ಸಾರಾಂಶ
ಕಾಪು: ಕರ್ನಾಟಕದಲ್ಲಿ ಸುಮಾರು ೫೧ ಸಮುದಾಯಗಳು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿವೆ. ವಾಲ್ಮೀಕಿ, ಬೇಡ, ಮರಾಠಿ, ನಾಯ್ಕದಂತಹ ಬಲಿಷ್ಠ ಹಾಗೂ ಪ್ರಭಾವಿ ಸಮುದಾಯಗಳು ಸರ್ಕಾರದ ಎಲ್ಲಾ ಮೀಸಲಾತಿಯ ಅವಕಾಶಗಳನ್ನು ಹಾಗೂ ಸರ್ಕಾರದ ಸವಲತ್ತು ಕಬಳಿಸಿಕೊಂಡು ಕೊರಗರಂತಹ ಸಣ್ಣಪುಟ್ಟ ಸಮುದಾಯಗಳಿಗೆ ವಂಚಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಜನಸಂಖ್ಯೆ, ಶಿಕ್ಷಣ, ಭೂ ಬಳಕೆ, ಹಾಗೂ ರಾಜಕೀಯವಾಗಿಯೂ ಈ ಸಮುದಾಯಗಳು ಪ್ರಬಲವಾಗಿವೆ.
ಅನಾದಿ ಕಾಲದಿಂದಲೂ ಸಾಮಾಜಿಕ ಶೋಷಣೆ, ದಬ್ಬಾಳಿಕೆಗಳಿಂದ ನೊಂದು ಬೆಂದಿರುವ ಹಾಗೂ ವಿನಾಶದ ಅಂಚಿನಲ್ಲಿರುವ ಕೊರಗರಂತಹ ಅಸುರಕ್ಷಿತ ಸಮುದಾಯಗಳು ಅವರೊಂದಿಗೆ ಸ್ಫರ್ಧಿಸಿ ಸಮಪಾಲು ಪಡೆಯುವುದು ಸಾಧ್ಯವೇ ಇಲ್ಲ. ಮೇಲಾಗಿ ಸರ್ಕಾರವೇ ಕೊರಗರು ಮತ್ತು ಜೇನುಕುರುಬರನ್ನು ಪ್ರೈಮಿಟಿವ್ ಟ್ರೈಬ್ಸ್ ಅಂದರೆ ‘ನೈಜ ದುರ್ಬಲ ಬುಡಕಟ್ಟು’ ಸಮುದಾಯಗಳೆಂದು ಹಿಂದೆಯೇ ಗುರುತಿಸಿದೆ.ಆದ್ದರಿಂದ ಸರ್ಕಾರ ಕಾಲ ವಿಳಂಬ ಮಾಡದೆ ಈ ಎರಡು ಆದಿಮ ಬುಡಕಟ್ಟುಗಳನ್ನು ಪ್ರತ್ಯೇಕಿಸಿ, ಒಳಮೀಸಲಾತಿ ಘೋಷಿಸಬೇಕು. ಪರಿಶಿಷ್ಟ ವರ್ಗಗಳ ಒಟ್ಟು ೭ ಶೇಕಡ ಮೀಸಲಾತಿಯಲ್ಲಿ ಅರ್ಧ ಪರ್ಸೆಂಟ್‌ನ್ನು ಈ ಎರಡು ಸಮುದಾಯಗಳಿಗೆ ಮೀಸಲಿಟ್ಟರೆ ಮಾತ್ರ ಇವರ ಪ್ರಗತಿ ಸಾಧ್ಯ. ಇಲ್ಲವಾದಲ್ಲಿ ಕೆಲವೇ ವರ್ಷಗಳಲ್ಲಿ ಕೊರಗ ಸಮುದಾಯವು ಸರ್ವನಾಶ ಆಗಲಿದೆ.
ಜನಪ್ರತಿನಿಧಿಗಳು, ಅಧಿಕಾರಿಗಳು, ಹಾಗೂ ಸಮಾಜಿಕ ಬದ್ಧತೆ ಇರುವ ಜನಸಾಮಾನ್ಯರು, ಸಾರ್ವಜನಿಕರು ಈ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ಹಾಕಬೇಕು ಎಂದು ಹಿರಿಯ ಸಾಹಿತಿ, ಕೊರಗ ಸಮುದಾಯದ ಹೋರಾಟಗಾರ ಪಾಂಗಾಳ ಬಾಬು ಕೊರಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.