ಕನ್ನಡಪ್ರಭವಾರ್ತೆ ತುರುವೇಕೆರೆ

ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿ ಮಾಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ದ್ವಂದ್ವ ನಿಲುವು ಖಂಡಿಸಿ ತಾಲೂಕು ಆಡಳಿತದಿಂದ ನಡೆದ ಬಾಬು ಜಗಜೀವನ್ ರಾಮ್ ರವರ 119ನೇ ಜನ್ಮ ದಿನೋತ್ಸವಕ್ಕೆ ಪ್ರೊ.ಕೃಷ್ಣಪ್ಪ ಸ್ಥಾಪಿತ ತಾಲೂಕು ದಲಿತ ಸಂಘರ್ಷ ಸಮಿತಿ ಭಾಗವಹಿಸದೇ ಬಹಿಷ್ಕಾರ ಹಾಕಿ ಪ್ರತ್ಯೇಕವಾಗಿ ಆಚರಿಸಿದ ಘಟನೆ ನಡೆಯಿತು.

ಪಟ್ಟಣದಲ್ಲಿರುವ ದಲಿತ ಸಂಘರ್ಷ ಸಮಿತಿಯ ಕಚೇರಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್ ಮತ್ತು ತಾಲೂಕು ಸಂಚಾಲಕ ಮಲ್ಲೂರು ತಿಮ್ಮೇಶ್ ರವರ ನೇತೃತ್ವದಲ್ಲಿ ಪ್ರತ್ಯೇಕವಾಗಿ ಜನ್ಮ ದಿನೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ದಂಡಿನಶಿವರ ಕುಮಾರ್ ಮತ್ತು ಮಲ್ಲೂರು ತಿಮ್ಮೇಶ್, ರಾಜ್ಯ ಸರ್ಕಾರ ಮೀಸಲಾತಿ ನೀಡುವ ಸಂಬಂಧ ಹಾವನೂರು ವರದಿ, ಕಾಂತರಾಜು ವರದಿ. ಮಾಧುಸ್ವಾಮಿ ವರದಿ, ಎ.ಜೆ ಸದಾಶಿವ ವರದಿ, ನಾಗಮೋಹನ್ ದಾಸ್ ಆಯೋಗಗಳನ್ನು ರಚನೆ ಮಾಡಿದೆ. ಎಲ್ಲಾ ವರದಿಯನ್ನು ತರಿಸಿಕೊಂಡು ಅದನ್ನು ಜಾರಿ ಮಾಡದೇ ಬೇಜವಾಬ್ದಾರಿತನ ತೋರಿದೆ. ಎಲ್ಲಾ ವರದಿಯಲ್ಲೂ ಮಾದಿಗ ಸಮುದಾಯವೇ ಜನಸಂಖ್ಯೆಯಲ್ಲಿ ಹೆಚ್ಚಿದೆ ಎಂದಿದೆ. ಅದಕ್ಕೆ ತಕ್ಕಂತೆ ಒಳ ಮೀಸಲಾತಿಯನ್ನು ನೀಡಬೇಕಾದುದು ನಿಯಮ. ಆದರೆ ಕೆಲವು ಮಂತ್ರಿಗಳ ಕಪಿಮುಷ್ಠಿಯಲ್ಲಿ ಸಿಲುಕಿ ಒಳ ಮೀಸಲಾತಿಯನ್ನು ಜಾರಿಗೆ ತರಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಇದರಿಂದ ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಕಿಡಿಕಾರಿದರು. ಒಳ ಮೀಸಲಾತಿ ಜಾರಿಗೊಂಡರೆ ನಮ್ಮ ಸಮುದಾಯದ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಆದರೆ ಕೆಲವರ ಗೊಡ್ಡು ಬೆದರಿಕೆಗೆ ಸಿಲುಕಿ ಒಳ ಮೀಸಲಾತಿಯನ್ನು ಜಾರಿಗೊಳಿಸದಿರುವ ಕಾರಣ ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಆದ್ದರಿಂದ ಮಾದಿಗ ಸಮುದಾಯ ಸರ್ಕಾರದ ವತಿಯಿಂದ ನಡೆಯುವ ಡಾ.ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಮ್ ರವರ ಜನ್ಮ ದಿನೋತ್ಸವಕ್ಕೆ ಭಾಗವಹಿಸದೇ ಪ್ರತ್ಯೇಕವಾಗಿ ಜನ್ಮ ದಿನೋತ್ಸವವನ್ನು ಆಚರಿಸುವುದಾಗಿ ತಿಳಿಸಿದರು. ಸರ್ಕಾರ ಕೆಲವು ಸಹೋದರ ಜಾತಿಯ ಸಚಿವರುಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ವಿರೋಧ ವ್ಯಕ್ತಪಡಿಸಿ ಒಳ ಮೀಸಲಾತಿ ಜಾರಿ ತಡೆ ಹಿಡಿದಿದ್ದಾರೆ ಎಂದು ಆರೋಪಿಸಿದರು. 14ರಂದೇ ಡಾ.ಅಂಬೇಡ್ಕರ್ ಜಯಂತಿಯನ್ನು ದಲಿತ ಸಂಘರ್ಷ ಸಮಿತಿ ಹಾಗೂ ಮಾದಿಗ ಸಮುದಾಯದ ವತಿಯಿಂದ ಪಟ್ಟಣದ ರಾಘವೇಂದ್ರ ಹೋಟೆಲ್ ಮುಂಭಾಗದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು. ಪ್ರವಾಸಿ ಮಂದಿರದಿಂದ ತಮಟೆ ಚಳುವಳಿ ಮೂಲಕ ಸರ್ಕಾರವನ್ನು ಎಚ್ಚರಿಸಲು ಮೆರೆವಣಿಗೆ ಮಾಡಲಾಗುವುದು, ಪಟ್ಟಣದ ಓಂಕಾರ್ ಆಸ್ಪತ್ರೆಯ ಸಹಯೋಗದಲ್ಲಿ ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಚಿದಾನಂದ್, ಗುರುದತ್, ಹೊನ್ನೇನಹಳ್ಳಿ ಕೃಷ್ಣ, ದಂಡಿನಶಿವರ ಲಕ್ಷ್ಮೀಶ್, ಬಸವರಾಜು, ಕೆಂಪಣ್ಣ ಸೇರಿದಂತೆ ಇತರರು ಇದ್ದರು.