ಲಕ್ಷ್ಮೇಶ್ವರದಲ್ಲಿ ಅಂಗಡಿಗಳ ಸರಣಿ ಕಳ್ಳತನ, ಸ್ಥಳಕ್ಕೆ ಪೊಲೀಸರ ಭೇಟಿ

| Published : Oct 30 2025, 02:15 AM IST

ಲಕ್ಷ್ಮೇಶ್ವರದಲ್ಲಿ ಅಂಗಡಿಗಳ ಸರಣಿ ಕಳ್ಳತನ, ಸ್ಥಳಕ್ಕೆ ಪೊಲೀಸರ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿಗ್ಲಿ ನಾಕಾ ಬಳಿ ಇರುವ ವಿನಾಯಕ ಝೆರಾಕ್ಸ್ ಅಂಗಡಿ, ಅದರ ಪಕ್ಕದಲ್ಲಿ ಮಿಶ್ರಾ ಪೇಢಾ ಅಂಗಡಿ ಹಾಗೂ ಅದರ ಪಕ್ಕದಲ್ಲಿರುವ ಅಲಂಕಾರ್ ಜನರಲ್ ಸ್ಟೋರ್ಸ್‌ನ ಮೇಲಿನ ತಗಡಿನ ಶೀಟು ಕತ್ತರಿಸಿ ಒಳಗಡೆ ಇಳಿದು ಕಳ್ಳತನ ಮಾಡಲಾಗಿದೆ.

ಲಕ್ಷ್ಮೇಶ್ವರ: ಪಟ್ಟಣದ ಪ್ರಮುಖ ಸ್ಥಳವಾದ ಶಿಗ್ಲಿ ನಾಕಾ ಬಳಿ ಮೂರು ಅಂಗಡಿಗಳ ಸರಣಿ ಕಳ್ಳತನ ಮಾಡಿದ್ದು ಹಾಗೂ ನಾಲ್ಕನೆ ಅಂಗಡಿಗೂ ಪ್ರಯತ್ನ ಮಾಡಿ ಅರ್ಧಕ್ಕೆ ಬಿಟ್ಟು ಹೋಗಿರುವ ಘಟನೆ ಮಂಗಳವಾರ ಮಧ್ಯರಾತ್ರಿ ನಡೆದಿದೆ.

ಪಟ್ಟಣದ ಲಕ್ಷ್ಮೀ ನಗರದ ಮಂಜುಳಾ ಹೂಗಾರ ಎಂಬವರ ಮನೆಯ ಕೀಲಿ ಮುರಿದು ಕಳ್ಳತನ ಮಾಡಿದ್ದು, ಮಧ್ಯರಾತ್ರಿ ಸಾಲು ಸಾಲು ಅಂಗಡಿಗಳ ಮತ್ತು ಮನೆಯ ಕಳ್ಳತನವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಜನತೆ ಬೆಚ್ಚಿ ಬಿದ್ದಿದ್ದಾರೆ.ಶಿಗ್ಲಿ ನಾಕಾ ಬಳಿ ಇರುವ ವಿನಾಯಕ ಝೆರಾಕ್ಸ್ ಅಂಗಡಿ, ಅದರ ಪಕ್ಕದಲ್ಲಿ ಮಿಶ್ರಾ ಪೇಢಾ ಅಂಗಡಿ ಹಾಗೂ ಅದರ ಪಕ್ಕದಲ್ಲಿರುವ ಅಲಂಕಾರ್ ಜನರಲ್ ಸ್ಟೋರ್ಸ್‌ನ ಮೇಲಿನ ತಗಡಿನ ಶೀಟು ಕತ್ತರಿಸಿ ಒಳಗಡೆ ಇಳಿದು ಕಳ್ಳತನ ನಡೆಸಿದ್ದು, ಅಂಗಡಿಯಲ್ಲಿದ್ದ ಗಲ್ಲಾ ಪೆಟ್ಟಿಗೆಯಲ್ಲಿನ ಹಣ ಮತ್ತು ಇನ್ನಿತರ ಕೆಲವು ವಸ್ತುಗಳನ್ನು ಎತ್ತಿಕೊಂಡು ಹೋಗಿದ್ದಾರೆ.

