ಸಾರಾಂಶ
ಸಮಾಜವನ್ನುತಪ್ಪು ದಾರಿಗೆಳೆಯುವ ಮಾದಕ ವಸ್ತುಗಳ ನಿಗ್ರಹಕ್ಕೆ ಪೊಲೀಸರು ಶಕ್ತಿಮೀರಿ ಶ್ರಮಿಸುತ್ತಾರೆ. ಆದರೆ, ಅಂಥ ಅಪರಾಧಗಳು ಮಾತ್ರ ಪದೇಪದೆ ಘಟಿಸುತ್ತಲೇ ಇವೆ. ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಮೂವರ ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಗಾಂಜಾ ಮಾರಾಟ ಹಾಗೂ ಗಾಂಜಾ ಗಿಡ ಬೆಳೆದಿದ್ದ ಸ್ಥಳಗಳ ಮೇಲೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.ನಗರದ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಳಲಿಕೊಪ್ಪದಲ್ಲಿ ಮನೆ ಹಿಂಭಾಗ ಗಾಂಜಾ ಗಿಡ ಬೆಳೆಸಲಾಗಿತ್ತು. ಖಚಿತ ವರ್ತಮಾನದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ನಜರತ್ ಯಾನೆ ನಸ್ರು ಎಂಬ ಆರೋಪಿಯನ್ನು ವಶಕ್ಕೆ ಪಡೆದರು. ಒಟ್ಟಾರೆ 12 ಕೆಜಿ 350 ಗ್ರಾಂ ತೂಕದ ಹಸಿ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಡಿವೈಎಸ್‌ಪಿ ಬಾಲರಾಜ್, ಇನ್‌ಸ್ಪೆಕ್ಟರ್ ಮಂಜುನಾಥ್, ಸಬ್ ಇನ್‌ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.ಭದ್ರಾವತಿ ಪ್ರಕರಣ:
ಮತ್ತೊಂದು ಪ್ರಕರಣ ಭದ್ರಾವತಿ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯ ಕಣಕಟ್ಟೆ ಗೋಂಧಿ ಚಾನೆಲ್ ಬಳಿ ನಡೆದಿದೆ. ಚಾನೆಲ್ ಸಮೀಪ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಭದ್ರಾವತಿ ಸೀಗೆಬಾಗಿ ನಿವಾಸಿ ಸಮೀವುಲ್ಲಾ (37) ಹಾಗೂ ದಾವಣಗೆರೆ ಜಿಲ್ಲೆ ಚನ್ನಗಿರಿಯ ದಾದಾಪೀರ್ (28) ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದರು.
₹54 ಸಾವಿರ ಮೌಲ್ಯದ 1 ಕೆ.ಜಿ 618 ಗ್ರಾಂ ತೂಕದ ಒಣ ಗಾಂಜಾ, 1500 ನಗದು, ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ. ಡಿವೈಎಸ್‌ಪಿ ನಾಗರಾಜ್, ಇನ್‌ಸ್ಪೆಕ್ಟರ್ ಶ್ರೀಶೈಲಕುಮಾರ್, ಸಬ್ ಇನ್‌ಸ್ಪೆಕ್ಟರ್ ಶ್ರೀಕೃಷ್ಣಕುಮಾರ್ ಮಾನೆ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.- - - (-ಸಾಂದರ್ಭಿಕ ಚಿತ್ರ)
-ಗಾಂಜಾ.ಜೆಪಿಜಿ: