ಕನ್ನಡಪ್ರಭ ವಾರ್ತೆ ಶಿರಾ
ನಗರದಲ್ಲಿ ದಿನೇ ದಿನೇ ಜನಸಂಖ್ಯೆ ಹೆಚ್ಚುತ್ತಿದ್ದು, ಕಸದ ಉತ್ಪಾದನೆಯ ಹೆಚ್ಚಾಗಿದೆ. ಕಸದ ನಿರ್ವಹಣೆಯಲ್ಲಿ ಸಾರ್ವಜನಿಕರದ್ದು ಮಹತ್ತರವಾದ ಪಾತ್ರ ಇದ್ದು, ತಮ್ಮ ಮನೆಗಳಲ್ಲಿ ಉತ್ಪತ್ತಿಯಾದ ಕಸವನ್ನು ಹಸಿ ಕಸ ಹಾಗೂ ಒಣ ಕಸವನ್ನಾಗಿ ಬೇರ್ಪಡಿಸಿ ನಗರಸಭೆಯ ವಾಹನ ಬಂದಾಗ ನೀಡಬೇಕು. ಒಂದು ವೇಳೆ ಆ ರೀತಿ ಮಾಡದೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದರೆ ದಂಡ ವಿಧಿಸಿ ಎಂದು ಶಾಸಕ ಟಿ.ಬಿ.ಜಯಚಂದ್ರ ಅವರು ಸೂಚಿಸಿದರು.ಅವರು ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನಗರದಲ್ಲಿ ಎಲ್ಲೆಂದರಲ್ಲಿ ಕಸವನ್ನು ಎಸೆದು ನಗರದ ಸೌಂದರ್ಯವನ್ನು ಹಾಳು ಮಾಡಬೇಡಿ. ಯಾರೇ ತಪ್ಪು ಮಾಡಿದರೂ ದಂಡ ವಿಧಿಸಿ ಅದೇ ರೀತಿ ನಗರದಲ್ಲಿ ಅನುಮತಿ ಪಡೆಯದೆ ಫ್ಲೆಕ್ಸ್ ಅಳವಡಿಸಿದರೆ ಅವರಿಗೂ ಸಹ ದಂಡ ವಿಧಿಸಿ ಎಂದು ತಿಳಿಸಿದರು.
ನಗರದಲ್ಲಿ ಮನೆ ಮನೆಗೆ ನೀರು ಸರಬರಾಜು ಕಲ್ಪಿಸುವ ಉದ್ದೇಶದಿಂದ ಹೇಮಾವತಿ ನಾಲೆ ಮೂಲಕ ಶಿರಾ ದೊಡ್ಡ ಕೆರೆಯಲ್ಲಿ ಇರುವ ನೀರನ್ನು ಮುಂದಿನ ೩೦ ವರ್ಷಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಸುಮಾರು ೮೫ ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಅನುಷ್ಠಾನಗೊಳಿಸಲಾಗಿದೆ. ಈಗಾಗಲೇ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಆಗಸ್ಟ್ ವೇಳೆಗೆ ಕಾಮಗಾರಿ ಮುಗಿಸಿಕೊಡಲಾಗುವುದು ಎಂದು ಅಮೃತ್ ೨ ಯೋಜನೆಯ ಎಂಜಿನಿಯರ್ ಮಿಥುನ್ ಅವರು ಸಭೆಗೆ ಮಾಹಿತಿ ನೀಡಿದರು. ಎಂಜಿನಿಯರ್ ಅವರು ಮಾಹಿತಿ ನೀಡಿದ ನಂತರ ನಗರಸಭೆ ಸದಸ್ಯರಾದ ಉಮಾ ವಿಜಯರಾಜ್, ಅಂಜಿನಪ್ಪ, ಅಂಬುಜಾಕ್ಷೆ ಸೇರಿದಂತೆ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಶಿರಾದಲ್ಲಿ ಕಳೆದ ಒಂದುವರೆ ವರ್ಷದಿಂದ ಮನೆ ಮನೆ ಗಂಗೆ ನೀರಿನ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿಗೆ ತೆಗೆದ ಗುಂಡಿಯನ್ನು ಇದುವರೆಗೂ ಸರಿಯಾಗಿ ಮುಚ್ಚಿಲ್ಲ. ಇದರಿಂದ ಜನಸಮಾನ್ಯರು ಸರಿಯಾಗಿ ಸಂಚರಿಸಲು ಸಾಧ್ಯವಾಗದೆ ಅಪಘಾತಗಳು ಸಂಭವಿಸುತ್ತಿವೆ. ಸರಿಯಾದ ರೀತಿಯಲ್ಲಿ ಕಾಮಗಾರಿ ಮಾಡಿ ಎಂದು ಎಚ್ಚರಿಕೆ ನೀಡಿದರು.ಶಾಸಕ ಟಿ.ಬಿ.ಜಯಚಂದ್ರ ಅವರು ಮನೆ ಮನೆ ಗಂಗೆ ಕಾಮಗಾರಿಯು ಕೇಂದ್ರ ಮತ್ತು ರಾಜ್ಯ ಪುರಷ್ಕೃತ ಕಾಮಗಾರಿಯಾದರೂ ಸಹ ಕೇಂದ್ರ ಸರ್ಕಾರ ಸಕಾಲಕ್ಕೆ ಹಣ ಬಿಡುಗಡೆ ಮಾಡುವುದಿಲ್ಲ. ರಾಜ್ಯದ ಎಲ್ಲಾ ಕಡೆ ಮನೆ ಮನೆ ಗಂಗೆ ಕಾಮಗಾರಿಗೆ ಕಳೆದ ಮಾರ್ಚ್ ೨೦೨೫ರ ವೇಳೆಗೆ ಸುಮಾರು ೧೩೦೦೦ ಕೋಟಿ ರು. ಹಣ ಬಿಡುಗಡೆ ಮಾಡಬೇಕಿತ್ತು. ಆದರೆ ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿ ಕಾಮಗಾರಿ ಮಾಡಲಾಗುತ್ತಿದೆ ಎಂದರು. ಸಭೆಯಲ್ಲಿ ನಗರಸಭಾ ಅಧ್ಯಕ್ಷ ಜಿಷಾನ್ ಮೊಹಮದ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಪೌರಾಯುಕ್ತ ರುದ್ರೇಶ್ ಸೇರಿದಂತೆ ನಗರಸಭಾ ಸದಸ್ಯರುಗಳು ಹಾಜರಿದ್ದರು.