ಧಾರವಾಡ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ವಿಭಜಿಸಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಒದಗಿಸುವ ತೀರ್ಮಾನದ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಲು ಹೋರಾಟಗಾರ, ವಕೀಲ ಬಿ.ಡಿ. ಹಿರೇಮಠ, ವೆಂಕಟೇಶ ಮಾಚಕನೂರು, ದಾನಪ್ಪ ಕಬ್ಬೇರ, ನೇಗಿನಾಳ ವಕೀಲರು, ಡಿ.ವಿ. ಕಮ್ಮಾರ, ಪ್ರಕಾಶ ಘಾಟಗೆ, ನಾಗರಾಜ ಗೌರಿ ಸೇರಿದಂತೆ ಹತ್ತುಕ್ಕೂ ಜನರ ತಂಡ ಮಂಗಳವಾರ ಬೆಳಗ್ಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ.

ರಾಜ್ಯಪಾಲರ ಬಳಿ ತೆರಳುವ ಮುನ್ನ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಭೇಟಿ ಮಾಡುವ ಹೋರಾಟಗಾರರು ಪ್ರತ್ಯೇಕ ಪಾಲಿಕೆಗೆ ರಾಜ್ಯಪಾಲರಿಂದ ಅಂಕಿತ ಹಾಕಿಸುವ ಭರವಸೆ ನೀಡಿದರೆ ಮಾತ್ರ ಲೋಕಭವನಕ್ಕೆ ತೆರಳಲಿದೆ. ಇಲ್ಲದಿದ್ದರೆ ಮರಳಿ ಧಾರವಾಡಕ್ಕೆ ಬಂದು ಮತ್ತೆ ಹೋರಾಟ ಮಾಡಲು ನಿರ್ಧರಿಸಿದೆ.

ಸಂಜೆ 7ಕ್ಕೆ ಅವಕಾಶ:

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪತ್ರದಂತೆ ರಾಜ್ಯಪಾಲರ ಕಚೇರಿಯಿಂದ ಮೇ 19ರ ಸಂಜೆ 7ಕ್ಕೆ ಹೋರಾಟಗಾರರೊಂದಿಗೆ ಭೇಟಿಗೆ ಅವಕಾಶ ದೊರಕಿದೆ. ಏತನ್ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಸಹ ರಾಜ್ಯಪಾಲರೊಂದಿಗೆ ಚರ್ಚಿಸಲು ಪತ್ರ ಬರೆದಿದ್ದು, ಅವರಿಗೂ ಮೇ 19 ಅಥವಾ 20ರಂದು ಸಮಯ ಕೊಡುವುದಾಗಿ ರಾಜ್ಯಪಾಲರ ಕಚೇರಿ ತಿಳಿಸಿದೆ.


ಈ ಹಿನ್ನೆಲೆಯಲ್ಲಿ ವಕೀಲ ಬಿ.ಡಿ. ಹಿರೇಮಠ ನೇತೃತ್ವದಲ್ಲಿ ಹೋರಾಟಗಾರರು ಸೋಮವಾರ ಸಂಜೆ ಸಭೆ ನಡೆಸಿ, ರಾಜ್ಯಪಾಲರನ್ನು ಭೇಟಿ ಮಾಡಿ ಪ್ರತ್ಯೇಕ ಪಾಲಿಕೆಯ ಭಾಗ್ಯ ಪಡೆದುಕೊಂಡು ಬರೋಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಡಿ. ಹಿರೇಮಠ, ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಯ ವಿಷಯದಲ್ಲಿ ಬಿಜೆಪಿ, ಕಾಂಗ್ರೆಸ್ ಎರಡೂ ಒಂದೇ ನಾಣ್ಯದ ಮುಖಗಳು ಇದ್ದಂತೆ. ಪಾಲಿಕೆ ರಚನೆ ವಿಚಾರದಲ್ಲಿ ಯಾರೂ ಹುಳಿ ಹಿಂಡುವ ಕೆಲಸ ಮಾಡಬೇಡಿ. ಪ್ರತ್ಯೇಕ ಮಹಾನಗರ ಪಾಲಿಕೆಯ ಸತ್ಯ ಪ್ರತಿಪಾದನೆ ಹೋರಾಟ ತೀವ್ರಗೊಂಡ ನಂತರ ಈಗ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಪತ್ರ ಬರೆದಿದ್ದಾರೆ. ಆದರೆ, ಈ ಕುರಿತು ವಿಳಂಬ ಧೋರಣೆ ತಾಳದೇ ರಾಜ್ಯಪಾಲರೊಂದಿಗೆ ಚರ್ಚಿಸಿ ಅಂಕಿತ ಹಾಕಲು ಏನು ಮಾಡಬೇಕು ಅದನ್ನು ಮಾಡಬೇಕು ಎಂದು ಕಿವಿಮಾತು ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ ಹಾಗೂ ಸಚಿವ ಸಂತೋಷ ಲಾಡ್ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ವಿಷಯದಲ್ಲಿ ಜನಾದೇಶ ಗೌರವಿಸಬೇಕು. ರಾಜ್ಯಪಾಲರ ಜೊತೆಗೆ ಚರ್ಚಿಸಿ ರಾಜ್ಯ ಸರ್ಕಾರ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ಒತ್ತಡ ಹಾಕಬೇಕು. ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದರು.

ಈ ವೇಳೆ ಮಹಾದೇವ ಹೋರಟ್ಟಿ, ಸಿ.ಎಸ್. ನೇಗಿನಾಳ, ವೆಂಕಟೇಶ ಮಾಚಕನೂರ, ರಾಜಶೇಖರ ಕಮತಿ, ಶಿವಶಂಕರ ಹಂಪಣ್ಣನವರ, ಅರವಿಂದ ಏಗನಗೌಡರ ಮತ್ತಿತರರು ಇದ್ದರು.ಹೋರಾಟಗಾರರೊಂದಿಗೆ ಪ್ರಹ್ಲಾದ ಜೋಶಿ ಹಾಗೂ ಸಂತೋಷ ಲಾಡ್‌ ಸಹ ರಾಜ್ಯಪಾಲರನ್ನು ಭೇಟಿ ಮಾಡಿ ಪ್ರತ್ಯೇಕ ಪಾಲಿಕೆಯ ಮಸೂದೆಗೆ ಸಹಿ ಹಾಕಿಸಿಕೊಂಡು ಬರುವುದು ನಮ್ಮ ತೀರ್ಮಾನ. ಮಂಗಳವಾರ ಧಾರವಾಡದಿಂದ ಹತ್ತು ಹೋರಾಟಗಾರರು ರಾಜಭವನಕ್ಕೆ ತೆರಳಲಿದ್ದೇವೆ. ಸಕಾರಾತ್ಮಕವಾಗಿ ಸ್ಪಂದಿಸಿ ಮಸೂದೆಗೆ ಸಹಿ ಮಾಡಲು ಒಪ್ಪಿದರೆ ಸರಿ. ಇಲ್ಲದೇ ಹೋದಲ್ಲಿ ಹೋರಾಟ ನಿರಂತರ.

ಬಿ.ಡಿ. ಹಿರೇಮಠ, ಹೋರಾಟಗಾರ