ಸಾರಾಂಶ
ಬಿಟಿಸಿಜಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾಗಿ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದ ಎಚ್. ಎಂ. ಶಿವಾನಂದ್ ಮೈಸೂರಿನಲ್ಲಿ ನಿಧನರಾದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಇಲ್ಲಿನ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾಗಿ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದ ಎಚ್.ಎಂ. ಶಿವಾನಂದ್(66) ಶುಕ್ರವಾರದಂದು ಮೈಸೂರಿನಲ್ಲಿ ನಿಧನರಾದರು.ಮೃತರ ಅಂತ್ಯಕ್ರಿಯೆಯು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಶನಿವಾರದಂದು ನೆರವೇರಿತು. ಮೃತರು ಪತ್ನಿ, ಮೈಸೂರಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಪುತ್ರ ಸಚಿನ್ ಅವರನ್ನು ಅಗಲಿದ್ದಾರೆ.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಸಂದರ್ಭ ಸಾಹಿತ್ಯ ಪರಿಷತ್ ಭವನ ನಿರ್ಮಿಸಲು ಅಪಾರ ಶ್ರಮ ಪಟ್ಟಿದ್ದ ಶಿವಾನಂದ್ ಅವರು, ಕಲೆ, ಸಾಹಿತ್ಯ, ನಾಟಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.ಸುಮಾರು ಎರಡು ದಶಕಗಳಷ್ಟು ಸುದೀರ್ಘ ಅವಧಿಯಲ್ಲಿ ವರದಿಗಾರರಾಗಿಯೂ ಸೇವೆ ಸಲ್ಲಿಸಿದ್ದರು. ಯಡೂರಿನ ಬಿಟಿಸಿಜಿ ಪ್ರಥಮ ದರ್ಜೆ ಕಾಲೇಜು ಅನ್ನು ಸರ್ಕಾರಿ ಕಾಲೇಜನ್ನಾಗಿ ಪರಿವರ್ತಿಸಲು ಶಿವಾನಂದ್ ಅವರು ಅವಿರತವಾಗಿ ಶ್ರಮಿಸಿದ್ದರು. ಪಟ್ಟಣದ ಕಿರಣ ಕಲಾವೇದಿಕೆಯಲ್ಲಿ ಸಕ್ರಿಯ ಸದಸ್ಯರಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಡುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
ಶಿವಮೊಗ್ಗ ಜಿಲ್ಲೆಯ ಹೆಗ್ಗೋಡು ಗ್ರಾಮದಲ್ಲಿರುವ ನಿನಾಸಂ ಸಂಸ್ಥೆಯೊಂದಿಗೆ ಉತ್ತಮ ಒಡನಾಡ ಹೊಂದಿದ್ದ ಇವರು ಹಲವಾರು ಯುವ ಪ್ರತಿಭೆಗಳನ್ನು ನಾಟಕ, ರಂಗಭೂಮಿ, ಸಾಹಿತ್ಯ, ಜನಪದ ಕ್ಷೇತ್ರಗಳಿಗೆ ಪರಿಚಯಿಸಿದ್ದರು.