ಸಾರಾಂಶ
ಮಂಚೆಚ್ಚ ಶೈಲಿಯ ಕಂಠ ಮಾಧುರ್ಯದ ಭಾಗವತರು ಅನಾರೋಗ್ಯದಿಂದ ನಿಧನ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿತೆಂಕುತಿಟ್ಟು ಯಕ್ಷಗಾನ ರಂಗದ ಹಿರಿಯ ಭಾಗವತ, ರಸ ರಾಗ ಚಕ್ರವರ್ತಿ ಬಿರುದಾಂಕಿತ ದಿನೇಶ್ ಅಮ್ಮಣ್ಣಾಯ( 65) ಅನಾರೋಗ್ಯದಿಂದ ಗುರುವಾರ ಕನ್ಯಾಡಿಯ ತಮ್ಮ ಪುತ್ರಿಯ ಮನೆಯಲ್ಲಿ ನಿಧನರಾದರು.ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಂಗದಲ್ಲಿ ಭಾಗವತರಾಗಿ ಮೆರೆದ ಅವರು, ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ.ಕಳೆದ ಕೆಲವು ವರ್ಷಗಳಿಂದ ಬೆಳ್ತಂಗಡಿ ತಾಲೂಕು ಹತ್ಯಡ್ಕ ಗ್ರಾಮದ ಹೊಸ್ತೋಟ ಎಂಬಲ್ಲಿ ಕೃಷಿ ಚಟುವಟಿಕೆಗಳೊಂದಿಗೆ ಮನೆ ಮಾಡಿಕೊಂಡಿದ್ದರು. ಮಂಡೆಚ್ಚರ ಶಿಷ್ಯ:ದಾಮೋದರ ಮಂಡೆಚ್ಚರ ಶಿಷ್ಯರಾಗಿ ಪುತ್ತೂರು ಮೇಳದ ಮೂಲಕ ಕಲಾ ಜೀವನ ಆರಂಭಿಸಿ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಯಕ್ಷಗಾನ ರಂಗದಲ್ಲಿ ಭಾಗವತರಾಗಿ ಕಲಾ ಸೇವೆ ಸಲ್ಲಿಸಿದ್ದರು.
ಆ ಕಾಲದ ಪ್ರಸಿದ್ಧ ಡೇರೆ ಮೇಳವಾಗಿದ್ದ ಕರ್ನಾಟಕ ಮೇಳದಲ್ಲಿ ದಿಗ್ಗಜ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಕೀರ್ತಿ ಅಮ್ಮಣ್ಣಾಯರದ್ದು. ತುಳು ಪ್ರಸಂಗಗಳಿಗೆ ತನ್ನ ಕಂಠ ಮಾಧುರ್ಯದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು. ಅತ್ಯದ್ಭುತ ರಾಗ ಸಂಚಾರದ ಮೂಲಕ ಕರುಣಾ ರಸದ ಪದ್ಯಗಳಿಗೆ ಸಾಟಿಯಿಲ್ಲದ ಭಾಗವತ ಎನಿಸಿಕೊಂಡಿದ್ದರು. ಅಂತಿಮವಾಗಿ ಎಡನೀರು ಮೇಳದಲ್ಲೂ ತಿರುಗಾಟ ನಡೆಸಿ ವಿಶ್ರಾಂತ ಜೀವನ ನಡೆಸುತ್ತಿದ್ದ ಅಮ್ಮಣ್ಣಾಯರು ಬಳಿಕ ಭಾಗವತರಾಗಿ ಅನೇಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.ಬದುಕು: 1959 ನ.7ರಂದು ನಾರಾಯಣ ಅಮ್ಮಣ್ಣಾಯ-ಕಾವೇರಿ ಅಮ್ಮ ದಂಪತಿ ಪುತ್ರರಾಗಿ ಇವರು ಜನಿಸಿದರು. 10ನೇ ತರಗತಿಯ ತನಕ ವಿದ್ಯಾಭ್ಯಾಸ ಪಡೆದಿರುವ ಇವರು ವಿದ್ವತ್ತಿನ ಮನೆತನದಲ್ಲೇ ಹುಟ್ಟಿದವರು. ಇವರ ತಂದೆ ಮೃದಂಗ ವಾದಕರು, ಚಿಕ್ಕಪ್ಪ ಅರ್ಥಧಾರಿ ಮತ್ತು. ಭಾಗವತರು. ಹಿರಿಯ ಸಹೋದರಿ ರಾಜೀ ಸಂಗೀತಗಾರರಾಗಿದ್ದಾರೆ. ಹಾಗಾಗಿ ಇವರಲ್ಲೂ ಕಲಾಪ್ರತಿಭೆ ಚಿಗುರಿತು.ದಾಮೋದರ ಮಂಡೆಚ್ಚರಿಂದ ಭಾಗವತಿಕೆಯ ಅಭ್ಯಾಸ ಮಾಡಿ, ಹರಿನಾರಾಯಣ ಬೈಪಡಿತ್ತಾಯ ಅವರಿಂದ ಮೃದಂಗದ ಅಭ್ಯಾಸ ಮಾಡಿರುವ ಇವರು ಸಹೋದರಿಯಿಂದ ಸಂಗೀತದ ಅಭ್ಯಾಸ ಮಾಡಿದ್ದಾರೆ. ಚಿಕ್ಕಪ್ಪ ವಿಷ್ಣು ಅಮ್ಮಣ್ಣಾಯರ ಪ್ರೋತ್ಸಾಹದೊಂದಿಗೆ ಉತ್ತೇಜಿತರಾದ ಅಮ್ಮಣ್ಣಾಯರು ಯಕ್ಷಗಾನದ ಕಲಾಸಾಧನೆಯಲ್ಲಿ ಪ್ರೌಢಿಮೆ ಸಾಧಿಸಿ, ಬೆಳೆಯುತ್ತಾ ಬಂದರು.
