ಸಾರಾಂಶ
- ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾಲೂಕುಗಳ ಪಟಾಕಿ ಮಾರಾಟಗಾರರು-ಅಧಿಕಾರಿಗಳ ಸಮನ್ವಯ ಸಭೆ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ದೀಪಾವಳಿ ಸಮೀಪಿಸುತ್ತಿದ್ದು, ಪಟಾಕಿ ಅಂಗಡಿ ತೆರಯಲು ಹೊನ್ನಾಳಿ, ನ್ಯಾಮತಿ ಹಾಗೂ ಚನ್ನಗಿರಿ ಪಟಾಕಿ ಮಾರಾಟಗಾರರು ಅನುಮತಿಗಾಗಿ ಅರ್ಜಿಗಳನ್ನು ಸಲ್ಲಿಸುತ್ತಿದ್ದು, ಸೆ.30 ಅರ್ಜಿ ಸಲ್ಲಿಕೆಗೆ ಕೊನೆ ದಿನ ಎಂದು ಹೊನ್ನಾಳಿ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಹೇಳಿದರು.ಬುಧವಾರ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಕರೆಯಲಾಗಿದ್ಜ ಹೊನ್ನಾಳಿ, ನ್ಯಾಮತಿ ಹಾಗೂ ಚನ್ನಗಿರಿ ತಾಲೂಕುಗಳ ಪಟಾಕಿ ಮಾರಾಟಗಾರರು ಮತ್ತು ಅಧಿಕಾರಿಗಳ ಸಮನ್ವಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಳಕಿನ ಮತ್ತು ಪಟಾಕಿ ಹಬ್ಬ ದೀಪಾವಳಿಯನ್ನು ಎಲ್ಲರೂ ಸಡಗರ, ಸಂಭ್ರಮದಿಂದ ಆಚರಿಸುವಂತಾಗಬೇಕೇ ಹೊರತು, ಯಾವುದೇ ಅವಘಡಗಳಿಗೆ ಅವಕಾಶ ಮಾಡಿಕೊಡಬಾರದು. ಪಟಾಕಿಗಳ ನಿರ್ವಹಣೆ ಬಗ್ಗೆ ಸರ್ಕಾರ ರೂಪಿಸಿರುವ ನೀತಿ, ನಿಯಮಾವಳಿಗಳನ್ನು ಜಾಚೂ ತಪ್ಪದೇ ಪರಿಪಾಲಿಸಬೇಕು. ಆಗ ಮಾತ್ರ ಯಾವುದೇ ಅವಘಡಗಳು ಸಂಭವಿಸುವುದಿಲ್ಲ. ಇದನ್ನು ಪಟಾಕಿ ಮಾರಾಟಗದಾರರು ಮನದಟ್ಟು ಮಾಡಿಕೊಳ್ಳಬೇಕು ಎಂದರು.ಮಾರಾಟಗಾರರು ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು. ಪಟಾಕಿಗಳ ಪ್ರತಿ ಮಳಿಗೆಗಳ ಮಧ್ಯ ಸಾಕಷ್ಟು ಅಂತರವಿರಬೇಕು. ತಹಸೀಲ್ದಾರ್, ಅಗ್ನಿಶಾಮಕ ದಳ, ವಿದ್ಯುತ್ ಹಾಗೂ ಪೊಲೀಸ್ ಇಲಾಖೆಗಳ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಟಾಕಿ ಮಾರಾಟಗಾರರು ಪರಿಪಾಲಿಸಬೇಕು. ಅಂಗಡಿ ಮಾಲೀಕರು ಮರಳು ಮತ್ತು ಕನಿಷ್ಠ 200 ಲೀಟರ್‌ನ 2 ಡ್ರಮ್‌ಗಳಲ್ಲಿ ನೀರು ಸಂಗ್ರಹಿಸಿರಬೇಕು. ಅಂಗಡಿಗಳ ಸಮೀಪ ಧೂಮಪಾನ ನಿಷೇಧಿಸಬೇಕು. ಅಂಗಡಿಗಳಿಗೆ ಅನುಮತಿ ನೀಡುವ ಪೂರ್ವದಲ್ಲಿ ಇಲಾಖೆಗಳ ಅಧಿಕಾರಿಗಳ ತಂಡದಿಂದ ಸ್ಥಳ ಪರಿಶೀಲನೆ ಕೂಡ ಮಾಡಲಾಗುತ್ತದೆ ಎಂದ ಅವರು, ಪ್ರತಿಯೊಬ್ಬರೂ ಪ್ರಕೃತಿ ಮತ್ತು ಆರೋಗ್ಯದ ಬಗ್ಗೆ ಚಿಂತಿಸಬೇಕು ಎಂದು ಹೇಳಿದರು.
