ಇದುವರೆಗೆ ರಸ್ತೆಯಲ್ಲೇ ನಡೆಯುತ್ತಿದ್ದ ಹೋಲ್‌ಸೇಲ್ ತರಕಾರಿ ವ್ಯಾಪಾರ ಇನ್ಮುಂದೆ ವ್ಯವಸ್ಥಿತ ರೀತಿಯಲ್ಲಿ ಆಗಲಿದೆ. ಇಲ್ಲಿಯ ಜಾನುವಾರು ಮಾರುಕಟ್ಟೆಯ ಆವರಣದಲ್ಲಿ ಪ್ರತ್ಯೇಕ ತರಕಾರಿ ಮಾರುಕಟ್ಟೆ ಆರಂಭಿಸಲಾಗಿದ್ದು, ವ್ಯಾಪಾರಿಗಳಿಗೆ ಮತ್ತು ರೈತರಿಗೆ ಅನುಕೂಲ ಕಲ್ಪಿಸಿದಂತಾಗಿದೆ.
ಕಾಳುಕಡಿ ಮಾರುಕಟ್ಟೆಯಿಂದ ಸ್ಥಳಾಂತರ
ವ್ಯಾಪಾರಿಗಳಿಗೆ ಎಪಿಎಂಸಿಯಿಂದ ನಿರ್ಮಿಸಿದ್ದ ಅಂಗಡಿ ಹಸ್ತಾಂತರನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ ಹಾವೇರಿಇದುವರೆಗೆ ರಸ್ತೆಯಲ್ಲೇ ನಡೆಯುತ್ತಿದ್ದ ಹೋಲ್‌ಸೇಲ್ ತರಕಾರಿ ವ್ಯಾಪಾರ ಇನ್ಮುಂದೆ ವ್ಯವಸ್ಥಿತ ರೀತಿಯಲ್ಲಿ ಆಗಲಿದೆ. ಇಲ್ಲಿಯ ಜಾನುವಾರು ಮಾರುಕಟ್ಟೆಯ ಆವರಣದಲ್ಲಿ ಪ್ರತ್ಯೇಕ ತರಕಾರಿ ಮಾರುಕಟ್ಟೆ ಆರಂಭಿಸಲಾಗಿದ್ದು, ವ್ಯಾಪಾರಿಗಳಿಗೆ ಮತ್ತು ರೈತರಿಗೆ ಅನುಕೂಲ ಕಲ್ಪಿಸಿದಂತಾಗಿದೆ.
ಇಲ್ಲಿಯ ಹಾನಗಲ್ಲ ರಸ್ತೆ ದನದ ಮಾರುಕಟ್ಟೆ ಆವರಣದಲ್ಲಿ ಮೂರು ವರ್ಷಗಳ ಹಿಂದೆಯೇ ಸ್ಟಾಲ್‌ಗಳನ್ನು ಕಟ್ಟಿದ್ದರೂ ಅದನ್ನು ಬಳಕೆ ಮಾಡದೇ ಪಾಳು ಬಿದ್ದಿತ್ತು. 40ಕ್ಕೂ ಹೆಚ್ಚು ಅಂಗಡಿಗಳನ್ನು ಕಟ್ಟಿದ್ದರೂ ಯಾರಿಗೂ ನೀಡಿರಲಿಲ್ಲ. ಕೋಟ್ಯಂತರ ಖರ್ಚು ಮಾಡಿ ಖಾಲಿ ಬಿಟ್ಟಿದ್ದರಿಂದ ರಾತ್ರಿ ವೇಳೆ ಕುಡುಕರಿಗೆ ಪ್ರಶಸ್ತವಾದ ಸ್ಥಳವಾಗಿ ಮಾರ್ಪಟ್ಟಿತ್ತು. ಈಗ ಎಪಿಎಂಸಿಯಿಂದ ಆ ಅಂಗಡಿಗಳನ್ನು ತರಕಾರಿ ವ್ಯಾಪಾರಸ್ಥರಿಗೆ ನೀಡಲಾಗಿದೆ. ಅಲ್ಲಿಯೇ ಹೋಲ್‌ಸೇಲ್ ತರಕಾರಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಅಗತ್ಯ ವ್ಯವಸ್ಥೆ ಮಾಡಿಕೊಟ್ಟಿರುವುದು ವ್ಯಾಪಾರಸ್ಥರಿಗೆ ಮತ್ತು ತರಕಾರಿ ಮಾರಲು ಬರುವ ರೈತರಿಗೆ ಅನುಕೂಲವಾಗಿದೆ.ಬಾಡಿಗೆ ಆಧಾರದಲ್ಲಿ ಅಂಗಡಿ:
