ಹಿಮ್ಸ್‌ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರಕ್ಕೇ ಕ್ಯಾನ್ಸರ್: ಸಮಸ್ಯೆ ಬಗೆಹರಿಸಲು ಹಿರಿಯ ನಾಗರಿಕ ವೇದಿಕೆ ಒತ್ತಾಯ

| Published : Feb 16 2024, 01:48 AM IST

ಹಿಮ್ಸ್‌ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರಕ್ಕೇ ಕ್ಯಾನ್ಸರ್: ಸಮಸ್ಯೆ ಬಗೆಹರಿಸಲು ಹಿರಿಯ ನಾಗರಿಕ ವೇದಿಕೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕೇಂದ್ರ ಇದ್ದರೂ ಕೂಡ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಬಡವರು ಚಿಕಿತ್ಸೆಯಿಂದ ವಂಚಿತರಾಗಿ ಖಾಸಗಿ ಆಸ್ಪತ್ರೆಗೆ ಹೋಗಿ ಲಕ್ಷಗಟ್ಟಲೆ ಹಣ ಕಳೆದುಕೊಳ್ಳುವಂತಾಗಿದೆ ಎಂದು ಜಿಲ್ಲಾ ಹಿರಿಯ ನಾಗರಿಕರ ವೇದಿಕೆ ಆರೋಪಿಸಿದೆ.

ಅಗತ್ಯ ಸಿಬ್ಬಂದಿಯಿಲ್ಲದೆ ರೋಗಿಗಳಿಗೆ ಇಲ್ಲ ಚಿಕಿತ್ಸೆ ಕನ್ನಡಪ್ರಭ ವಾರ್ತೆ ಹಾಸನ

ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕೇಂದ್ರ ಇದ್ದರೂ ಕೂಡ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಬಡವರು ಚಿಕಿತ್ಸೆಯಿಂದ ವಂಚಿತರಾಗಿ ಖಾಸಗಿ ಆಸ್ಪತ್ರೆಗೆ ಹೋಗಿ ಲಕ್ಷಗಟ್ಟಲೆ ಹಣ ಕಳೆದುಕೊಳ್ಳುವಂತಾಗಿದೆ. ಈ ನಿಟ್ಟಿನಲ್ಲಿ ಕ್ಯಾನ್ಸರ್ ಘಟಕಕ್ಕೆ ಇನ್ನಷ್ಟು ಜೀವ ತುಂಬಲು ಹಿರಿಯ ನಾಗರಿಕರ ತಂಡ ಮುಂದಾಗಿದೆ.

ನಗರದ ಸ್ಕೌಟ್ಸ್‌ ಅಂಡ್ ಗೈಡ್ಸ್ ಭವನದ ಆವರಣದಲ್ಲಿ ಜಿಲ್ಲಾ ಹಿರಿಯ ನಾಗರಿಕರ ವೇದಿಕೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಅಧ್ಯಕ್ಷ ವೈ.ಎಸ್. ವೀರಭದ್ರಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಕೆ. ಮಂಜುನಾಥ್ ಮಾತನಾಡಿ, ಹಿಮ್ಸ್ ಆಸ್ಪತ್ರೆಯಲ್ಲಿರುವ ಕ್ಯಾನ್ಸರ್ ಘಟಕ ಸ್ಥಗಿತವಾಗಿದೆ. ಯುಜಿಡಿ ಲೈನ್ ಕೆಲಸ ಆಗಿಲ್ಲ ಎನ್ನುವ ಒಂದೇ ಕಾರಣಕ್ಕೆ ಕೇಂದ್ರದಲ್ಲಿ ಪೂರ್ಣ ಪ್ರಮಾಣದ ಸೇವೆ ಸಿಗುತ್ತಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಯಾವ ವರದಿಯನ್ನು ಕೂಡ ಸಲ್ಲಿಸಿರುವುದಿಲ್ಲ ಎಂದು ದೂರಿದರು.

ಕೂಡಲೇ ಎಲ್ಲವನ್ನು ಸರಿಪಡಿಸಿ ಕ್ಯಾನ್ಸರ್ ಕೇಂದ್ರಕ್ಕೆ ಹೆಚ್ಚಿನ ವೈದ್ಯರು ಮತ್ತು ಸಿಬ್ಬಂದಿ ನೇಮ ಮಾಡಿಕೊಂಡು ಉತ್ತಮ ಚಿಕಿತ್ಸೆ ಕೊಡಬೇಕು. ಇಲ್ಲವಾದರೆ ಮುಂದೆ ಎಲ್ಲಾ ಸಂಘಟನೆಗಳು ಸೇರಿ ಬೃಹತ್ ಸಭೆ ಮಾಡಿ, ಸರ್ಕಾರದ ಗಮನ ಸೆಳೆಯಲಾಗುವುದು. ಸರ್ಕಾರದಿಂದ ಸ್ಪಂದನೆ ದೊರಕದಿದ್ದರೆ ನಂತರ ಹೋರಾಟದ ಹಾದಿ ಹಿಡಿಯಲಾಗುವುದು ಎಂದು ಎಚ್ಚರಿಸಿದರು.

