ಹಿರಿಯ ಸಹಕಾರಿ ಧುರೀಣ ಶಾಂತಾರಾಮ ಹೆಗಡೆ ಶೀಗೆಹಳ್ಳಿ ನಿಧನ

| Published : Feb 01 2024, 02:02 AM IST

ಹಿರಿಯ ಸಹಕಾರಿ ಧುರೀಣ ಶಾಂತಾರಾಮ ಹೆಗಡೆ ಶೀಗೆಹಳ್ಳಿ ನಿಧನ
Share this Article
  • FB
  • TW
  • Linkdin
  • Email

ಸಾರಾಂಶ

ಸಹಕಾರಿ ಕ್ಷೇತ್ರಕ್ಕೆ ಕಾಲಿಟ್ಟ ಶಾಂತಾರಾಮ ಹೆಗಡೆ ಶೀಗೆಹಳ್ಳಿ, ಮುಂಡಗನಮನೆ ಸೇವಾ ಸಹಕಾರಿ ಸಂಘಕ್ಕೆ ೧೯೭೬ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ೧೯೮೨ರ ವರೆಗೆ ಸಂಘವನ್ನು ಪ್ರಗತಿ ಪಥದಲ್ಲಿ ಒಯ್ದರು.

ಶಿರಸಿ:

ಅಡಕೆ ಬೆಳೆಗಾರರ ಜೀವನಾಡಿ ಸಂಸ್ಥೆಯಾದ ಟಿಎಸ್‌ಎಸ್ ಅಭಿವೃದ್ಧಿಯ ರೂವಾರಿ, ಮಾಜಿ ಅಧ್ಯಕ್ಷ, ಹಿರಿಯ ಸಹಕಾರಿ ಧುರೀಣ ಶಾಂತಾರಾಮ ಹೆಗಡೆ ಶೀಗೇಹಳ್ಳಿ (೭೯) ಬುಧವಾರ ನಿಧನ ಹೊಂದಿದರು.

ಅವರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಅಪಾರ ಜನಸ್ತೋಮದ ಮಧ್ಯೆ ಅಂತ್ಯಕ್ರಿಯೆ ನೆರವೇರಿತು.

ಸಹಕಾರಿ ಕ್ಷೇತ್ರಕ್ಕೆ ಕಾಲಿಟ್ಟ ಅವರು, ಮುಂಡಗನಮನೆ ಸೇವಾ ಸಹಕಾರಿ ಸಂಘಕ್ಕೆ ೧೯೭೬ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ೧೯೮೨ರ ವರೆಗೆ ಸಂಘವನ್ನು ಪ್ರಗತಿ ಪಥದಲ್ಲಿ ಒಯ್ದರು. ೧೯೮೪ರಿಂದ ಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ೧೯೯೫ರಿಂದ ಟಿಎಸ್‌ಎಸ್ ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಕೇವಲ ಅಡಕೆ ವಹಿವಾಟಿಗೆ ಮಾತ್ರ ಸೀಮಿತವಾಗಿದ್ದ ಟಿಎಸ್‌ಎಸ್ ಸಂಸ್ಥೆಯನ್ನು ರೈತರ ಎಲ್ಲ ಅಗತ್ಯತೆಯ ಸಂಸ್ಥೆಯನ್ನಾಗಿ ಪರಿವರ್ತಿಸಿದರು. ಇದರ ಪರಿಣಾಮ ₹೫೦ ಕೋಟಿ ವಾರ್ಷಿಕ ವಹಿವಾಟು ಹೊಂದಿದ್ದ ಟಿಎಸ್‌ಎಸ್ ₹೮೭೪ ಕೋಟಿಗೆ ಏರಿಕೆಯಾಯಿತು. ಸಂಸ್ಥೆಯ ಆವರಣದಲ್ಲಿ ಜಿಲ್ಲೆಯಲ್ಲಿಯೇ ಬೃಹತ್ ಎನಿಸಿದ ಸೂಪರ್ ಮಾರ್ಕೆಟ್ ಸ್ಥಾಪನೆ, ಜಿಲ್ಲೆಯ ಅತ್ಯಗತ್ಯವಾದ ಟಿಎಸ್‌ಎಸ್ ಆಸ್ಪತ್ರೆ ಅವರ ಅವಧಿಯಲ್ಲೇ ಆರಂಭವಾದವು.

ಸ್ವರ್ಣವಲ್ಲೀ ಸಂಸ್ಥಾನದ ಪರಮ ಭಕ್ತರಾಗಿದ್ದ ಶಾಂತಾರಾಮ ಹೆಗಡೆ, ಉಪಾಧ್ಯಕ್ಷರಾಗಿ ೨೦೦೧ರಿಂದ ೨೦೧೨ರ ವರೆಗೆ ಹಾಗೂ ಆ ಬಳಿಕ ಸದಸ್ಯರಾಗಿ ಸೇವೆ ಸಲ್ಲಿಸಿ ಧಾರ್ಮಿಕ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ. ಶಿರಸಿಯ ತೋಟಗಾರ್ಸ್‌ ವೆಲ್‌ಫೇರ್‌ ಅಸೋಸಿಯೇಶನ್‌ನ ನಿರ್ದೇಶಕರಾಗಿ ೧೯೯೫ರಿಂದ ಸೇವೆ ನೀಡಿದ್ದಾರೆ. ಮಹಾದೇವ ಭಟ್ ಕೂರ್ಸೆ ಕಿವುಡು ಮತ್ತು ಮೂಕ ಮಕ್ಕಳ ಶಾಲೆ ನಿರ್ದೇಶಕರಾಗಿ, ಎಸ್‌ಆರ್‌ಕೆ ಫೌಂಡೇಶನ್‌ನ ಗೌರವ ಕಾರ್ಯದರ್ಶಿಯಾಗಿ ಅವರು ಸೇವೆ ನೀಡಿದ್ದಾರೆ.

