ಕೊಪ್ಪಳ ಜಿಲ್ಲೆಯ ಎರಡು ದಶಕಗಳ ಬೇಡಿಕೆಯಂತೆ ಇದೀಗ ಕೊಪ್ಪಳ ಜಿಲ್ಲಾ ಸಹಕಾರಿ ಬ್ಯಾಂಕ್ ಸ್ಥಾಪನೆಗೆ ಕಾಲ ಸನ್ನಿಹಿತವಾಗಿದೆ. ಪ್ರತ್ಯೇಕ ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸ್ಥಾಪನೆಗೆ ಸಿದ್ಧತೆ ನಡೆದಿದೆ.
ಎ.ಜಿ. ಕಾರಟಗಿ
ಕಾರಟಗಿ: ಕೊಪ್ಪಳ ಜಿಲ್ಲೆಯ ಎರಡು ದಶಕಗಳ ಬೇಡಿಕೆಯಂತೆ ಇದೀಗ ಕೊಪ್ಪಳ ಜಿಲ್ಲಾ ಸಹಕಾರಿ ಬ್ಯಾಂಕ್ ಸ್ಥಾಪನೆಗೆ ಕಾಲ ಸನ್ನಿಹಿತವಾಗಿದೆ. ಅದಕ್ಕಾಗಿ ಸಹಕಾರಿ ಇಲಾಖೆಯಲ್ಲಿ ಕಡತ ವಿಲೇವಾರಿ, ರಾಯಚೂರು-ಕೊಪ್ಪಳ ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ಬೇರ್ಪಟ್ಟು ಹೊಸ ಜಿಲ್ಲಾ ಸಹಕಾರಿ ಬ್ಯಾಂಕ್ ಸ್ಥಾಪನೆಗೆ ರೂಪುರೇಷ ಸಿದ್ಧತೆ ನಡೆದಿವೆ.ರಾಜ್ಯದಲ್ಲಿ ಒಟ್ಟು ಹೊಸ ೧೦ ಜಿಲ್ಲಾ ಸಹಕಾರಿ ಬ್ಯಾಂಕ್ ಸ್ಥಾಪನೆಯಾಗಲಿದೆ. ಒಂದು ಜಿಲ್ಲೆ ಒಂದು ಸಹಕಾರಿ ಬ್ಯಾಂಕ್ ಎನ್ನುವ ನಿಯಮದಡಿ ರಾಜ್ಯ ಸರ್ಕಾರ ಹೊಸ ಪ್ರತ್ಯೇಕ ಜಿಲ್ಲಾ ಸಹಕಾರಿ ಬ್ಯಾಂಕ್ ಸ್ಥಾಪಿಸಲು ಮುಂದಡಿ ಇಟ್ಟಿದೆ.
ಕೇಂದ್ರ ಸಹಕಾರಿ ಮಂತ್ರಾಲಯ ಮತ್ತು ನಬಾರ್ಡ್ ನಿರ್ದೇಶನದಂತೆ `ಒಂದು ಜಿಲ್ಲೆ ಒಂದು ಜಿಲ್ಲಾ ಸಹಕಾರಿ ಬ್ಯಾಂಕ್`ನ ತತ್ವದಡಿ ಸುಮಾರು ೨ ದಶಕಗಳ ಆನಂತರ ರಾಯಚೂರು ಜಿಲ್ಲೆಯಿಂದ ಕೊಪ್ಪಳ ಡಿಸಿಸಿ ಬ್ಯಾಂಕ್ ಪ್ರತ್ಯೇಕವಾಗಲಿದೆ.ವಿಜಯನಗರ, ರಾಮನಗರ , ಯಾದಗಿರಿ, ಹಾವೇರಿ, ಗದಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೊಪ್ಪಳ, ಉಡುಪಿ ಜಿಲ್ಲೆಗೆ ಪ್ರತ್ಯೇಕ ಬ್ಯಾಂಕ್ ಸ್ಥಾಪನೆಗೆ ರಾಜ್ಯ ಸರ್ಕಾರದ ಬಳಿ ಪ್ರಸ್ತಾವನೆ ಇತ್ತು.
ಇದೀಗ `ಒಂದು ಜಿಲ್ಲೆ ಒಂದು ಸಹಕಾರಿ ಬ್ಯಾಂಕ್`(ಡಿಸಿಸಿ ಬ್ಯಾಂಕ್) ಸ್ಥಾಪಿಸಬೇಕೆಂದು ನಬಾರ್ಡ್ ಸೂಚನೆಯನ್ವಯ ಪ್ರಸಕ್ತ ಆರ್ಥಿಕ ವರ್ಷಕ್ಕೆ ಪ್ರತ್ಯೇಕ ಜಿಲ್ಲಾ ಬ್ಯಾಂಕ್‌ಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳ ಸಿಇಒಗಳಿಗೆ ಪತ್ರ ಬರೆದು, ಪ್ರತ್ಯೇಕ ಬ್ಯಾಂಕ್‌ಗಳ ರಚನೆಗೆ ಮಾತೃ ಸಂಸ್ಥೆಗಳಿಂದ ವಿವರಗಳನ್ನು ಕೇಳಿದೆ.ಫೆ. ೨೫ರಂದು ಈ ಪತ್ರಗಳನ್ನು ಆಯಾ ಜಿಲ್ಲಾ ಕೇಂದ್ರ ಬ್ಯಾಂಕ್‌ಗಳಿಗೆ ರವಾನಿಸಿದ್ದು, ಪತ್ರದಲ್ಲಿ ಮಾತೃ ಜಿಲ್ಲಾ ಕೇಂದ್ರ ಬ್ಯಾಂಕಿನ ಲೇವಾದೇವಿ ವಿವರ, ವಾರ್ಷಿಕ ಬ್ಯಾಲೆನ್ಸ್ ಶೀಟ್, ಚರ ಮತ್ತು ಸ್ಥಿರ ಆಸ್ತಿಗಳ ವಿವರ, ಅಪೆಕ್ಸ್ ಮತ್ತು ನಬಾರ್ಡ್ ಬ್ಯಾಂಕಿನ ಸಾಲಗಳ ವಿವರ, ರೈತರ, ಶೇರುದಾರ ಸಹಕಾರಿ ಸಂಘಗಳ ವಿವರ, ಲಭ್ಯವಿರುವ ಮೂಲ ಸೌಕರ್ಯ, ಮಾನವ ಸಂಪನ್ಮೂಲಗಳ ಮಾಹಿತಿ ಜತೆಗೆ ಶಾಸನಬದ್ಧವಾದ, ನಿಯಂತ್ರಣ ಪರಿಗಣಿಸಲ್ಪಡುವ ಎಲ್ಲ ವಿವರಗಳನ್ನು ನೀಡುವಂತೆ ಪತ್ರದಲ್ಲಿ ವಿವರಿಸಿದ್ದಾರೆ.
ರಾಯಚೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಆರ್‌ಡಿಸಿಸಿ ಬ್ಯಾಂಕ್)ಗೆ ರಾಯಚೂರು-ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಆರ್‌ಕೆಡಿಸಿಸಿ ಬ್ಯಾಂಕ್) ಎಂದು ನಾಮಕರಣ ಮಾಡಿ, ಕೊಪ್ಪಳ ಜಿಲ್ಲೆಯ ಜನರ ಮೂಗಿಗೆ ತುಪ್ಪ ಹಚ್ಚುವ ಕೆಲಸ ನಡೆದಿತ್ತು. ಕಳೆದ ವರ್ಷ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಕೊಪ್ಪಳ ಜಿಲ್ಲೆಯಲ್ಲಿ ಪ್ರತ್ಯೇಕ ಕೇಂದ್ರ ಸಹಕಾರಿ ಬ್ಯಾಂಕ್ ಸ್ಥಾಪಿಸುವಂತೆ ಮನವಿ ಮಾಡಿದ್ದರು. ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸಹ ಸಾಥ್ ನೀಡಿದ್ದರು.ಈಗ ಜಿಲ್ಲೆಯ ಸಹಕಾರಿಗಳ ಹೋರಾಟದ ಫಲವಾಗಿ ಪ್ರತ್ಯೇಕ ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸ್ಥಾಪನೆಗೆ ಎಲ್ಲ ಸಿದ್ಧತೆಗಳು ಸದ್ದಿಲ್ಲದೆ ನಡೆದಿದೆ.
ಜಿಲ್ಲೆಯ ರೈತರ, ಸಹಕಾರಿಗಳ ಬೇಡಿಕೆಯಂತೆ ಪ್ರತ್ಯೇಕ ಜಿಲ್ಲಾ ಕೇಂದ್ರ ಬ್ಯಾಂಕ್ ಸ್ಥಾಪನೆಯಾಗುತ್ತಿದೆ. ನಮ್ಮ ಕೊಪ್ಪಳ ಜಿಲ್ಲೆ ರೈತರಿಗೆ ಇದರಿಂದ ಅನುಕೂಲವಾಗಲಿದೆ. ಸಹಕಾರಿ ಸಂಘಗಳ ಸದಸ್ಯರಿಗೆ ಅನುಕೂಲಕ್ಕಾಗಿ ಸರ್ಕಾರದ ಮೇಲೆ ಒತ್ತಡ ತಂದು ಕೊಪ್ಪಳ ಜಿಲ್ಲೆಗೆ ಪ್ರತ್ಯೇಕ ಬ್ಯಾಂಕ್ ರಚನೆಗೆ ಮುಂದಾಗಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.ಜಿಲ್ಲೆಯ ರೈತರಿಗೆ, ಸಹಕಾರಿ ಸಂಘಗಳಿಗೆ ಪ್ರತ್ಯೇಕ ಬ್ಯಾಂಕ್ ಅವಶ್ಯಕತೆ ಇತ್ತು. ಇದೀಗ ಜಿಲ್ಲಾ ಉಸ್ತುವಾರಿ ಸಚಿವ ತಂಗಡಗಿ, ಶಾಸಕರು ಮತ್ತು ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಅವರು ಇನ್ನಷ್ಟು ಪ್ರಯತ್ನ ಮಾಡಿ ತ್ವರಿತವಾಗಿ ಕಾರ್ಯಾರಂಭ ಮಾಡಿಸಬೇಕಾಗಿದೆ. ರಾಯಚೂರು ಡಿಸಿಸಿ ಬ್ಯಾಂಕ್‌ದಿಂದ ಕೊಪ್ಪಳ ಜಿಲ್ಲೆಗೆ ಬೇರ್ಪಟ್ಟ ಬೆಳವಣಿಗೆ ಜಿಲ್ಲೆ ಜನರಿಗೆ ಖುಷಿ ತಂದಿದೆ ಎಂದು ಗಂಗಾವತಿ ಪಿಕಾರ್ಡ್ ಬ್ಯಾಂಕ್‌ನ ದೊಡ್ಡಪ್ಪ ದೇಸಾಯಿ ಹೇಳಿದರು.