ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಫ್ರಾನ್ಸ್‌ನ ಲೆನಿನ್ ಮಾಡಿದ ಫ್ರೆಂಚ್ ಕ್ರಾಂತಿಗಿಂತಲೂ 12ನೇ ಶತಮಾನದಲ್ಲಿ ವರ್ಣ, ವರ್ಗ ಭೇದ ನಿವಾರಿಸಿ, ಸಮಸಮಾಜ ನಿರ್ಮಾಣಕ್ಕೆ ಬಸವಣ್ಣನವರು ಮಾಡಿದ ಕ್ರಾಂತಿ ದೊಡ್ಡದು ಎಂದು ಹಿರಿಯ ರಂಗಕರ್ಮಿ ಸಿ. ಬಸವಲಿಂಗಯ್ಯ ಅಭಿಪ್ರಾಯಪಟ್ಟರು.ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ, ಕನ್ನಡ ಸಾಹಿತ್ಯ ಕಲಾಕೂಟವು ಶ್ರೀ ಬಸವೇಶ್ವರ ಪ್ರತಿಮೆ ಬಳಿ ಶುಕ್ರವಾರ ಏರ್ಪಡಿಸಿದ್ದ ಬಸವ ಜಯಂತಿ ಹಾಗೂ ಬಸವ ಸಾಂಸ್ಕೃತಿಕ ಪುರಸ್ಕಾರ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ವಿಶ್ವಗುರು ಬಸವಣ್ಣನನ್ನು ಒಂದು ಜಾತಿಯ ಗುರುವನ್ನಾಗಿ ಮಾಡುವುದನ್ನು ಬಿಡಬೇಕು ಎಂದು ಸಲಹೆ ಮಾಡಿದರು.
ರಾಜ್ಯದಲ್ಲಿ ಆಡಳಿತ ನಡೆಸಿದ ಹಿಂದಿನ ಸರ್ಕಾರ ಹೈದ್ರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ಹೆಸರಿಸಿದ್ದು, ಈಗಿನ ಸರ್ಕಾರ ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಮೂಲಕ ಬಸವಣ್ಣನವರ ಆಶಯವನ್ನು ಗೌರವಿಸುವ ಕೆಲಸ ಮಾಡಿರುವುದು ಸ್ವಾಗತಾರ್ಹ. ಇಂತಹ ಕೆಲಸಗಳಿಗೆ ನಮ್ಮ ವಿರೋಧವಿಲ್ಲ. ಕುವೆಂಪು ಅವರು ಹೇಳಿದಂತೆ ಎಲ್ಲರೂ ಹುಟ್ಟುತ್ತಾ ವಿಶ್ವಮಾನವರು, ಬೆಳೆಯುತ್ತಾ ಅಲ್ಪಮಾನವರು. ಈ ರೀತಿ ಉಲ್ಪಾ ಆಗುವ ಬದಲು ಎಲ್ಲರೂ ಬೆಳೆಯುತ್ತಾ ವಿಶ್ವಮಾನವರಾಗಬೇಕು ಎಂದು ಅವರು ಆಶಿಸಿದರು.ಕನ್ನಡ ಸಾಹಿತ್ಯದ ಪ್ರಸ್ತಾಪ ಬಂದಾಗ ಆದಿಕವಿ ಪಂಪನಿಂದ ಮಹಾಕವಿ ಕುವೆಂಪುವರೆಗೆ ಎಂದು ಹೇಳುತ್ತೇವೆ. ಪಂಪನಿಗೆ ಜಾತಿ ಇರಲಿಲ್ಲ. ಬ್ರಾಹ್ಮಣನಾಗಿ ಹುಟ್ಟಿ ಜೈನನಾದ. ಆದರೆ ಪ್ರಸ್ತುತ ಕವಿ ರಚಿಸಿದ ಕಾಲ್ಪನಿಕ ಕಾವ್ಯ ಚರಿತ್ರೆ ಆಗುತ್ತಿರುವುದು ದುರಂತ. ಬಸವಣ್ಣ ವೈದಿಕ ಧರ್ಮ ವಿರೋಧಿಸಿ ಲಿಂಗಾಯತ ಧರ್ಮ ಸ್ಥಾಪಿಸಿದ. ಆದರೆ ಈಗ ಅವರನ್ನು ಜಾತಿಗೆ ಸೀಮಿತಗೊಳಿಸಲಾಗುತ್ತಿದೆ. ಬಸವಣ್ಣನವರು ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕಿವಿಲ್ಲ ಎಂದಿದ್ದರು. ಆದರೆ ನೂರಾರು ಅಡಿ ಪ್ರತಿಮೆ ಸ್ಥಾಪಿಸಲಾಗುತ್ತಿದೆ ಎಂದು ಅವರು ವಿಷಾದಿಸಿದರು.
