ರಮಾಬಾಯಿ ಹುಟ್ಟುಹಬ್ಬದ ಅಂಗವಾಗಿ ಇಂದು ವಿಚಾರಗೋಷ್ಠಿ

| Published : Feb 07 2024, 01:45 AM IST

ರಮಾಬಾಯಿ ಹುಟ್ಟುಹಬ್ಬದ ಅಂಗವಾಗಿ ಇಂದು ವಿಚಾರಗೋಷ್ಠಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪತ್ನಿ ರಮಾಬಾಯಿ ಅವರ ೧೨೫ನೇ ಹುಟ್ಟುಹಬ್ಬದ ಅಂಗವಾಗಿ ರಮಾಬಾಯಿ ಅಂಬೇಡ್ಕರ್ ೧೨೫ ದಿನಗಳ ರಂಗಜಾಥಾ ಹಾಗೂ ವಿಚಾರಗೋಷ್ಠಿಯನ್ನು ಫೆ.೭ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪತ್ನಿ ರಮಾಬಾಯಿ ಅವರ ೧೨೫ನೇ ಹುಟ್ಟುಹಬ್ಬದ ಅಂಗವಾಗಿ ರಮಾಬಾಯಿ ಅಂಬೇಡ್ಕರ್ ೧೨೫ ದಿನಗಳ ರಂಗಜಾಥಾ ಹಾಗೂ ವಿಚಾರಗೋಷ್ಠಿಯನ್ನು ಫೆ.೭ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರಿನ ಸಂಸ ಥಿಯೇಟರ್, ರಂಗ ಧರ್ಮ ಸಾಂಸ್ಕೃತಿಕ ಸಂಸ್ಥೆ ಮತ್ತು ನಗರದ ರಂಗವಾಹಿನಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಬೆಳಗ್ಗೆ ೧೦ ಗಂಟೆಗೆ ನಗರದ ಡಾ.ರಾಜಕುಮಾರ್ ರಂಗಮಂದಿರದಲ್ಲಿ ಜಾಥಾಗೆ ಚಾಲನೆ ದೊರಕಲಿದೆ ಎಂದು ಬೆಂಗಳೂರಿನ ಸಂಸ ಥಿಯೇಟರ್‌ನ ಸಂಚಾಲಕ ಸಿ.ಎಂ.ಸುರೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಂಸ್ಕೃತಿ ಚಿಂತಕ ಕೋಟಗಾನಹಳ್ಳಿ ರಾಮಯ್ಯ ಜಾಥಾಗೆ ಚಾಲನೆ ನೀಡುವರು. ರೈತ ಸಂಘದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸುವರು. ತುಳಸಮ್ಮ, ಹೊನ್ನಮ್ಮ, ಚಿನ್ನಮ್ಮ ಮತ್ತು ಸಂಗಡಿಗರಿಂದ ಜನಪದ ಗಾಯನ ನಡೆಯಲಿದೆ ಎಂದರು. ಮಧ್ಯಾಹ್ನ ೧೨ ಗಂಟೆಗೆ ಮೊದಲ ಗೋಷ್ಠಿ ನಡೆಯಲಿದ್ದು ‘ಅಂಬೇಡ್ಕರ್ ಅವರ ಜೀವನದಲ್ಲಿ ರಮಾಬಾಯಿ ಅವರ ಪಾತ್ರ’ ಕುರಿತು ಚಿಂತಕ ಡಾ.ಎಂಎನ್ ಕವಿತಾ, ಲೇಖಕ ಗಿರಿಯಪ್ಪ ಧಮ್ಮಪ್ರಿಯ ವಿಚಾರ ಮಂಡಿಸುವರು. ಸಾಹಿತಿ ಮಂಜುಕೋಡಿ ಉಗನೆ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಮಧ್ಯಾಹ್ನ ೨.೩೦ ಗಂಟೆಗೆ ೨ನೇ ವಿಚಾರಗೋಷ್ಠಿ ನಡೆಯಲಿದ್ದು, ರಂಗಭೂಮಿಯಲ್ಲಿ ‘ಅಂಬೇಡ್ಕರ್ ಹಾಗೂ ರಮಾಬಾಯಿ ಅವರ ಪಾತ್ರಗಳ ಅವಲೋಕನ’ ವಿಷಯವಾಗಿ ರಂಗನಿದೇಶಕ ಮಹದೇವ ಹಡಪದ, ಚಿಂತಕ ಡಾ.ಬಿ.ಎನ್.ದಿನಮಣಿ ಮಾತನಾಡಲಿದ್ದಾರೆ. ಚಿಂತಕ ಡಾ.ಎಲ್.ಎನ್.ಮುಕುಂದರಾಜ್ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಸಂಜೆ ೫ ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ. ಬೆಂಗಳೂರು ಲೇಖಕಿಯರ ಸಂಘದ ರಾಜ್ಯಾಧ್ಯಕ್ಷೆ ಡಾ.ಎಚ್.ಎಲ್.ಪುಷ್ಪಾ ಸಮಾರೋಪ ಭಾಷಣ ಮಾಡಲಿದ್ದಾರೆ. ವಿಶ್ರಾಂತ ಕುಲಪತಿ ಪ್ರೊ.ಮಹದೇವ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು. ಸಂಜೆ ೬.೩೦ ಗಂಟೆಗೆ ಸಿದ್ದರಾಮ ಕಾರಣಿಕ ರಚಿಸಿರುವ ಮಿಸಸ್ ಅಂಬೇಡ್ಕರ್ ನಾಟಕವ ಪ್ರದರ್ಶಿಸಲಾಗುವುದು. ಈ ನಾಟಕ ಎಪ್ರಿಲ್ ೧೪ ರಿಂದ ಆಗಸ್ಟ್ ೧೫ ರವರೆಗೆ ರಾಜ್ಯಾದ್ಯಂತ ಪ್ರದರ್ಶನಗೊಳ್ಳಲಿದೆ. ಎಂದು ತಿಳಿಸಿದರು. ಗೋಷ್ಠಿಯಲ್ಲಿ ಜನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ, ಮುಖಂಡರಾದ ಸರ್ವೇಶ್, ಸುಭಾಷ್ ಮಾಡ್ರಹಳ್ಳಿ, ದೊಡ್ಡಗವಿ ಬಸಪ್ಪ, ರಮೇಶ್, ವಾಸು ಹಾಜರಿದ್ದರು.