ಪಕ್ಕದಲ್ಲಿನ ಗಣೇಶ ಬೇಕರಿ ಅಂಗಡಿಗೂ ತಗಡಿನ ಶೀಟು ಕತ್ತರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಯಾವುದೋ ಕಾರಣಕ್ಕೆ ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ಅದೇ ವೇಳೆ ಪಟ್ಟಣದ ಲಕ್ಷ್ಮೀ ನಗರದಲ್ಲಿನ ಮಂಜುಳಾ ಹೂಗಾರ ಎನ್ನುವ ಮನೆಯ ಬಾಗಿಲು ಮುರಿದು ಮನೆಯಲ್ಲಿನ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದಾರೆಂದು ತಿಳಿದು ಬಂದಿದೆ. ಈ ಕುರಿತಂತೆ ಪಟ್ಟಣದ ಪೊಲೀಸ್ ಠಾಣೆಯ ಪಿಎಸ್‌ಐ ನಾಗರಾಜ ಗಡಾದ, ಕ್ರೈಂ ವಿಭಾಗದ ಪಿಎಸ್‌ಐ ಟಿ.ಕೆ. ರಾಥೋಡ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎಲ್ಲ ಅಂಗಡಿಗಳಲ್ಲಿಯ ಕಳ್ಳತನ ಮಾಡುತ್ತಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪರಿಶೀಲನೆ ಮಾಡಿ ಸಂಬಂಧಿಸಿದ ವಿಡಿಯೋ ತುಣುಕು ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ. ಝೆರಾಕ್ಸ್ ಅಂಗಡಿಯಲ್ಲಿ, ಮಿಶ್ರಾ ಪೇಡಾ ಅಂಗಡಿಯಲ್ಲಿ ಹಾಗೂ ಸ್ಟೇಷನರಿ ಅಂಡಿಯಲ್ಲಿನ ಗಲ್ಲಾ ಪೆಟ್ಟಿಗೆಯಲ್ಲಿ ಹಣ ಹಾಗೂ ಸಿಹಿ ತಿಂಡಿ, ಕೆಲವು ಅಲಂಕಾರಿಕ ವಸ್ತು ದೋಚಿದ್ದಾರೆಂದು ಪರಾರಿಯಾಗಿದ್ದಾರೆ ತಿಳಿದು ಬಂದಿದೆ.ಮುಖ್ಯ ರಸ್ತೆಯ ಪಕ್ಕದಲ್ಲಿರುವ ಅಂಗಡಿಗಳಲ್ಲಿ ಸರಣಿ ಕಳ್ಳತನವಾಗಿರುವದು ಆಶ್ಚರ್ಯ ಮೂಡಿಸಿದೆ. ತಗಡಿನ ಶೀಟುಗಳನ್ನು ಕತ್ತರಿಸಿ ಒಳ ಬರುವವರೆಗೆ ಯಾವುದೇ ರೀತಿಯ ಸದ್ದು ಕೇಳಿಸದಂತೆ ಇರುವುದು ವಿಚಿತ್ರವಾಗಿದ್ದು, ಮುಖ್ಯ ರಸ್ತೆಯಲ್ಲಿಯೇ ಹೀಗೆ ಸರಣಿ ಕಳ್ಳತನವಾಗಿರುವುದರಿಂದ ಜನರು ಭಯಭೀತರಾಗುವಂತಾಗಿದೆ.

ಪೊಲೀಸರು ತನಿಖೆ ನಡೆಸಿ ಶೀಘ್ರ ಕಳ್ಳರನ್ನು ಪತ್ತೆ ಹಚ್ಚಬೇಕು ಮತ್ತು ಪ್ರಮುಖ ಸ್ಥಳಗಳಲ್ಲಿ ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸಬೇಕು ಎಂದು ಯುವ ಮುಖಂಡ ನಾಗರಾಜ ಪಿಳ್ಳಿ ಆಗ್ರಹಿಸಿದ್ದಾರೆ. ಘಟನೆ ಕುರಿತು ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.