ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಸಹ ಶಿಕ್ಷಣಕ್ಕಿಂತ ಮಹಿಳಾ ಕಾಲೇಜು, ಶಿಕ್ಷಣ ಸಂಸ್ಥೆಗಳಂತೆ ಈಗಿರುವ ಪ್ರತ್ಯೇಕ ವಾತಾವರಣವನ್ನು ಹೆಚ್ಚಿಸುವ ಅವಶ್ಯಕತೆ ಇದೆ. ಈ ಬಗ್ಗೆ ಗಂಭೀರ ಚರ್ಚೆಯಾಗಬೇಕು ಎಂದು ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮೀಗೌಡ ಪ್ರತಿಪಾದಿಸಿದರು.ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ 2 ಮತ್ತು 3ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಮಾಡಿ ಅವರು ಘಟಿಕೋತ್ಸವ ಭಾಷಣ ಮಾಡಿದರು.
ಮಹಿಳೆಯರಿಗೆ ಮೀಸಲಾದ ಕಾಲೇಜು ಮತ್ತು ಸಹಶಿಕ್ಷಣದ ಅವಕಾಶವಿರುವ ಕಾಲೇಜುಗಳಲ್ಲಿ ಕಲಿಯುತ್ತಿರುವ ಯುವತಿಯರ ವ್ಯಕ್ತಿತ್ವದಲ್ಲಿ ಗಮನಾರ್ಹ ವ್ಯತ್ಯಾಸಗಳನ್ನು ನಾನು ಗಮನಿಸಿದ್ದೇನೆ. ದೀರ್ಘಕಾಲ ಸಹ ಶಿಕ್ಷಣದ ಸಂಸ್ಥೆಯಲ್ಲೇ ದುಡಿದ ನನಗೆ ಅಲ್ಲಿನ ಯುವತಿಯರು ಪ್ರತಿಭಾವಂತರಿದ್ದರೂ ಸ್ಪಷ್ಟವಾಗಿ ತಮ್ಮ ನಿಲುವನ್ನು ವ್ಯಕ್ತಿಪಡಿಸದ, ಸ್ವತಂತ್ರವಾಗಿ ಯೋಚಿಸದ, ಯಾವುದೇ ಹೊಣೆಗಾರಿಕೆಯನ್ನೂ ಸ್ವಇಚ್ಛೆಯಿಂದ ಮುನ್ನುಗ್ಗಿ ತೆಗೆದುಕೊಳ್ಳುವುದಿಲ್ಲ.ಈ ವ್ಯಕ್ತಿತ್ವ ನಿರ್ಮಾಣದ ಹಿಂದೆ ಸಾಮಾಜೀಕರಣದ ಗಾಢ ಪ್ರಭಾವವನ್ನು ಗುರುತಿಸಬಹುದು. ಮತ್ತೊಂದೆಡೆ ಯುವತಿಯರೇ ಇರುವ ಶಿಕ್ಷಣ ಸಂಸ್ಥೆಗಳಲ್ಲಿ ಇದಕ್ಕೆ ತದ್ವಿರುದ್ಧ. ಪ್ರತಿಯೊಂದು ಕಾರ್ಯವನ್ನೂ ಹೆಣ್ಣು ಮಕ್ಕಳೇ ಮಾಡಬೇಕಿರುವುದರಿಂದ ಸಂಕೋಚ, ಭಯ, ಅನುಮಾನ ಇಂತಹ ಯಾವ ಹಿಂಜರಿಕೆಯೂ ಇಲ್ಲದೆ ಎಲ್ಲ ಜವಾಬ್ದಾರಿಗಳಿಗೂ ಹೆಗಲು ಕೊಡುತ್ತಾರೆ. ಅವರ ಆಲೋಚನೆಯಲ್ಲಿನ ಸ್ಪಷ್ಟತೆ, ಅಭಿವ್ಯಕ್ತಿಯಲ್ಲಿ ಹೊಸತನ, ನಿರ್ಭಿಡತೆಯ ನಡಿಗೆ ಇವೆಲ್ಲವನ್ನೂ ನೋಡಿದಾಗ ಮಹಿಳೆಯರಿಯರ ಶಿಕ್ಷಣಕ್ಕೆ ಪ್ರತ್ಯೇಕ ವಾತಾವರಣದ ಅಗತ್ಯ ಕಂಡುಬರುತ್ತದೆ. ಈ ಬಗ್ಗೆ ಹೆಚ್ಚು ಚಿಂತನೆಯಾಗಬೇಕಿದೆ ಎಂದು ಹೇಳಿದರು.
