ಸಾರಾಂಶ
ಅಕ್ಷತ ಪಾಂಡವಪುರ ಆಕೆಯಾಂತರಾಳ ( ಒಗ್ಗರಣೆ ಮಾತು ) ನಾಟಕ ಉದ್ಘಾಟನಾ ಸಮಾರಂಭಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಟಿವಿ ಸೀರಿಯಲ್ ಗಳು ಸಂಸ್ಕೃತಿ ಹೆಸರಿನಲ್ಲಿ ಮಹಿಳೆಯರನ್ನು ಮೌಢ್ಯರನ್ನಾಗಿ ಮಾಡಿ ಶೋಷಣೆ ಮಾಡುತ್ತಿದೆ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಟಿ.ರಾಜೇಂದ್ರ ಕಳವಳ ವ್ಯಕ್ತಪಡಿಸಿದರು.ಭಾನುವಾರ ರಾತ್ರಿ ಸಹರಾ ಕನ್ವೆನ್ಷನ್ ಹಾಲ್ ನಲ್ಲಿ ತಾಲೂಕು ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ 25 ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮ ದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅಕ್ಷತಾ ಪಾಂಡವಪುರ ಅವರ ಲೀಕ್ ಔಟ್ ಕಥೆ ಆಧಾರಿತ ಆಕೆಯಾಂತರಾಳ ( ಒಗ್ಗರಣೆ ಮಾತು) ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ನಾಟಕಗಳು ಮರೆಯಾಗಿವೆ. ನಾಟಕಗಳಿಂದ ಜನರು ಹೆಚ್ಚು ಕ್ರಿಯಾಶೀಲರಾಗಬಹುದು. ಅಕ್ಷತ ಪಾಂಡವಪುರ ಅವರು ಸ್ತ್ರೀ ತಲ್ಲಣ, ಮೌಡ್ಯದ ಬಗ್ಗೆ 8 ಕಥೆಯುಳ್ಳ ಪುಸ್ತಕ ಬರೆದಿದ್ದಾರೆ. ಅದನ್ನು ನಾಟಕಗಳ ಮೂಲಕ ಜನರಿಗೆ ಸಂದೇಶ ನೀಡುತ್ತಿದ್ದಾರೆ. ಇದೊಂದು ಕ್ರಿಯಾತ್ಮಕ ಪ್ರಯೋಗ. ಇಂತಹ ಪ್ರಯೋಗಾತ್ಮಕ ನಾಟಕಗಳ ಮೂಲಕ ಜನರನ್ನು ಕ್ರಿಯಾಶೀಲರನ್ನಾಗಿ ಮಾಡುವುದೇ ಅದರ ಉದ್ದೇಶ. ರಂಗ ಭೂಮಿಯ ಕೆಲವು ಕಲಾವಿದರು ನಾಟಕಗಳಲ್ಲೂ ಹಲವಾರು ಬದಲಾವಣೆ ತಂದಿದ್ದಾರೆ ಎಂದರು.ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶ್ಯಾಮಲ ಸತೀಶ್ ಮಾತನಾಡಿ, ನರಸಿಂಹರಾಜಪುರದಲ್ಲಿ ನಾಟಕಗಳು ವಿರಳವಾಗಿದೆ. ತೀರ್ಥಹಳ್ಳಿ ಭಾಗದಲ್ಲಿ ಹೆಚ್ಚು ನಾಟಕ ಪ್ರದರ್ಶನವಾಗುತ್ತಿತ್ತು. ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಪ್ರಾರಂಭದ ವರ್ಷದಲ್ಲಿ ನಾಟಕ ಪ್ರದರ್ಶನ ನಡೆಸಿದ್ದೆವು ಎಂದು ಸ್ಮರಿಸಿದ ಅವರು, ಅಕ್ಷತಾ ಪಾಂಡವಪುರ ಅವರ ನಾಟಕಗಳಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ಇದೆ. ಸಮಾಜದಲ್ಲಿ ಮಹಿಳೆಯರ ಶೋಷಣೆ ಬಗ್ಗೆ ನಾಟಕಗಳ ಮೂಲಕ ಅನಾವರಣಗೊಳಿಸುತ್ತಾರೆ. ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘವು 25 ನೇ ವರ್ಷದ ಬೆಳ್ಳಿ ಹಬ್ಬದ ವರ್ಷದಲ್ಲಿ ಹಲವಾರು ಸಮಾಜ ಮುಖಿ ಕಾರ್ಯಕ್ರಮ ಮಾಡಲಿದ್ದೇವೆ ಎಂದರು.ಕಣಿವೆ ನಾಗಚಂದ್ರ ಪ್ರತಿಷ್ಠಾನದ ಅಧ್ಯಕ್ಷ ಕಣಿವೆ ವಿನಯ್ ಮಾತನಾಡಿ,ಗ್ರಾಮೀಣ ಪ್ರದೇಶದಲ್ಲಿ ಬಹಳ ವರ್ಷಗಳ ಹಿಂದೆ ನಾಟಕಗಳು ನಡೆಯುತ್ತಿದ್ದವು. ಟಿವಿ, ಮೊಬೈಲ್ ಬಂದ ನಂತರ ನಾಟಕಗಳು ನಿಂತೇ ಹೋಯಿತು. ರಂಗ ಕಲೆ ನಶಿಸಿ ಹೋಗುತ್ತಿರುವ ಇಂತಹ ಕಾಲ ಘಟ್ಟದಲ್ಲಿ ನೀನಾಸಂ ವಿದ್ಯಾರ್ಥಿನಿ ಅಕ್ಷತಾ ಪಾಂಡವಪುರ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಏಕ ವ್ಯಕ್ತಿ ಕಲಾತ್ಮಕ ನಾಟಕಗಳ ಪ್ರದರ್ಶನ ಮಾಡುತ್ತಿರುವುದು ಸಮಯೋಚಿತವಾಗಿದೆ ಎಂದರು.ಅಕ್ಷತ ಪಾಂಡವಪುರ ಅವರ ಆಕೆಯಾಂತರಾಳ ( ಒಗ್ಗರಣೆ ಮಾತು ) ನಾಟಕ ಪ್ರದರ್ಶನ ನಂತರ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಅಕ್ಷತಾ ಪಾಂಡವಪುರ ಅವರನ್ನು ಸನ್ಮಾನಿಸಲಾಯಿತು.ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಅಧ್ಯಕ್ಷ ದಿವಾಕರ, ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್, ತಾಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಸ್.ಎಸ್.ಶಾಂತಕುಮಾರ್, ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಿ.ಸಿ.ದಿವಾಕರ,ಇನ್ನರ್ ವೀಲ್ ಸಂಸ್ಥೆ ಅಧ್ಯಕ್ಷೆ ಬಿಂದು ವಿಜಯ, ಸೀನಿಯರ್ ಚೇಂಬರ್ ಕಾರ್ಯದರ್ಶಿ ಎಸ್.ವಿದ್ಯಾನಂದಕುಮಾರ್, ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಗೌರವಾಧ್ಯಕ್ಷೆ ವನಮಾಲಮ್ಮ, ಕಾರ್ಯದರ್ಶಿ ಭಾರತಿ ಚಂದ್ರು, ಸಹ ಕಾರ್ಯದರ್ಶಿ ಶೀಲ ಸುಂದರೇಶ್ ಕಲಾವಿದ ಸತೀಶ್ ಆಚಾರ್ , ಡಾಕಮ್ಮ , ಪೂರ್ಣೇಶ್ , ಚೈತ್ರ ರಮೇಶ್ ಇದ್ದರು.