ಸಾರಾಂಶ
ಸರ್ಕಾರ ಗಡುವಿನೊಳಗೆ ನಮ್ಮ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ರಾಜ್ಯಾದ್ಯಂತ ಎಲ್ಲ ಸಂಘಟನೆಗಳನ್ನೂ ಒಗ್ಗೂಡಿಸಿಕೊಂಡು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ, ದಸಂಸದಿಂದ ಹೋರಾಟ
ಕನ್ನಡಪ್ರಭ ವಾರ್ತೆ ಮಂಡ್ಯಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ತಕ್ಷಣವೇ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ಮಾದಿಗ ಒಳ ಮೀಸಲಾತಿ ಜಾರಿಗಾಗಿ ಹೋರಾಟ ಸಮಿತಿ ಕಾರ್ಯಕರ್ತರು ಹಾಗೂ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸರ್ಕಾರದ ಶವಯಾತ್ರೆಗಾಗಿ ಚಟ್ಟ, ಶಂಖ, ತಮಟೆಯೊಂದಿಗೆ ಸಿದ್ಧತೆ ನಡೆಸಿದ್ದರು. ಮಧ್ಯಪ್ರವೇಶಿಸಿದ ಪೊಲೀಸರು ಶವಯಾತ್ರೆಗಾಗಿ ತಂದಿದ್ದ ಚಟ್ಟವನ್ನು ಕಿತ್ತು ಕೊಂಡೊಯ್ದರು. ಅಷ್ಟಕ್ಕೆ ಸುಮ್ಮನಾಗದ ಕಾರ್ಯಕರ್ತರು ತಾವು ತಂದಿದ್ದ ಶಂಖ, ಜಾಗಟೆ, ತಮಟೆ ಬಡಿಯುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಧರಣಿ ಸತ್ಯಾಗ್ರಹ:
ಮಾದಿಗ ಒಳ ಮೀಸಲಾತಿ ಜಾರಿಗಾಗಿ ಹೋರಾಟ ಸಮಿತಿ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿ ಧರಣಿ ಸತ್ಯಾಗ್ರಹ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಪರಿಶಿಷ್ಟ ಜಾತಿಗಳ ಸಮುದಾಯದೊಳಗಿನ ಅತೀ ಹಿಂದುಳಿದ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಸಲುವಾಗಿ ಜಾರಿಯಾಗಬೇಕಿರುವ ಒಳ ಮೀಸಲಾತಿಯ ಬೇಡಿಕೆ ಮತ್ತು ಹೋರಾಟ ೩೫ ವರ್ಷಗಳಿಂದ ನಡೆಯುತ್ತಿದ್ದು, ಈ ಅಸಮಾನತೆಯನ್ನು ಸರಿಪಡಿಸಲು ಸರ್ವೋಚ್ಛ ನ್ಯಾಯಾಲಯದ ತೀರ್ಪು ಸ್ಪಷ್ಟವಾಗಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ೧೦೧ ಸಮುದಾಯಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಆದೇಶವನ್ನು ನೀಡಿದ್ದರೂ ಸಹ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.ಸರ್ಕಾರದ ವಿಳಂಬ ನೀತಿಯಿಂದಾಗಿ ಸಮುದಾಯದ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ಕಾರ್ಮಿಕರು ಹಾಗೂ ಮಹಿಳೆಯರು ತಮ್ಮ ನ್ಯಾಯಯುತ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಗಡುವಿನೊಳಗೆ ನಮ್ಮ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ರಾಜ್ಯಾದ್ಯಂತ ಎಲ್ಲ ಸಂಘಟನೆಗಳನ್ನೂ ಒಗ್ಗೂಡಿಸಿಕೊಂಡು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ದಸಂಸ ಕಾರ್ಯಕರ್ತರಾದ ಶಿವರಾಜ್ ಮರಳಿಗ, ಪ್ರಕಾಶ್ ನಿಡಘಟ್ಟ, ಸ್ವಾಮಿ, ರಾಜು, ರವಿಕುಮಾರ್, ಮನೋಹರ್, ಮಾದಿಗ ಹೋರಾಟ ಸಮಿತಿಯ ಆರ್.ಕೆ. ಕುಮಾರ್, ಸಿ.ಕೆ. ಪಾಪಯ್ಯ, ಸ್ವಾಮಿ, ಶಂಕರ, ಹೊನ್ನಗಿರಿ, ಶ್ರೀನಿವಾಸ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.