ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಹಿರಿಯ ರಾಜಕಾರಣಿ, ಬಿಜೆಪಿ ಹಿರಿಯ ನಾಯಕ, ವೀರಶೈವ ಸಮಾಜದ ಮುಖಂಡರಾದ ಚೌಡಹಳ್ಳಿ ಸಿ.ಎಂ.ಶಿವಮಲ್ಲಪ್ಪ (೮೬) ಗುರುವಾರ ಮುಂಜಾನೆ ನಿಧನರಾದರು.ಮೃತರಿಗೆ ಪತ್ನಿ ಶಿವಮ್ಮ, ಪುತ್ರ ಜಿಲ್ಲಾ ಬಿಜೆಪಿ ಅಧ್ಯಕ್ಷರೂ ಆದ ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್, ಪುತ್ರಿಯರಾದ ಗಾಯತ್ರಿ, ನಾಗವೇಣಿ, ಮಾಲ, ರೂಪ, ಶಿವಾಕ್ಷಿ, ಸೊಸೆ ಸವಿತಾ ನಿರಂಜನ್ ಕುಮಾರ್, ಅಳಿಯ ಬಿಜೆಪಿ ಮುಖಂಡ ಕಲ್ಮಳ್ಳಿ ಶಿವಕುಮಾರ್, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರು ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಗಿನ ಜಾವ ನಿಧನರಾಗಿದ್ದು, ಮೈಸೂರು ನಿವಾಸ ಹಾಗೂ ಗುಂಡ್ಲುಪೇಟೆ ಪಟ್ಟಣದ ಸಿಎಂಎಸ್ ಕಲಾ ಮಂದಿರದಲ್ಲಿ ಸಾರ್ವಜನಿಕರು ಅಂತಿಮ ದರ್ಶನ ಪಡೆದರು.
ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ವಿಧಾನ ಕಲಾಪದಿಂದ ನೇರವಾಗಿ ಆಗಮಿಸಿ ಮೃತರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ. ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಬಿಜೆಪಿ ಮುಖಂಡರಾದ ಅಮ್ಮನಪುರ ಮಲ್ಲೇಶ್, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್, ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ, ಮೈಮುಲ್ ಮಾಜಿ ಅಧ್ಯಕ್ಷ ಎನ್.ಮಹದೇವಪ್ಪ, ಹಾಪ್ ಕಾಮ್ಸ್ ಜಿಲ್ಲಾಧ್ಯಕ್ಷ ಕೆ.ಆರ್.ಲೋಕೇಶ್, ತಾಲೂಕು ಅಧ್ಯಕ್ಷ ಎಂ.ನಾಗೇಶ್, ಪುರಸಭೆ ಅಧ್ಯಕ್ಷ ಮಧು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೃಷಬೇಂದ್ರಪ್ಪ, ಪುರಸಭೆ ಮಾಜಿ ಅಧ್ಯಕ್ಷ ಪಿ.ಗಿರೀಶ್, ರಮೇಶ್,ಎಲ್.ಸುರೇಶ್, ಮಾಜಿ ಪ್ರಧಾನ ಶಿವಪುರ ಸುರೇಶ್, ಪುರಸಭೆ ಮಾಜಿ ಸದಸ್ಯ ಎಸ್.ಗೋವಿಂದರಾಜನ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಎಂ.ಮುನಿರಾಜು, ಪಿ.ಬಿ.ರಾಜಶೇಖರ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆಲತ್ತೂರು ಜಯರಾಂ, ಜಿಲ್ಲಾ ಕ್ರಷರ್ ಹಾಗೂ ಕ್ವಾರಿ ಮಾಲಿಕರ ಸಂಘದ ಅಧ್ಯಕ್ಷ ಆರ್.ಮಧುಕುಮಾರ್, ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಶೈಲಕುಮಾರ್, ತಾಪಂ ಮಾಜಿ ಸದಸ್ಯ ಬೆಟ್ಟಹಳ್ಳಿ ಕೆಂಪರಾಜು, ಮಂಡಲ ಅಧ್ಯಕ್ಷ ಸಿ.ಮಹದೇವಪ್ರಸಾದ್, ಮಾಜಿ ಅಧ್ಯಕ್ಷ ಡಿ.ಪಿ.ಜಗದೀಶ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಸಿ.ಮಹದೇವಸ್ವಾಮಿ, ಎಲ್‌ಐಸಿ ಗುರು, ಬಿಜೆಪಿ ಮುಖಂಡರಾದ ಕೆ.ರಾಜೇಶ್, ನವೀನ್ ಮೌರ್ಯ, ಅಶ್ವಿನ್ ಜಿ ರಾಜನ್, ಎಂ.ಪ್ರಣಯ್ ಸಂತಾಪ ಸೂಚಿಸಿದ್ದಾರೆ.ಇಂದು ಅಂತ್ಯಕ್ರಿಯೆ:
ಮೃತ ಸಿ.ಎಂ.ಶಿವಮಲ್ಲಪ್ಪರ ಅಂತ್ಯಕ್ರಿಯೆ ಮಾ.೨೧ರ ಶುಕ್ರವಾರ ಮಧ್ಯಾಹ್ನ ೩ ಗಂಟೆಗೆ ಮೃತರ ತವರು ಚೌಡಹಳ್ಳಿ ಗ್ರಾಮದ ತೋಟದಲ್ಲಿ ವೀರಶೈವ ಸಮಾಜದ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ.ಸಿಎಂಎಸ್ ಶಾಸಕರಾಗುವ ಕನಸು ಈಡೇರಲೇ ಇಲ್ಲಕ್ಷೇತ್ರದ ಹಿರಿಯ ರಾಜಕಾರಣಿ, ಸಿಎಂಎಸ್ ಚಿರಪರಿಚಿತರಾದ ಸಿ.ಎಂ.ಶಿವಮಲ್ಲಪ್ಪ ಕಾಲಾವಧಿಯಲ್ಲಿ ಶಾಸಕರಾಗುವ ಬಯಕೆ ಈಡೇರಲೇ ಇಲ್ಲ.