ಪುತ್ತೂರು ಮೇಳದಲ್ಲಿ ಒಂದು ವರ್ಷ, ಕರ್ನಾಟಕ ಮೇಳದಲ್ಲಿ 21 ವರ್ಷ, ಕದ್ರಿ ಮೇಳದಲ್ಲಿ 2 ವರ್ಷ, ಕುಂಟಾರು ಮೇಳದಲ್ಲಿ 2 ವರ್ಷ, ಎಡನೀರು ಮೇಳದಲ್ಲಿ 5 ವರ್ಷ ತಿರುಗಾಟದ ಹಿನ್ನೆಲೆ ಇವರಿಗಿದೆ. ಕರ್ನಾಟಕ ಮೇಳದಿಂದ ವರ್ಚಸ್ಸು ಮೆರೆಸುತ್ತಾ ಬಂದ ಅಮ್ಮಣ್ಣಾಯರು ಕೊನೆಯ ವರೆಗೂ ತಮ್ಮ ವರ್ಚಸ್ಸು ಉಳಿಸಿ ಬೇಡಿಕೆಯ ಕಲಾವಿದರಾಗಿದರಾಗಿದ್ದರು.ತುಳು ಮತ್ತು ಕನ್ನಡ ಪ್ರಸಂಗಗಳನ್ನು ಸಮರ್ಥವಾಗಿ ಆಡಿಸಬಲ್ಲ ಇವರು ರಾಗ ಸಂಯೋಜನೆಯಲ್ಲಿ ಪಳಗಿದವರಾಗಿದ್ದರು. ಕಂಠ ಮಾಧುರದಿಂದ ಪ್ರೇಕ್ಷಕರ ಮನವನ್ನು ತಣಿಸುವ ಪ್ರೌಢ ಭಾಗವತರು.ಮೂಲತಃ ಕೃಷಿಕರಾಗಿರುವ ಇವರು ಸುಧಾ ಎಂಬವರನ್ನು ವರಿಸಿ ಅಕ್ಷತಾ ಮತ್ತು ಅಮಿತಾ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ.ಭಾಗವತಿಕೆಯ ಇವರ ಕಲಾಸಾಧನೆಗೆ ಪ್ರತಿಫಲವಾಗಿ 40 ಕ್ಕೂ ಮಿಕ್ಕಿ ಸಂಮ್ಮಾನಗಳು ಸಂದಿವೆ. ಮುಂಬೈ, ಬೆಂಗಳೂರು, ಮಂಗಳೂರು ಸೇರಿದಂತೆ ಎಡನೀರು, ಉಡುಪಿ ಮೊದಲಾದೆಡೆಯಲ್ಲಿ ಅಭಿಮಾನಿಗಳಿಂದ ಗೌರವ ಪುರಸ್ಕಾರಕ್ಕೆ ಒಳಗಾಗಿದ್ದಾರೆ.
ಯಕ್ಷರಸರಾಗ ಚಕ್ರವರ್ತಿ, ಗಾನಕೋಗಿಲೆ, ಯಕ್ಷಕೋಗಿಲೆ, ಮಧುರಗಾನದ ಐಸಿರಿ, ಯಕ್ಷ ಸಂಗೀತ ಕಲಾ ಕೌಸ್ತುಭ ಮುಂತಾದ ಬಿರುದುಗಳಿಂದ ಜನಮನ್ನಣೆಗೆ ಪಾತ್ರರಾಗಿದ್ದರು.