕೈಗಾರಿಕೆ ವಾಣಿಜ್ಯಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗಿರುವ ಸಾಧ್ಯತೆಗಳು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗುತ್ತಿದ್ದು, ಅತ್ಯುತ್ತಮ ಪ್ರಬಂಧಗಳನ್ನು ಬರೆದ ವಿದ್ಯಾರ್ಥಿಗಳಿಗೆ ಅದೇ ದಿನ ಬಹುಮಾನ ನೀಡಲಾಗುವುದು. ಸಾರ್ವಜನಿಕರು ಮತ್ತು ಸಂಘ- ಸಂಸ್ಥೆಗಳಿಂದಲೂ ಕೂಡ ಹಾಸನ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಭಿಪ್ರಾಯ ಮತ್ತು ಸಲಹೆಗಳನ್ನು ಆಹ್ವಾನಿಸಿದ್ದು ಉಪಯುಕ್ತ ಅಭಿಪ್ರಾಯ ಮತ್ತು ಸಲಹೆಗಳನ್ನು ವಿಚಾರ ಸಂಕಿರಣದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.
ಸಿಐಟಿಯು ಕಾರ್ಯದರ್ಶಿ ಸೌಮ್ಯ, ಕೆ.ಪಿ.ಆರ್.ಎಸ್. ಅಧ್ಯಕ್ಷ ಎಚ್.ಆರ್. ನವೀನ್ ಕುಮಾರ್, ಎಸ್.ಎಫ್.ಐ. ಕಾರ್ಯದರ್ಶಿ ರಮೇಶ್, ಡಿವೈಎಫ್ ಐ ಕಾರ್ಯದರ್ಶಿ ಎಂ.ಜಿ.ಪೃಥ್ವಿ, ಡಿ.ಎಚ್.ಎಸ್. ರಾಜು ಸಿಗನೂರು ಇತರರು ಇದ್ದರು.