ಸಿ.ಎಂ.ಶಿವಮಲ್ಲಪ್ಪ ಸಹಕಾರ ಕ್ಷೇತ್ರದಲ್ಲಿ ಕೆಲ ದಶಕಗಳ ಕಾಲ ಮಿಂಚಿದರು. ಅಲ್ಲದೆ, ಪ್ರಥಮ ದರ್ಜೆ ಗುತ್ತಿಗೆದಾರರಾಗಿ, ಪ್ರಗತಿ ಪರ ಕೃಷಿಕರಾಗಿ ಕ್ಷೇತ್ರದಲ್ಲಿ ನೆಲೆ ಕಂಡು ಕೊಂಡರಾದರೂ ಜನಪ್ರತಿಯಾಗುವ ಅವಕಾಶ ದೊರಕಲಿಲ್ಲ. ಜನಪ್ರತಿಯಾಗಬೇಕು ಎಂಬ ಕನಸು ಕಂಡ ಸಿ.ಎಂ.ಶಿವಮಲ್ಲಪ್ಪ ೧೯೮೭ರಲ್ಲಿ ಜಿಲ್ಲಾ ಪರಿಷತ್ತು ಚುನಾವಣೆಯಲ್ಲಿ ಸ್ಪರ್ಧಿಸಿ ಎದುರಾಳಿ ಎಂ.ಪಿ.ವೃಷಬೇಂದ್ರಪ್ಪ ಅವರ ವಿರುದ್ಧ ೪೫ ಮತಗಳ ಅಂತರದಿಂದ ಸೋಲು ಕಂಡರು.ಇದಾದ ಬಳಿಕ ೧೯೯೪ ರಲ್ಲಿ ಮೊದಲ ಬಾರಿಗೆ ವಿಧಾನ ಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಸಿ.ಎಂ.ಶಿವಮಲ್ಲಪ್ಪ ೨೯೬೬೮ ಮತ ಪಡೆದು ಎದುರಾಳಿ ಪ್ರಥಮ ಬಾರಿಗೆ ಶಾಸಕರಾದ ಎಚ್.ಎಸ್.ಮಹದೇವಪ್ರಸಾದ್ ವಿರುದ್ಧ ಸೋತರು. ಮತ್ತೆ ೧೯೯೯ರಲ್ಲಿ ವಿಧಾನಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಸಿಗಲಿಲ್ಲ. ಕಾಂಗ್ರೆಸ್ ಟಿಕೆಟ್ ಹಂಗಳ ಎಚ್.ಎಸ್.ನಂಜಪ್ಪಗೆ ಸಿಕ್ಕಿದ ಹಿನ್ನೆಲೆ ರೊಚ್ಚಿಗೆದ್ದ ಸಿ.ಎಂ.ಶಿವಮಲ್ಲಪ್ಪ ಪಕ್ಷೇತರರಾಗಿ ಸ್ಪರ್ಧಿಸಿ ೨೧೭೪೮ ಮತ ಪಡೆದು ಮತ್ತೆ ಎಚ್.ಎಸ್.ಮಹದೇವಪ್ರಸಾದ್ ವಿರುದ್ಧ ಸೋಲು ಕಂಡರು.
ಸಹಕಾರ ಕ್ಷೇತ್ರದಲ್ಲಿ ಸ್ಪರ್ಧಿಸಿದ ಎಲ್ಲಾ ಚುನಾವಣೆಗಳಲ್ಲಿ ಜಯಗಳಿಸಿ, ಪಿಎಲ್‌ಡಿ ಬ್ಯಾಂಕ್‌ಗೆ ಎರಡು ಬಾರಿ ಅಧ್ಯಕ್ಷರಾದರು. ಒಂದು ಬಾರಿ ಟಿಎಪಿಸಿಎಂಎಸ್ ಅಧ್ಯಕ್ಷರಾದರು. ಅಲ್ಲದೆ ಸೋಮೇಶ್ವರ ಅನಾಥಾಲಯದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಬಿಜೆಪಿಯಲ್ಲಿಯೂ ರಾಜ್ಯ ಸಮಿತಿ ಸದಸ್ಯರಾಗಿಯೂ ನೇಮಕಗೊಂಡಿದ್ದರು. ಗುಂಡ್ಲುಪೇಟೆ ಶಾಸಕರಾಗಬೇಕು ಎಂಬ ಕನಸು ಕಂಡಿದ್ದ ಸಿ.ಎಂ.ಶಿವಮಲ್ಲಪ್ಪ ಎರಡು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋತರು. ಶಾಸಕರಾಗುವ ಕನಸು ನನಸಾಗಲೇ ಇಲ್ಲ ಎಂಬುದು ವಾಸ್ತವ.