ಚನ್ನಗಿರಿ, ನ್ಯಾಮತಿ ಹಾಗೂ ಹೊನ್ನಾಳಿ ಪಟಾಕಿ ಮಾರಾಟಗಾರರು ಸಭೆಯಲ್ಲಿ ತಮ್ಮ ಕೆಲವು ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನಕ್ಕೆ ತಂದರು. ಆಗ ಕಾನೂನು ಚೌಕಟ್ಟಿನ ಒಳಗೆ ಪರಿಹಾರ ಕಂಡುಕೊಳ್ಳೋಣ ಎಂದು ಹೇಳಿದರು.ಈಗಾಗಲೇ ಹೊನ್ನಾಳಿಯಿಂದ 6, ನ್ಯಾಮತಿಯಿಂದ 6 ಹಾಗೂ ಚನ್ನಗಿರಿಯಿಂದ 14 ಪಟಾಕಿ ಅಂಗಡಿಗಳ ಅನುಮತಿಗಾಗಿ ಅರ್ಜಿಗಳು ಬಂದಿವೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಹೊನ್ನಾಳಿ ತಹಸೀಲ್ದಾರ್ ಸಿ.ರಾಜೇಶ್ ಕುಮಾರ್, ನ್ಯಾಮತಿ ತಹಸೀಲ್ದಾರ್ ಕವಿರಾಜ್, ಗ್ರೇಡ್ -2 ತಹಸೀಲ್ದಾರ್ ಗೋವಿಂದಪ್ಪ, ಹೊನ್ನಾಳಿ ತಾಪಂ ಇಒ ಪ್ರಕಾಶ್, ನ್ಯಾಮತಿಯ ರಾಘವೇಂದ್ರ, ಹೊನ್ನಾಳಿ ಪುರಸಭೆ ಮುಖ್ಯಾಧಿಕಾರಿ ಟ.ಲೀಲಾವತಿ. ನ್ಯಾಮತಿ ಪಪಂ ಮುಖ್ಯಾಧಿಕಾರಿ ಗಣೇಶ್ ರಾವ್, ಹೊನ್ನಾಳಿ ಪಿ.ಎಸ್.ಐ. ಕುಮಾರ್ ಹಾಗೂ ಅಗ್ಮಿಶಾಮಕ ಇಲಾಖೆ ಅಧಿಕಾರಿಗಳು, ಮೂರು ತಾಲೂಕುಗಳ ಪಟಾಕಿ ವರ್ತಕರು ಇದ್ದರು.- - -
-17ಎಚ್.ಎಲ್.ಐ2:ಹೊನ್ನಾಳಿ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಬುಧವಾರ ಕರೆಯಲಾಗಿದ್ಜ ಹೊನ್ನಾಳಿ, ನ್ಯಾಮತಿ ಹಾಗೂ ಚನ್ನಗಿರಿ ತಾಲೂಕುಗಳ ಪಟಾಕಿ ಮಾರಾಟಗಾರರು ಮತ್ತು ಅಧಿಕಾರಿಗಳ ಸಮನ್ವಯ ಸಭೆಯಲ್ಲಿ ಉಪವಿಭಾಗಾಧಿಕಾರಿ ಸಂತೋಷ ಕುಮಾರ್ ಮಾತನಾಡಿದರು.