ಬುದ್ಧ, ಬಸವ, ಅಂಬೇಡ್ಕರ್ ಅವರ ಆಶಯಗಳು ಎಲ್ಲರಿಗೂ ತಲುಪಬೇಕು. ಇದರಿಂದ ಮಾತ್ರ ಸಮಾನತೆ, ಸಮಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.ಬಸವಣ್ಣನವರು ದೇವಾಲಯ ಮುಕ್ತ ಮಾಡಲು ಕೊರಳಿಗೆ ಲಿಂಗ ಹಾಕಿಸಿ, ಲಿಂಗಪೂಜೆ ಮಾಡಿ ಎಂದರು. ಕೂಡಲ ಸಂಗಮದೇವ ಎಂಬ ಅಂಕಿತನಾಮ ಇಟ್ಟುಕೊಂಡರು. ಸಾಮೂಹಿಕ ಭೋಜನ ಏರ್ಪಡಿಸುತ್ತಿದ್ದರು. ಅಲ್ಲಮಪ್ರಭು ಅಧ್ಯಕ್ಷತೆಯ ಅನುಭವ ಮಂಟಪದಲ್ಲಿ ಎಲ್ಲ ವರ್ಗದವರಿಗೂ ಅವಕಾಶ ನೀಡಿದ್ದರು ಎಂದು ಅವರು ಹೇಳಿದರು.
ಬಸವಣ್ಣವರು ಕಾಯಕವೇ ಕೈಲಾಸ ಎಂದರು. ಕಾಯಕ ತತ್ವಕ್ಕೆ ಅಪಾರ ಬೆಲೆ ನೀಡಿದರು. ಇವತ್ತು ಪೌರ ಕಾರ್ಮಿಕ ಮಹಿಳೆಯನ್ನು ಇಲ್ಲಿ ಗೌರವಿಸಿರುವುದು ಉತ್ತಮವಾದ ಕಾರ್ಯ ಎಂದು ಅವರು ಶ್ಲಾಘಿಸಿದರು.ಸಾನ್ನಿಧ್ಯ ವಹಿಸಿದ್ದ ಹೊಸಮಠದ ಶ್ರೀ ಚಿದಾನಂದ ಸ್ವಾಮಿಗಳು, ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಮೈಸೂರು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಎ.ಪಿ. ನಾಗೇಶ್, ಆಶಾದಾಯಕ ಸೇವಾ ಟ್ರಸ್ಟ್ ಸಂಸ್ಥಾಪಕ ಸಾ.ಕ. ಸುರೇಶ್, ಪೌರ ಕಾರ್ಮಿಕರಾದ ಸುಶೀಲಾ ಅವರಿಗೆ ಬಸವ ಸಾಂಸ್ಕೃತಿಕ ಪುರಸ್ಕಾರ ಪ್ರದಾನ ಮಾಡಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅಭಿನಂದನಾ ಭಾಷಣ ಮಾಡಿದರು.
ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಸ್. ಶಿವಮೂರ್ತಿ ಕಾನ್ಯ ಮುಖ್ಯ ಅತಿಥಿಯಾಗಿದ್ದರು.ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಪ್ರಾಸ್ತಾವಿಕ, ಕರ್ನಾಟಕ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಂ ಆಶಯ ಭಾಷಣ ಮಾಡಿದರು. ಯೋಗೇಶ್ ಉಪ್ಪಾರ ನಿರೂಪಿಸಿದರು. ಎನ್.ಆರ್. ನಾಗೇಶ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ರಂಗಕರ್ಮಿ ರಾಜಶೇಖರ ಕದಂಬ,. ಕಲಾವಿದ ಎಲ್. ಶಿವಲಿಂಗಪ್ಪ, ರವಿನಂದನ್, ಲೋಕೇಶ್ ಕುಮಾರ್, ಎಂ.ಎಸ್. ಪಳನಿಸ್ವಾಮಿ, ನಾರಾಯಣಸ್ವಾಮಿ, ಮಂಜುಳಾ ಮೊದಲಾದವರು ಇದ್ದರು.