ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಜಾತಿ ವ್ಯವಸ್ಥೆ ನಮಗೆ ಬೇಡ. ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂಬ ಭಾವನೆ ನಮ್ಮಲ್ಲಿ ಮೂಡಬೇಕು. ಅಂತಹ ಭಾವನೆ ನಮ್ಮಲ್ಲಿ ಬಾರದೇ ಹೋದರೆ ದೇಶಕ್ಕೂ ಅಪಾಯ ಧರ್ಮಕ್ಕೂ ಅಪಾಯವಿದೆ ಎಂದು ಯುವ ವಕೀಲ ಶರತ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.ಶನಿವಾರ ದರೆಗುಡ್ಡೆ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕರಾವಳಿ ಕೇಸರಿ ಸೇವಾ ಟ್ರಸ್ಟ್ , ಬೆದ್ರ ಕರಾವಳಿ ಕೇಸರಿ ಮಹಿಳಾ ಘಟಕ ದರೆಗುಡ್ಡೆ ಇದರ ೧೩ನೇ ವಾರ್ಷಿಕೋತ್ಸವದ ಪ್ರಯುಕ್ತ ಶನೀಶ್ಚರ ಪೂಜೆ, ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘವನ್ನು ಕಟ್ಟುವುದು ಸುಲಭದ ಕೆಲಸವಲ್ಲ. ಆದರೆ ಆ ಸಂಘ ಕಟ್ಟಿದ ನಂತರ ಜನರ ಕಷ್ಟಗಳಿಗೆ ಸ್ಪಂದಿಸಿರುವುದು ನಿಜವಾಗಲೂ ಕರಾವಳಿ ಕೇಸರಿ ಸೇವಾ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದರು.ಶಾಸಕ ಉಮಾನಾಥ ಎ ಕೋಟ್ಯಾನ್ ಮಾತನಾಡಿ, ಹಿಂದೂ ಸಂಘಟನೆಯ ಯುವಕರು ತಮ್ಮ ಮನೆಯಲ್ಲಿ ಎಷ್ಟೇ ಕಷ್ಟವಿದ್ದರೂ, ಸಮಾಜಕ್ಕೆ ಕಷ್ಟ ಎದುರಾದಾಗ ಸಮಾಜದ ಕಷ್ಟವನ್ನು ತಮ್ಮ ಕಷ್ಟವೆಂದು ಭಾವಿಸಿ, ಸಮಾಜದಲ್ಲಾಗುವ ಆನ್ಯಾಯಗಳ ವಿರುದ್ಧ ಎದೆಯೊಡ್ಡಿ ನಿಲ್ಲುವ ಕೆಲಸ ಮಾಡುತ್ತಾ ಬಂದಿದ್ದಾರೆ. ಗೋಮಾತೆಯನ್ನು ರಕ್ಷಿಸುವಲ್ಲಿಯೂ ಸಂಘಟನೆಯ ಯುವಕರು ತಮ್ಮನ್ನು ತಾವು ಹಗಲಿರುಳೆನ್ನದೇ ತೊಡಗಿಸಿಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಸಂಘಟನೆಯಿಂದಾಗಿ ಹಿಂದೂ ಧರ್ಮ ಇನ್ನಷ್ಟು ಪ್ರಬಲವಾಗಿ ನಿಲ್ಲಲು ಸಾಧ್ಯವಾಗಿದೆ ಎಂದು ಹೇಳಿದರು.
ಸಮಾಜಮುಖಿ ಸೇವೆಗೈದ ಮುಂಬೈ ಉದ್ಯಮಿ ನಾರಾಯಣ ಕೆ. ಶೆಟ್ಟಿ ಅವರಿಗೆ ‘ಸಮಾಜಸೇವಾ ರತ್ನ’ ಪ್ರಶಸ್ತಿ, ಉದ್ಯಮ ಕ್ಷೇತ್ರದಲ್ಲಿನ ಸಾಧನೆಗಾಗಿ ಮೂಡುಬಿದಿರೆ ಉದ್ಯಮಿ ರಾಜೇಶ್ ಎಂ. ಕೋಟ್ಯಾನ್ ಅವರಿಗೆ ‘ಉದ್ಯಮ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ಪ್ರತಿನಿಧಿಸಿದ ವಿಘ್ನೇಶ್ ಶೆಟ್ಟಿ ಅವರ ಸಲುವಾಗಿ ಅವರ ತಾಯಿಯನ್ನು ಮತ್ತು ರಾಷ್ಟ್ರಮಟ್ಟದ ೬೦೦ಮೀ. ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತ ಸುಮಂತ್ ಎಸ್ ಅವರನ್ನು ಸನ್ಮಾನಿಸಲಾಯಿತು.ಬಿಜೆಪಿ ಮುಖಂಡ ಕೆ.ಪಿ. ಜಗದೀಶ ಅಧಿಕಾರಿ ಅಧ್ಯಕ್ಷತೆ ವಹಿಸಿದ್ದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ರಂಜಿತ್ ಪೂಜಾರಿ ತೋಡಾರು, ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರ, ದರೆಗುಡ್ಡೆ ಪಂಚಾಯಿತಿ ಅಧ್ಯಕ್ಷ ಹಾಗೂ ಗೌರವಾಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಕರಾವಳಿ ಕೇಸರಿ ಸಂಘಟನೆಯ ಅಧ್ಯಕ್ಷ ಸದಾನಂದ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಬೇಬಿ ಚಿದಾನಂದ ಕುಕ್ಯಾನ್ ಇದ್ದರು.ಕರಾವಳಿ ಕೇಸರಿ ಸೇವಾ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸಮಿತ್‌ರಾಜ್ ದರೆಗುಡ್ಡೆ ಸ್ವಾಗತಿಸಿದರು. ಗಣೇಶ್ ಬಿ ಅಳಿಯೂರು ಕಾರ್ಯಕ್ರಮ ನಿರ್ವಹಿಸಿದರು.