ಪಠ್ಯದ ಬಗ್ಗೆಯೂ ಚರ್ಚೆಯಾಗಲಿ: ಮಹಿಳಾ ವಿಶ್ವವಿದ್ಯಾಲಯಗಳು ಅಳವಡಿಸಿಕೊಂಡಿರುವ ಪಠ್ಯಕ್ರಮವು ಮಹಿಳಾ ಸಬಲೀಕರಣಕ್ಕೆ, ಅವರನ್ನು ವೈಚಾರಿಕರನ್ನಾಗಿ ಮಾಡಲು ಪೂರಕವಾಗಿದೆಯೇ, ಅವರಲ್ಲಿನ ಪರಂಪರಾಗತ ಜ್ಞಾನವನ್ನು ಗುರುತಿಸಿ ಮಾನ್ಯತೆ ನೀಡುವ ಕೆಲಸವಾಗುತ್ತಿದೆಯೇ ಅಥವಾ ಇತರೆ ವಿಶ್ವವಿದ್ಯಾಲಯಗಳ ಮಾದರಿಯಲ್ಲೇ ತಾವೂ ಪಠ್ಯಕ್ರಮ ಅನುಸರಿಸುತ್ತಿವೆಯೇ ಎಂಬ ಬಗ್ಗೆ ಮುಕ್ತ ಚರ್ಚೆ ಆಗಬೇಕಿದೆ ಎಂದು ಕೂಡ ಅವರು ಪ್ರತಿಪಾದಿಸಿದರು.ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಕುಲಪತಿ ಡಾ.ಟಿ.ಎಂ.ಮಂಜುನಾಥ, ಕುಲಸಚಿವ(ಆಡಳಿತ) ಬಿ.ಸೀಮಾ ನಾಯಕ್, ಕುಲಸಚಿವ (ಮೌಲ್ಯಮಾಪನ) ಪ್ರೊ.ಎಸ್.ಸತೀಶ್, ವಿತ್ತಾಕಾರಿ ಎಂ.ಎಸ್.ಚೇತನ್ ಕುಮಾರ್ ಮತ್ತಿತರರಿದ್ದರು. 3573 ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನಮಹಾರಾಣಿ ಕ್ಲಸ್ಟರ್ ವಿವಿಯು 2023-24 ಮತ್ತು 2024-25ನೇ ಸಾಲಿನ ಕ್ರಮವಾಗಿ ಎರಡು ಮತ್ತು ಮೂರನೇ ಘಟಿಕೋತ್ಸವ ಒಟ್ಟಿಗೆ ಆಯೋಜಿಸಿದ್ದರಿಂದ ಎರಡೂ ವರ್ಷದಿಂದ ವಿವಿಧ ಪದವಿ ಮತ್ತು ಸ್ನಾತಕೋತ್ತರ ಪದವಿ ವಿಭಾಗದಿಂದ ಒಟ್ಟಾರೆ 3573 ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಮಾಡಲಾಯಿತು. 107 ವಿದ್ಯಾರ್ಥಿನಿಯರಿಗೆ ವಿವಿಧ ವಿಭಾಗದಲ್ಲಿ ರ್‍ಯಾಂಕ್ ಮತ್ತು 52 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಯಿತು.
6 ಗಣ್ಯರಿಗೆ ಗೌರವ ಡಾಕ್ಟರೇಟ್ಖ್ಯಾತ ಚಿತ್ರ ನಟಿ ಭಾರತೀ ವಿಷ್ಣುವರ್ಧನ್, ಹೋಮಿಯೋಪಥಿ ವೈದ್ಯ ಡಾ.ಬಿ.ಟಿ. ರುದ್ರೇಶ್, ಶಿಕ್ಷಣ ತಜ್ಞೆ ಡಾ.ಎಚ್.ಎನ್. ಉಷಾ, ಬಯೋಕಾನ್ ಲಿಮಿಟೆಡ್‌ನ ಡಾ. ಕಿರಣ್ ಮಜುಂದಾರ್ ಷಾ, ಸ್ತ್ರೀವಾದಿ ಲೇಖಕಿ ದು. ಸರಸ್ವತಿ ಹಾಗೂ ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದ ಕೃಷ್ಣಮೂರ್ತಿ ಅವರಿಗೆ ವಿವಿಯು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಯಿತು.ವೈವಾಹಿಕ ಹಾಗೂ ಸಾಮಾಜಿಕ ತೊಡಕುಗಳಿಂದ ಮಹಿಳೆಯರ ಓದು ಕುಂಠಿತವಾಗಲಿದೆ. ಇಂತಹ ಸವಾಲುಗಳನ್ನು ಮೆಟ್ಟಿ ನಿಂತು ಶಿಕ್ಷಣವಂತರಾಗಬೇಕು. ಸರ್ಕಾರವೂ ಸಹ ಮಹಿಳೆಯರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಹಲವಾರು ಯೋಜನೆಗಳನ್ನು ತಂದು ಕೋಟಿಗಟ್ಟಲೆ ಅನುದಾನ ಮೀಸಲಿಟ್ಟಿದೆ. ಇದರ ಸಮರ್ಪಕ ಬಳಕೆ ಆಗಬೇಕು.
- ಡಾ. ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