ಎಪಿಎಂಸಿಯಿಂದ ನಿರ್ಮಿಸಿದ್ದ ಸ್ಟಾಲ್‌ಗಳನ್ನು ಪರವಾನಗಿ ಪಡೆದ ತರಕಾರಿ ವ್ಯಾಪಾರಸ್ಥರಿಗೆ ತಿಂಗಳ ಬಾಡಿಗೆ ಆಧಾರದ ಮೇಲೆ ನೀಡಲಾಗಿದೆ. ಒಟ್ಟು 39 ವ್ಯಾಪಾರಸ್ಥರಿಗೆ ಅಂಗಡಿ ನೀಡಲಾಗಿದ್ದು, ಅದರ ವಿಸ್ತೀರ್ಣದ ಆಧಾರದಲ್ಲಿ ದರ ನಿಗದಿ ಮಾಡಲಾಗಿದೆ. 8 ಅಂಗಡಿಗಳನ್ನು ಮಾಸಿಕ ₹2300 ಹಾಗೂ 31 ಅಂಗಡಿಗಳನ್ನು ತಿಂಗಳಿಗೆ ₹1400 ಬಾಡಿಗೆ ಆಧಾರದಲ್ಲಿ ನೀಡಲಾಗಿದೆ. ಇದರಿಂದ ಎಪಿಎಂಸಿ ಆದಾಯಕ್ಕೂ ಅನುಕೂಲವಾದಂತಾಗಿದೆ.ಕಾಳುಕಡಿ ಮಾರುಕಟ್ಟೆ ಆವರಣದ ರಸ್ತೆ ಮೇಲೆಯೇ ಹಲವು ವರ್ಷಗಳಿಂದ ಸಗಟು ತರಕಾರಿ ವ್ಯಾಪಾರ ನಡೆಯುತ್ತಿತ್ತು. ಇದರಿಂದ ಕಾಳುಕಡಿ ವ್ಯಾಪಾರಸ್ಥರಿಗೆ, ಅಲ್ಲಿಗೆ ಬರುವ ವಾಹನಗಳಿಗೆ ತೊಂದರೆಯಾಗುತ್ತಿತ್ತು. ರಸ್ತೆ ಮೇಲೆಯೇ ಸೊಪ್ಪು, ತರಕಾರಿ ಚೀಲಗಳನ್ನು ರಾಶಿ ಹಾಕಿ ವ್ಯಾಪಾರ ಮಾಡಲಾಗುತ್ತಿತ್ತು. ಬೆಳಗ್ಗೆ 7 ಗಂಟೆಯಿಂದ ಶುರುವಾಗಿ 10 ಗಂಟೆವರೆಗೂ ಈ ಸ್ಥಳದಲ್ಲಿ ವ್ಯಾಪಾರ ನಡೆಯುತ್ತಿತ್ತು. ಆದರೆ, ಅಲ್ಲಿ ಬೆರಳೆಣಿಕೆಯಷ್ಟು ವ್ಯಾಪಾರಸ್ಥರಿಗೆ ಮಾತ್ರ ಪುಟ್ಟ ಶೆಡ್‌ಗಳಿದ್ದವು. ಇನ್ನುಳಿದ ವ್ಯಾಪಾರಿಗಳಿಗೆ ಅಂಗಡಿ ಇಲ್ಲದ್ದರಿಂದ ಸಮಸ್ಯೆ ಎದುರಿಸುತ್ತಿದ್ದರು. ಈಗ ಪ್ರತ್ಯೇಕ ಅಂಗಡಿ ಸಿಕ್ಕಿರುವುದರಿಂದ ವ್ಯಾಪಾರಸ್ಥರು ಸಂತಸಗೊಂಡಿದ್ದಾರೆ. ಆದರೆ, ಗುರುವಾರ ದನದ ಸಂತೆ ದಿನ ಮಾತ್ರ ಸಮಸ್ಯೆಯಾಗುತ್ತಿದೆ. ಈರುಳ್ಳಿ, ಆಲುಗಡ್ಡೆ ಇತ್ಯಾದಿ ತರಕಾರಿಗಳನ್ನು ಮಳೆ ಬಿಸಿಲಿನಿಂದ ರಕ್ಷಿಸಿ ದಾಸ್ತಾನು ಮಾಡಿಕೊಳ್ಳಲು ಅನುಕೂಲವಾಗಿದೆ. ಈಗ ಅಂಗಡಿ ಪಡೆದ ಬಹುತೇಕರು ಮುಂದೆ ಶೀಟ್ ಇಳಿಬಿಟ್ಟು ವಿಸ್ತೀರ್ಣ ಮಾಡಿಕೊಂಡಿದ್ದಾರೆ. ಅಂಗಡಿ ಹೊರಗೆ ತರಕಾರಿ ರಾಶಿ ಹಾಕಿಟ್ಟು ವ್ಯಾಪಾರ ಮಾಡುತ್ತಿದ್ದಾರೆ. ಬಹಳ ವರ್ಷಗಳಿಂದ ಇದ್ದ ಬೇಡಿಕೆ ಈಡೇರಿದಂತಾಗಿದೆ. ಇದೇ ರೀತಿ ಜಿಲ್ಲಾಸ್ಪತ್ರೆ ಎದುರು ರಸ್ತೆಯಲ್ಲೇ ನಡೆಯುವ ಹೂವಿನ ವ್ಯಾಪಾರವನ್ನೂ ಬೇರೆಡೆ ಸ್ಥಳಾಂತರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಹೋಲ್‌ಸೇಲ್ ದರದಲ್ಲಿ ತರಕಾರಿಹಾವೇರಿಯ ಹೋಲ್‌ಸೇಲ್ ತರಕಾರಿ ಮಾರುಕಟ್ಟೆ ಸುತ್ತಮುತ್ತಲಿನ ಭಾಗದಲ್ಲಿ ಫೇಮಸ್ ಎನಿಸಿದೆ. ಹತ್ತಾರು ಹಳ್ಳಿಗಳಿಂದ ರೈತರು ತಾವು ಬೆಳೆದ ಸೊಪ್ಪು, ತರಕಾರಿಗಳನ್ನು ಇಲ್ಲಿಗೆ ತಂದು ಮಾರುತ್ತಾರೆ. ಮದುವೆ, ಧಾರ್ಮಿಕ ಕಾರ್ಯಕ್ರಮ ಏನೇ ಇದ್ದರೂ ನೇರವಾಗಿ ಇಲ್ಲಿಗೆ ಬಂದು ಕಡಿಮೆ ದರದಲ್ಲಿ ತರಕಾರಿ ಖರೀದಿ ಮಾಡುತ್ತಾರೆ. ತಳ್ಳು ಗಾಡಿಗಳಲ್ಲಿ ತರಕಾರಿ ಮಾರುವವರು, ಹೋಟೆಲ್‌ನವರು ಕೂಡ ಇಲ್ಲಿಯೇ ತರಕಾರಿ ಖರೀದಿ ಮಾಡುತ್ತಾರೆ. ಭಾನುವಾರ ಹೊರತುಪಡಿಸಿ ಉಳಿದ ದಿನಗಳಂದು ನಸುಕಿನಲ್ಲೇ ಶುರುವಾಗುವ ತರಕಾರಿ ವ್ಯಾಪಾರಕ್ಕೆ ಇನ್ನು ಮತ್ತಷ್ಟು ಮೆರಗು ಸಿಕ್ಕಂತಾಗಿದೆ.ಎಪಿಎಂಸಿ ಕಾಳುಕಡಿ ಮಾರುಕಟ್ಟೆಯಲ್ಲೇ ಇಷ್ಟು ವರ್ಷ ಹೋಲ್‌ಸೇಲ್ ತರಕಾರಿ ವ್ಯಾಪಾರ ನಡೆಯುತ್ತಿತ್ತು. ಇದರಿಂದ ಕಾಳುಕಡಿ ವ್ಯಾಪಾರಸ್ಥರಿಗೆ ಮತ್ತು ತರಕಾರಿ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿತ್ತು. ಜಾನುವಾರು ಮಾರುಕಟ್ಟೆ ಪ್ರಾಂಗಣದ ಒಂದು ಬದಿಯಲ್ಲಿ ತರಕಾರಿ ವ್ಯಾಪಾರಕ್ಕೆಂದೇ ಕಟ್ಟಿದ್ದ ಅಂಗಡಿಗಳನ್ನು ಈಗ ತರಕಾರಿ ವ್ಯಾಪಾರಿಗಳಿಗೆ ತಿಂಗಳ ಬಾಡಿಗೆ ಆಧಾರದಲ್ಲಿ ನೀಡಲಾಗಿದೆ. ಅಲ್ಲಿ ವ್ಯವಸ್ಥಿತ ರೀತಿಯಲ್ಲಿ ತರಕಾರಿ ವ್ಯಾಪಾರಕ್ಕೆ ಅನುಕೂಲ ಆಗಿದೆ ಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ ಗೋವಿಂದರೆಡ್ಡಿ ಕಬ್ಬೇರಳ್ಳಿ.