ಸಾರಾಂಶ
ಮೈಸೂರು ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆ ವಿಭಜನೆಗೊಂಡು ಎರಡೂವರೆ ದಶಕಗಳೇ ಕಳೆದಿದ್ದರೂ, ಜಿಲ್ಲಾ ಸಹಕಾರ ಬ್ಯಾಂಕ್ ಪ್ರತ್ಯೇಕವಾಗದಿರುವುದು ಸರ್ಕಾರದ ಗಮನದಲ್ಲಿ ಇದೆಯಾ, ಇದ್ದರೆ ಈಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಶಾಸಕ ಎ .ಆರ್. ಕೃಷ್ಣಮೂರ್ತಿ ಸದನದಲ್ಲಿ ಸರ್ಕಾರದ ಗಮನ ಸೆಳೆದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮೈಸೂರು ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆ ವಿಭಜನೆಗೊಂಡು ಎರಡೂವರೆ ದಶಕಗಳೇ ಕಳೆದಿದ್ದರೂ, ಜಿಲ್ಲಾ ಸಹಕಾರ ಬ್ಯಾಂಕ್ ಪ್ರತ್ಯೇಕವಾಗದಿರುವುದು ಸರ್ಕಾರದ ಗಮನದಲ್ಲಿ ಇದೆಯಾ, ಇದ್ದರೆ ಈಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಶಾಸಕ ಎ .ಆರ್. ಕೃಷ್ಣಮೂರ್ತಿ ಸದನದಲ್ಲಿ ಸರ್ಕಾರದ ಗಮನ ಸೆಳೆದರು. ಶಾಸಕರ ಪ್ರಶ್ನೆಗೆ ಸಹಕಾರ ಸಚಿವ ಕೆ.ರಾಜಣ್ಣ ಪ್ರತಿಕ್ರಿಯಿಸಿ, ಈ ವಿಚಾರ ಸರ್ಕಾರದ ಗಮನಕ್ಕೆ ಬಂದಿದೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ್ನು ವಿಭಜಿಸಿ ಚಾಮರಾಜನಗರ ಜಿಲ್ಲೆಗೆ ಪ್ರತ್ಯೇಕವಾಗಿ ಹೊಸ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕನ್ನು ಸ್ಥಾಪಿಸಲು, ಮೈಸೂರು ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆಡಳಿತ ಸಮಿತಿ ಮತ್ತು ವ್ಯವಸ್ಥಾಪಕರಿಗೆ ನಿರ್ದೇಶನ ನೀಡಲಾಗಿದೆ. ಅಂತೆಯೇಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ 2016 ಜ.19 ರಂದು ಬೆಂಗಳೂರು ನಬಾರ್ಡ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಿಗೆ ಬ್ಯಾಂಕಿನ ಆಡಿಟ್ ಮಾಡಲಾದ ಆರ್ಥಿಕ ವರದಿ ಮತ್ತು ಇತರೆ ವರದಿ ಸೇರಿ ಪ್ರಮುಖ ದಾಖಲೆಗಳನ್ನು ಸಲ್ಲಿಸಿ, ಚಾಮರಾಜನಗರ ಜಿಲ್ಲೆಗೆ ಪ್ರತ್ಯೇಕವಾದ ಡಿಸಿಸಿ ಬ್ಯಾಂಕನ್ನು ಸ್ಥಾಪಿಸಲು ಅನುಮತಿ ನೀಡುವಂತೆ ಪತ್ರ ಬರೆದಿದ್ದಾರೆ. ಮುಂದುವರೆದು ಬೆಂಗಳೂರಿನ ಎನ್.ಐ.ಆರ್.ಬಿ ನಿರ್ದೇಶಕ ಸದರಿ ಬ್ಯಾಂಕಿನ ಆರ್ಥಿಕ ಸ್ಥಿರತೆಯ ಬಗ್ಗೆ ಅಧ್ಯಯನ ಮತ್ತು ಪರಿಶೀಲನೆ ನಡೆಸಿ ಈ ಬಗ್ಗೆ ಸಬಲತಾ ವರದಿಯನ್ನು ಬ್ಯಾಂಕಿಗೆ 2016 ಡಿ.8 ರಲ್ಲಿ ಸಲ್ಲಿಸಿದ್ದಾರೆ.
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಬಲತಾ ವರದಿಯನ್ನು ಸಹಕಾರ ಸಂಘಗಳ ನಿಬಂಧಕರಿಗೆ 2016 ಡಿ.15 ರಂದು ಮುಂದಿನ ಕ್ರಮಕ್ಕಾಗಿ ಸಲ್ಲಿಸಿದ್ದಾರೆ. ಅದರಂತೆ ಸಹಕಾರ ಸಂಘಗಳ ನಿಬಂಧಕ 2016 ಡಿ.17 ರಂದು ಬೆಂಗಳೂರಿನ ನಬಾರ್ಡ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಿ ಚಾಮರಾಜನಗರ ಜಿಲ್ಲೆಗೆ ಪ್ರತ್ಯೇಕವಾದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕನ್ನು ಸ್ಥಾಪಿಸಲು ಆರ್.ಬಿ.ಐ ಗೆ ಶಿಫಾರಸು ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಸಂಬಂಧ ನಬಾರ್ಡ್ ಮತ್ತು ಆರ್.ಬಿ.ಐ. ಸಂಸ್ಥೆಗಳು ಅನುಮತಿ ನೀಡುವುದು ಬಾಕಿ ಇದೆ. ಈ ಸಂಸ್ಥೆಗಳು ಚಾಮರಾಜನಗರ ಜಿಲ್ಲೆಗೆ ಪ್ರತ್ಯೇಕವಾದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕನ್ನು ಸ್ಥಾಪಿಸಲು ಅನುಮತಿ ನೀಡಿದ ನಂತರ ಕ್ರಮ ವಹಿಸಲಾಗುವುದು ಎಂದರು.