ಪ್ರತ್ಯೇಕ ರಾಷ್ಟ್ರ ಹೇಳಿಕೆ: ಡಿಕೆಸು ವಿರುದ್ಧ ಮಂಗಳೂರಲ್ಲಿ ಕೋರ್ಟ್‌ಗೆ ದೂರು

| Published : Feb 03 2024, 01:49 AM IST

ಸಾರಾಂಶ

ಮಂಗಳೂರಿನ ಬಿಜೆಪಿ ಮುಖಂಡ ವಿಕಾಸ್‌ ಪುತ್ತೂರು ಇಲ್ಲಿನ 2ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಶುಕ್ರವಾರ ದೂರು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರುಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆ ಇರಿಸುವ ಬಗ್ಗೆ ಮಾತನಾಡಿದ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್‌ ವಿರುದ್ಧ ಮಂಗಳೂರಿನ ಬಿಜೆಪಿ ಮುಖಂಡ ವಿಕಾಸ್‌ ಪುತ್ತೂರು ಇಲ್ಲಿನ 2ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಶುಕ್ರವಾರ ದೂರು ನೀಡಿದ್ದಾರೆ. ಕೇಂದ್ರ ಬಜೆಟ್‌ಗೆ ಪ್ರತಿಕ್ರಿಯೆ ನೀಡುವ ವೇಳೆ ಸಂಸದ ಡಿ.ಕೆ.ಸುರೇಶ್‌ ಅವರು, ನಾವು ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆ ಇಡಬೇಕಾಗುತ್ತದೆ ಎಂಬ ರೀತಿಯಲ್ಲಿ ಪ್ರತ್ಯೇಕವಾದಿ ಮಾನಸಿಕತೆಯನ್ನು ಬಿತ್ತುವ ಪ್ರಚೋದನಕಾರಿ ದೇಶವಿರೋಧಿ ಹೇಳಿಕೆಯನ್ನು ಸುದ್ದಿಗೋಷ್ಠಿಯಲ್ಲಿ ಇಡೀ ರಾಷ್ಟ್ರಕ್ಕೆ ನೀಡಿದ್ದಾರೆ. ಇದು ಚಾನೆಲ್‌ಗಳಲ್ಲಿ ಪ್ರಸಾರವಾಗಿದೆ. ಈ ರೀತಿಯ ಹೇಳಿಕೆ ದೇಶದ್ರೋಹಿ, ಭಯೋತ್ಪಾದಕರಿಗೆ ಮತ್ತು ಭಾರತವನ್ನು ತುಂಡರಿಸಬೇಕು ಎಂದು ಷಡ್ಯಂತರ ರೂಪಿಸುವ ಪ್ರತ್ಯೇಕವಾದಿಗಳಿಗೆ ಕುಮ್ಮಕ್ಕು ನೀಡುವ ರೀತಿಯಲ್ಲಿದೆ. ಈ ಹೇಳಿಕೆಯಿಂದ ಅಸಂಖ್ಯಾತ ದೇಶಭಕ್ತರಿಗೆ ಘಾಸಿ ಉಂಟಾಗಿದೆ. ಇದು ಭಾರತೀಯ ದಂಡ ಸಂಹಿತೆಯ ಕಲಂ 124 ಎ ಅನ್ವಯ ಅಪರಾಧವಾಗುತ್ತದೆ. ಅಲ್ಲದೆ ದೇಶದ್ರೋಹ ಕಾಯ್ಗೆಯ ಕಲಂಗಳ ಅನ್ವಯ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಈ ಬಗ್ಗೆ ನ್ಯಾಯಾಲಯ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಕಲಂ 156(3) ರನ್ವಯ ಮಂಗಳೂರು ಉತ್ತರ ಪೊಲೀಸ್ ಠಾಣಾಧಿಕಾರಿಗೆ ತನಿಖೆ ಮತ್ತು ವರದಿಗಾಗಿ ಆದೇಶಿಸುವಂತೆ ದೂರುದಾರ ವಿಕಾಸ್‌ ಪುತ್ತೂರು ಪಿರ್ಯಾದಿನಲ್ಲಿ ವಿನಂತಿಸಿದ್ದಾರೆ. ಈ ಬಗ್ಗೆ ನ್ಯಾಯಾಲಯ ಫೆ.7ರಂದು ತೀರ್ಮಾನಿಸುವುದಾಗಿ ತಿಳಿಸಿದೆ ಎಂದು ವಿಕಾಸ್‌ ಪುತ್ತೂರು ತಿಳಿಸಿದ್ದಾರೆ. ಈ ಸಂದರ್ಭ ಅರ್ಜಿದಾರರ ಪರ ವಕೀಲ ಮೋಹನರಾಜ್‌ ಕೆ.ಆರ್‌., ಬಿಜೆಪಿ ಯುವ ಮುಖಂಡ ಗುರುಚರಣ್‌ ಇದ್ದರು.