ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಸಾವಿರಾರು ಹಳೆಯ ಐತಿಹಾಸಿಕ ದಾಖಲೆಗಳನ್ನು ಹಾಗೂ ವರದಿಗಳನ್ನು ಇತ್ತೀಚೆಗೆ ಡಿಜಿಟಲೀಕರಣಗೊಳಿಸಲಾಗಿದೆ ಎಂದು ಮೈಸೂರು ವಿಭಾಗೀಯ ಪತ್ರಾಗಾರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ್ ಹೇಳಿದರು.ನಗರದ ಎಸ್.ಬಿ.ಆರ್.ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ ಮತ್ತು ಪಾರಂಪರಿಕ ಕೂಟ ಹಾಗೂ ಕರ್ನಾಟಕ ರಾಜ್ಯ ವಿಭಾಗೀಯ ಪತ್ರಾಗಾರ ಕಚೇರಿ ಸಹಯೋಗದಲ್ಲಿ ಚಾರಿತ್ರಿಕ ದಾಖಲೆಗಳ ಮಹತ್ವ ಮತ್ತು ಉಪಯೋಗ ವಿಷಯ ಕುರಿತು ವಿಶೇಷ ಉಪನ್ಯಾಸ ಮತ್ತು ಸಂವಾದ ಏರ್ಪಡಿಸಲಾಗಿತ್ತು.ಈ ದಾಖಲೆಗಳು ಆಸಕ್ತ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಹಾಗೂ ಇತಿಹಾಸಕ್ತರಿಗೆ ಅತ್ಯಾಮೂಲ್ಯ ಪ್ರಾಥಮಿಕ ಅಧ್ಯಯನ ಸಾಮಗ್ರಿಗಳಾಗಿದ್ದು, ಇದುವರೆವಿಗೂ ಪ್ರಕಟವಾಗದಿರುವ ಹಲವು ವಿಷಯಗಳು ಹಾಗೂ ಮಾಹಿತಿಗಳು ಈ ದಾಖಲೆಗಳಿಂದ ಸಿಗುತ್ತವೆ. ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಈ ದಾಖಲೆಗಳನ್ನು ಸಮರ್ಥವಾಗಿ ಹಾಗೂ ಸಮರ್ಪಕವಾಗಿ ಬಳಸಿಕೊಳ್ಳುವ ಆಸಕ್ತಿ ಮತ್ತು ಮನಸ್ಸನ್ನು ಬೆಳೆಸಿಕೊಳ್ಳಬೇಕು ಎಂದರು.ಮೂಲಾಧಾರಗಳಿಲ್ಲದೆ ಇತಿಹಾಸವಿಲ್ಲ. ತಮ್ಮ ಇಲಾಖೆಯಲ್ಲಿ ಇದುವರೆವಿಗೂ ಸಂಗ್ರಹಿಸಿರುವ ಸಾವಿರಾರು ಸಂಖ್ಯೆಯ ಪ್ರಾಥಮಿಕ ಹಾಗೂ ದ್ವಿತೀಯ ಚಾರಿತ್ರಿಕ ಮೂಲಾಧಾರಗಳ ಬಗ್ಗೆ ಮಾಹಿತಿ ನೀಡಿದರು.ಐತಿಹಾಸಿಕ ದಾಖಲೆಗಳು ಈ ನಾಡಿನ ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕೈಗನ್ನಡಿಯಾಗಿದ್ದು, ಪ್ರಕಟಿತ ಹಾಗೂ ಅಪ್ರಕಟಿತ ದಾಖಲೆಗಳಾದ ಮೈಸೂರು ಆಡಳಿತ ವರದಿಗಳು, ಗೆಜೆಟಿಯರ್ ಗಳು, ಪ್ರೊಸಿಡಿಂಗ್ಸ್ ಗಳು, ವಾರ್ಷಿಕ ವರದಿಗಳು, ಆದೇಶಗಳು, ಸೆನ್ಸಸ್ ವರದಿಗಳು, ಕಡತಗಳು, ಖಾಸಗಿ ದಾಖಲೆಗಳು, ಪತ್ರಿಕೆಗಳು ಹಾಗೂ ಚಾರಿತ್ರಿಕ ಬರವಣಿಗೆಯ ಸಂಪೂರ್ಣ ದಾಖಲೆಗಳನ್ನು ನಮ್ಮ ವಿಭಾಗೀಯ ಪತ್ರಾಗಾರ ಕಚೇರಿಯಲ್ಲಿ ಸಂರಕ್ಷಿಸಿ ಇಡಲಾಗಿದೆ ಎಂದರು.ಸರ್ಕಾರದ ವಿವಿಧ ಇಲಾಖೆಗಳು ಇಂದಿಗೂ ತಮಗೆ ಅತ್ಯಗತ್ಯವಾದ ಅಪರೂಪದ ದಾಖಲೆಗಳನ್ನು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಹಾಗೂ ವಿಭಾಗೀಯ ಪತ್ರಾಗಾರ ಕಚೇರಿಯಿಂದ ಪಡೆಯುತ್ತಾರೆ. ನೂರಾರು ವರ್ಷಗಳ ಭೂ ದಾಖಲೆ, ಆಡಳಿತ ವರದಿ, ಆದೇಶ, ಜ್ಞಾಪನಾಪತ್ರ, ಸುತ್ತೋಲೆ, ರಾಜಾದೇಶ, ಸಾಮಾನ್ಯ ಪತ್ರಗಳು ಸೇರಿದಂತೆ ನೂರಾರು ವರ್ಷಗಳ ಅತ್ಯಮೂಲ್ಯವಾದ ಅಪ್ರಕಟಿತಮಾಹಿತಿಗಳು ಇಲಾಖೆಯಲ್ಲಿ ಲಭ್ಯವಿರುತ್ತವೆ ಎಂದು ಅವರು ತಿಳಿಸಿದರು.ಇಲಾಖೆಯಲ್ಲಿ ಇದುವರೆವಿಗೂ ಡಿಜಿಟಲೀಕರಣ ಮೂಲಕ ಸಂರಕ್ಷಿಸಿರುವ ಮೂಲ ದಾಖಲೆಗಳನ್ನು ಪ್ರಯೋಗಿಕವಾಗಿ ವಿದ್ಯಾರ್ಥಿಗಳಿಗೆ ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪತ್ರಾಗಾರ ಸಂರಕ್ಷಣೆಯ ಮಹತ್ವ ಮತ್ತು ಉಪಯೋಗಗಳನ್ನು ತಿಳಿಸಿಕೊಟ್ಟರು.ಶಾಂತಿ ಮತ್ತು ತಿಳುವಳಿಕೆ ವೇದಿಕೆ ಸಹಯೋಗದಲ್ಲಿ ಹಿರೋಶಿಮಾ ಮತ್ತು ನಾಗಾಸಾಕಿ ದುರಂತದ ಭೀಕರತೆಯನ್ನು ಸಾರುವ ಅಪರೂಪದ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ, ಶೈಕ್ಷಣಿಕ ಡೀನ್ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಚ್. ಶ್ರೀಧರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆರ್. ರಮೇಶ್, ಪ್ರಾಧ್ಯಾಪಕರಾದ ಎ.ಆರ್. ನಂದೀಶ, ಡಾ. ಎಂ.ಆರ್. ಇಂದ್ರಾಣಿ, ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ಇತಿಹಾಸ ವಿಷಯದ ವಿದ್ಯಾರ್ಥಿಗಳು ಇದ್ದರು.