ಡಾ. ಹೇಮಾಲತಾ ಮಾತನಾಡಿ, ಕ್ಯಾನ್ಸರ್ ರೋಗದಿಂದ ಸಂಭವಿಸುವ ಸಾವುಗಳು ಹೆಚ್ಚಾಗಿದ್ದು, ಪ್ರತಿ ಒಂದು ಲಕ್ಷ ಮಹಿಳೆಯರಲ್ಲಿ ೨೨ ಮಹಿಳಯರಿಗೆ ರಕ್ತ ಕ್ಯಾನ್ಸರ್ ಖಾಯಿಲೆಗೆ ತುತ್ತಾಗುತ್ತಿದ್ದಾರೆ. ೨೯ ಜನ ಕ್ಯಾನ್ಸರ್‌ಗೆ ಸಾಯುತ್ತಿರುವುದು ಆತಂಕದ ವಿಚಾರವಾಗಿದೆ. ಪರಿಣಾಮಕಾರಿಯಾಗಿ ಈ ಸಮಸ್ಯೆಯನ್ನು ತಡೆಗಟ್ಟಬೇಕಾಗಿದೆ. ವೈದ್ಯ ಲೋಕವು ಹಗಲಿರುಳು ಶ್ರಮ ಮತ್ತು ಸಂಶೋಧನೆಯಿಂದ ಗಣನೀಯವಾದ ಕ್ರಾಂತಿಕಾರಕ ಪ್ರಗತಿ ಸಾಧಿಸಿದೆ ಎಂದರು.

ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಲಕ್ಷ್ಮಣ್ ಮಾತನಾಡಿ, ಯಾವುದೇ ರೀತಿ ಸ್ವಾರ್ಥವಿಲ್ಲದ ಹಿರಿಯ ನಾಗರಿಕರ ವೇದಿಕೆಯಾಗಿದೆ. ಇದರಲ್ಲಿ ಯಾವ ರಾಜಕಾರಣ ಇಲ್ಲ. ದೇವರ ಸೇವೆ, ಬಡವರಿಗೆ ಸೇವೆ ಸಿಗಲಿ ಎನ್ನುವ ಚಿಂತನೆ ಉತ್ತಮವಾಗಿದೆ. ಹಿರಿಯ ನಾಗರಿಕರ ಜತೆ ಇರುತ್ತೇವೆ. ಜಿಲ್ಲಾ ಸಚವರು ಇಲ್ಲಿಗೆ ಬಂದಾಗ ಒಂದು ಬಾರಿ ಆಸ್ಪತ್ರೆಯನ್ನು ಪರಿಶೀಲಿಸಲಿ ಎಂದರು.

ವಕೀಲರಾದ ಪ್ರಸನ್ನಕುಮಾರ್ ಮಾತನಾಡಿ, ಹಾಸನದ ಹಿಮ್ಸ್ ಆಸ್ಪತ್ರೆಯ ಕ್ಯಾನ್ಸರ್ ಘಟಕ ಸ್ಥಾಪನೆಗೊಂಡು ಚಾಲನೆಯಲ್ಲಿದ್ದು, ದಿನಕ್ಕೆ ೫೦ ರಿಂದ ೭೦ ಜನ ಕ್ಯಾನ್ಸರ್ ರೋಗಿಗಳು ತಪಾಸಣೆ ಮತ್ತು ಚಿಕಿತ್ಸೆಗಾಗಿ ಬರುತ್ತಾರೆ. ಒಬ್ಬ ರೋಗಿಯ ಪರೀಕ್ಷೆ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಅಷ್ಟು ಜನ ರೋಗಿಗಳ ಪರೀಕ್ಷೆ ಮಾಡಲು ವೈದ್ಯರ ಕೊರತೆ ಕಾಣುತ್ತಿದೆ. ಇಲ್ಲಿ ಕೆಲವೇ ವೈದ್ಯರು ಮತ್ತು ಸಿಬ್ಬಂದಿ ಇರುವುದರಿಂದ ದಿನದಲ್ಲಿ ಹತ್ತಾರು ಮಂದಿ ಮಾತ್ರ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದೆ ಎಂದು ಆರೋಪಿಸಿದರು.

ಹಿರಿಯ ನಾಗರಿಕರ ವೇದಿಕೆ ಸದಸ್ಯರಾದ ಜಗದೀಶ್, ಮಹಾಲಕ್ಷ್ಮಿ ದೊಡ್ಡಯ್ಯ, ಡಾ. ಹೇಮಾಲತಾ, ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಆರ್.ಪಿ. ವೆಂಕಟೇಶ್ ಮೂರ್ತಿ, ಖಜಾಂಚಿ ಕೆ. ರಮೇಶ್, ಶಾರದ, ಗೌರಮ್ಮ, ಹಿರಿಯ ಪತ್ರಕರ್ತ ವೆಂಕಟೇಶ್, ಜಯಮ್ಮ, ವನಜಾಕ್ಷಿ, ಮಾಜಿ ಯೋಧ ವೆಂಕಟೇಶ್, ಗೋವಿಂದೇಗೌಡ, ಬಸವರಾಜು, ಪುಟ್ಟಸ್ವಾಮಿ, ಮುಬಾಶೀರ್ ಅಹಮದ್, ಮಂಜುನಾಥ್ ಶರ್ಮ ಇದ್ದರು.ಹಾಸನದ ಸ್ಕೌಟ್ಸ್‌ ಅಂಡ್ ಗೈಡ್ಸ್ ಭವನದ ಆವರಣದಲ್ಲಿ ಜಿಲ್ಲಾ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ವೈ.ಎಸ್. ವೀರಭದ್ರಪ್ಪ ಮಾತನಾಡಿದರು.