ಹೋರಾಟಗಾರರು ನೀಡಿದ ಸಮಯದ ಗಡುವಿನೊಳಗೆ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆಯ ಭಾಗ್ಯ ದೊರಯುವುದು ನಿಶ್ಚಿತ. ಈ ಕುರಿತಾಗಿ ಸರ್ಕಾರದ ಮಟ್ಟದಲ್ಲಿ ತಮಗೂ ಭರವಸೆ ದೊರೆತಿದೆ.
ಧಾರವಾಡ:
ಸರ್ಕಾರದಲ್ಲಿ ಮುಖ್ಯಮಂತ್ರಿ ಆದಿಯಾಗಿ ಹೊಸ ಮಂತ್ರಿ ಮಂಡಳ ಬಂದರೂ ನಮ್ಮದೇ ಕಾಂಗ್ರೆಸ್ ಸರ್ಕಾರ ಇದೆ. ಈ ಹಿನ್ನೆಲೆಯಲ್ಲಿ ಹೋರಾಟಗಾರರು ನೀಡಿದ ಸಮಯದ ಗಡುವಿನೊಳಗೆ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆಯ ಭಾಗ್ಯ ದೊರಯುವುದು ನಿಶ್ಚಿತ. ಈ ಕುರಿತಾಗಿ ಸರ್ಕಾರದ ಮಟ್ಟದಲ್ಲಿ ತಮಗೂ ಭರವಸೆ ದೊರೆತಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ನಾಗರಾಜ ಗೌರಿ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತ್ಯೇಕ ಮಹಾನಗರ ಪಾಲಿಕೆ ಬೇಡಿಕೆಯು ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಬಿಜೆಪಿ ಮುಖಂಡರ ಕುತಂತ್ರದಿಂದ ವಿಳಂಬವಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪಕ್ಷಾತೀತ ಹೋರಾಟಗಾರರ ಜೊತೆ ನಾನೂ ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗವಹಿಸಿದರು. ಆಗ ಧಾರವಾಡ ಜನರ ಭಾವನೆ ಮತ್ತು ಬೇಡಿಕೆಗಾಗಿ ಹತಾಶಗೊಂಡು ಬಿಜೆಪಿಯವರು ಹೋರಾಟದಲ್ಲಿ ಭಾಗವಹಿಸಿದರು ಎಂದು ಹೋರಾಟದ ಹಾದಿಯನ್ನು ಹೇಳಿದರು.
ಪ್ರತ್ಯೇಕ ಪಾಲಿಕೆಯ ಇಡೀ ಹೋರಾಟದಲ್ಲಿ ಅನವಶ್ಯಕವಾಗಿ ಗೊಂದಲ ಸೃಷ್ಟಿಸಿ ಹೋರಾಟ ಹಾದಿ ತಪ್ಪಿಸಲು ಯತ್ನಿಸಿದ್ದು ಬಿಜೆಪಿ ಮುಖಂಡರು ಎಂಬುದು ಸ್ಪಷ್ಟ. ಈ ಎಲ್ಲ ಬೆಳವಣಿಗೆಗಳಿಂದ ಆಕ್ರೋಶಗೊಂಡ ನಂತರ ಹೋರಾಟಗಾರರು ರಾಜ್ಯಪಾಲರನ್ನು ಭೇಟಿ ಮಾಡಲಾಯಿತು. ಅಲ್ಲದೇ ಅಂದಿನ ಸಚಿವ ಸಂತೋಷ ಲಾಡ್ ಅವರ ನೇತೃತ್ವದಲ್ಲಿಯೂ ರಾಜ್ಯಪಾಲರನ್ನು ಭೇಟಿ ಮಾಡಿ ಪ್ರತ್ಯೇಕ ಪಾಲಿಕೆ ಮಸೂದೆ ಅಂಗೀಕಾರಕ್ಕೆ ಮನವಿ ಮಾಡಲಾಯಿತು. ನಮ್ಮ ಮುಖಂಡರ ಮತ್ತು ಹೋರಾಟಗಾರರ ಒತ್ತಡದಿಂದ ರಾಜ್ಯಪಾಲರು ಮಸೂದೆಯನ್ನು ಸರ್ಕಾರಕ್ಕೆ ಕಳುಹಿಸಿದರು ಎಂದು ನಾಗರಾಜ ಗೌರಿ ಸಮರ್ಥನೆ ಮಾಡಿಕೊಂಡರು.ನಂತರ ಮುಖ್ಯಮಂತ್ರಿ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರತ್ಯೇಕ ಪಾಲಿಕೆ ಅಗತ್ಯತೆ ಮನವರಿಕೆ ಮಾಡಿಕೊಡಲಾಯಿತು. ಸಚಿವ ಸಂಪುಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಸರ್ಕಾರದ ಪರವಾಗಿ ಸ್ಪಷ್ಟ ಭರವಸೆ ನೀಡಲಾಯಿತು. ಈ ವಿಷಯದಲ್ಲಿ ಸರ್ಕಾರದ ಮೇಲೆ ನಂಬಿಕೆಯಿದೆ ಎಂದರು.
ಈ ಹೋರಾಟದ ಭಾಗವಾಗಿ ಪಾಲಿಕೆಯಲ್ಲಿನ ಕಾಂಗ್ರೆಸ್ ಪಕ್ಷದ 12 ಸದಸ್ಯರು ಪಾಲಿಕೆ ಮತ್ತು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ಸಲ್ಲಿಸಿದ ರಾಜೀನಾಮೆಯನ್ನು ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಅಂಗೀಕರಿಸಿಲ್ಲ ಎಂದು ಸ್ಪಷ್ಟಪಡಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಏಗನಗೌಡರ, ಪ್ರತ್ಯೇಕ ಪಾಲಿಕೆಯಲ್ಲಿ ಪಕ್ಷಾತೀತವಾಗಿ ಹೋರಾಟಗಾರರು, ಸಂಘ-ಸಂಸ್ಥೆಗಳು, ಸಾಹಿತಿಗಳು, ಬೇರೆ ಬೇರೆ ಸಮುದಾಯದ ಮುಖಂಡರು ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಲಾಯಿತು ಎಂದರು.
ಹನುಮಂತಪ್ಪ ಕೊರವರ, ಮುಖಂಡರಾದ ತುಳಸಪ್ಪ ಪೂಜಾರ, ವೀರಣ್ಣ ಶೆಟ್ಟರ್ ಸುದ್ದಿಗೋಷ್ಠಿಯಲ್ಲಿದ್ದರು.