ಪಿಕಾರ್ಡ್ ಬ್ಯಾಂಕ್ ಸೇರಿ 5 ಕಡೆ ಸರಣಿ ಕಳ್ಳತನ

| Published : Aug 17 2024, 12:45 AM IST

ಸಾರಾಂಶ

ಸಿಂಧನೂರು ಡಿವೈಎಸ್ಪಿ ಬಿ.ಎಸ್.ತಳವಾರ ಅವರು ಶುಕ್ರವಾರ ಬೆಳಿಗ್ಗೆ ಕಳ್ಳತನ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸಿಂಧನೂರು: ನಗರದ ಪಿಕಾರ್ಡ್ ಬ್ಯಾಂಕ್, ಕೃಷಿ ಪತ್ತಿನ ಸಹಕಾರ ಸೇರಿದಂತೆ 5 ಕಡೆ ಸರಣಿ ಕಳ್ಳತನ ಘಟನೆ ಗುರುವಾರ ರಾತ್ರಿ ನಡೆದಿದೆ.

ಪಿಕಾರ್ಡ್ ಬ್ಯಾಂಕ್‌ನಲ್ಲಿ ₹40 ಸಾವಿರ, ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ₹10 ಸಾವಿರ ಹಣ ಕಳ್ಳರು ದೋಚಿದ್ದಾರೆ. ಎಲ್ಐಸಿ ಪ್ರೀಮಿಯಮ್ ಕಚೇರಿ, ಗೊಬ್ಬರದ ಅಂಗಡಿ, ಬಟ್ಟೆ ಅಂಗಡಿಗಳ ಮುಂಗಟ್ಟುಗಳನ್ನು ತೆರೆಯಲಾಗಿದೆ. ಆದರೆ ಯಾವುದೇ ವಸ್ತುಗಳನ್ನು ಕದ್ದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶುಕ್ರವಾರ ಬೆಳಿಗ್ಗೆ ಡಿವೈಎಸ್ಪಿ ಬಿ.ಎಸ್. ತಳವಾರ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಗಡಿಗಳ ಬೀಗ ಮುರಿದು ನುಗ್ಗಿ ಕಳ್ಳತನಕ್ಕೆ ಪ್ರಯತ್ನಿಸಿದ್ದಾರೆ. ಪ್ರತಿಯೊಂದು ಅಂಗಡಿಗಳಲ್ಲಿ ವಸ್ತುಗಳಿದ್ದು, ಅವುಗಳನ್ನು ಕದ್ದಿಲ್ಲ. ಎರಡು ಹಣಕಾಸು ಸಂಸ್ಥೆಗಳ ಕ್ಯಾಶ್ ಕೌಂಟರ್‌ನಿಂದ ಹಣವನ್ನು ಮಾತ್ರ ಕದ್ದೊಯ್ದಿದ್ದಾರೆ. ಬೆರಳಚ್ಚುಗಾರರನ್ನು ಕರೆಯಿಸಿ ಪರಿಶೀಲಿಸಿದ ನಂತರ ಕಳ್ಳರನ್ನು ಪತ್ತೆ ಹಚ್ಚಲು ಕ್ರಮಕೈಗೊಳ್ಳಲಾಗುವುದು. ಸಿಸಿಟಿವಿಯಲ್ಲಿ ಕಳ್ಳತನ ಮಾಡಿರುವ ದೃಶ್ಯ ಸೆರೆಯಾಗಿರುವುದರಿಂದ ಸುಲಭವಾಗಿ ಕಳ್ಳರನ್ನು ಪತ್ತೆ ಹಚ್ಚುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಇಲ್ಲಿಯವರೆಗೆ ಪೊಲೀಸ್ ಠಾಣೆಯಲ್ಲಿ ಕಳ್ಳತನ ಕುರಿತು ಪ್ರಕರಣ ದಾಖಲಾಗಿಲ್ಲ.