೧೯೯೯ರಿಂದ ೨೦೦೧ರ ವರೆಗೆ ಹಾಗೂ ೨೦೧೦ರಿಂದ ೨೦೧೩ರ ವರೆಗೆ ಶಾಂತಾರಾಮ ಹೆಗಡೆ ಜಿಲ್ಲೆಯ ಮಧ್ಯವರ್ತಿ ಬ್ಯಾಂಕ್ ಕೆಡಿಸಿಸಿಯ ಅಧ್ಯಕ್ಷರಾಗಿ ಕಾರ್‍ಯ ನಿರ್ವಹಿಸಿದ್ದರು. ಅಡಕೆ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವ ಸಲುವಾಗಿ ೨೦೦೨ರಲ್ಲಿ ರಾಜ್ಯ ಅಡಕೆ ಮಾರಾಟ ಸಹಕಾರ ಮಂಡಳವನ್ನು ಸಮಾನ ಮನಸ್ಕರೊಂದಿಗೆ ಸೇರಿ ಸ್ಥಾಪಿಸಿದರಲ್ಲದೇ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ ೩ ವರ್ಷಗಳ ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಧರ್ಮಸ್ಥಳದ ಅರೆಕಾನಟ್ ರೀಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಫೌಂಡೇಶನ್‌ನ ಗೌರವ ಅಧ್ಯಕ್ಷರಾಗಿಯೂ ಅವರು ಕಾರ್‍ಯ ನಿರ್ವಹಿಸಿದ್ದಾರೆ.

ನಗರದ ಪ್ರಮುಖ ಶಿಕ್ಷಣ ಸಂಸ್ಥೆಯಾಗಿರುವ ಮಾಡರ್ನ್ ಎಜ್ಯುಕೇಶನ್ ಸೊಸೈಟಿಗೆ ೧೯೯೫ರಿಂದ ಉಪಾಧ್ಯಕ್ಷರಾಗಿ, ೨೦೦೭ರಿಂದ ಅಧ್ಯಕ್ಷರಾಗಿ ಕಾರ್‍ಯ ನಿರ್ವಹಿಸಿದ್ದಾರೆ.

೧೯೭೦ರಿಂದ ಕಾಂಗ್ರೆಸ್ ಕಾರ್ಯಕರ್ತನಾದ ಬಳಿಕ ೧೯೮೦ರಿಂದ ೧೯೮೫ರ ವರೆಗೆ ಮುಂಡಗನಮನೆ ಗ್ರಾಪಂ ಅಧ್ಯಕ್ಷರಾಗಿ, ೧೯೯೭ರಿಂದ ೨೦೧೦ರ ವರೆಗೆ ಕಾಂಗ್ರೆಸ್‌ನ ಜಿಲ್ಲಾ ಅಧ್ಯಕ್ಷರಾಗಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದಾರೆ.

ಶ್ರೇಷ್ಠ ಸಹಕಾರಿ ಪ್ರಶಸ್ತಿ, ಸಹಕಾರ ಇಲಾಖೆ ನೀಡುವ ಸಹಕಾರಿ ರತ್ನ ಪ್ರಶಸ್ತಿ, ಸಹಕಾರ ವಿಶ್ವ ಸುವರ್ಣಶ್ರೀ ಅಂತಾರಾಷ್ಟ್ರೀಯ ಪ್ರಶಸ್ತಿ, ಕೆ.ಎಚ್. ಪಾಟೀಲ ಗ್ರಾಮಾಭಿವೃದ್ಧಿ ರಾಷ್ಟ್ರೀಯ ಪ್ರಶಸ್ತಿ, ಅಚೀವರ್ಸ್ ಆಫ್‌ ಕರ್ನಾಟಕ ಪ್ರಶಸ್ತಿ ಶಾಂತಾರಾಮ ಹೆಗಡೆ ಅವರಿಗೆ ಲಭಿಸಿವೆ.ಸ್ವರ್ಣವಲ್ಲೀ ಶ್ರೀ ಸಂತಾಪ

ಶಾಂತ ಮತ್ತು ತಣ್ಣನೆಯ ಸ್ವಭಾವದವರು. ಸರಳ ಸಜ್ಜನರೂ ಆದವರು. ಶ್ರೀ ಮಠದ ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿದ್ದ ಶ್ರೀ ಶಾಂತಾರಾಮ ಹೆಗಡೆ ಶಿಗೆಹಳ್ಳಿ ಅವರು ಆಗಲಿರುವುದು ಮನಸ್ಸಿಗೆ ದುಃಖ ಉಂಟುಮಾಡಿದೆ. ದೇವರು ಅವರಿಗೆ ಸದ್ಗತಿ ಕರುಣಿಸಲಿ ಎಂದು ಸ್ವರ್ಣವಲ್ಲೀಯ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ತಿಳಿಸಿದ್ದಾರೆ.

ಶಾಸಕ ಆರ್.ವಿ. ದೇಶಪಾಂಡೆ, ಸಿದ್ದಾಪುರ ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಸಂತ ನಾಯ್ಕ ಮನಮನೆ. ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಿ.ಆರ್. ನಾಯ್ಕ ಹೆಗ್ಗಾರಕೈ ಸಂತಾಪ ಸೂಚಿಸಿದ್ದಾರೆ.