ಸಂಶೋಧನೆ ಮತ್ತು ಕಲಿಕೆ ಎಂದರೆ ನಿರಂತರ ಪಯಣ ಎಂದು ತುಮಕೂರಿನ ಸಂಸ್ಕೃತಿ ಚಿಂತಕ ಡಾ. ಜಿ.ವಿ. ಆನಂದಮೂರ್ತಿ ಹೇಳಿದರು.

ಹೊಸಪೇಟೆ: ಸಂಶೋಧನೆ ಮತ್ತು ಕಲಿಕೆ ಎಂದರೆ ನಿರಂತರ ಪಯಣ ಎಂದು ತುಮಕೂರಿನ ಸಂಸ್ಕೃತಿ ಚಿಂತಕ ಡಾ. ಜಿ.ವಿ. ಆನಂದಮೂರ್ತಿ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಅಧ್ಯಯನಾಂಗದಿಂದ ಭುವನ ವಿಜಯ ಸಭಾಂಗಣದಲ್ಲಿ ಯುಜಿಸಿ ಪಿಎಚ್‌ಡಿ ಕೋರ್ಸ್‌ನ 4ನೇ ಹಂತದ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಸಂಶೋಧನೆ ಕುರಿತು ಮಾತನಾಡಿದರು. ಕನ್ನಡ ಸಂಸ್ಕೃತಿ ಒಂದೇ ರೂಪದಲ್ಲಿಲ್ಲ; ಕರ್ನಾಟಕದ ಪ್ರತಿಯೊಂದು ಭಾಗದಲ್ಲೂ ವಿಭಿನ್ನ ಸಂಸ್ಕೃತಿಗಳ ವೈವಿಧ್ಯತೆ ಕಂಡುಬರುತ್ತದೆ. ಸಂಶೋಧನಾ ವಿದ್ಯಾರ್ಥಿಗಳಿಗೆ ವಿವೇಕ ಅತ್ಯಂತ ಮುಖ್ಯವಾಗಿದ್ದು,`ನಾನು ಕಲಿತವನು'''''''' ಎಂಬ ಭಾವನೆ ತೊರೆದು ಖಾಲಿ ಮನಸ್ಸಿನಿಂದ ಅಧ್ಯಯನಕ್ಕೆ ತೊಡಗಬೇಕು ಎಂದು ಹೇಳಿದರು.

ನಮ್ಮ ಆಹಾರ, ಉಡುಪು, ಪೂಜಿಸುವ ದೈವ, ಭಾಷೆ ಮತ್ತು ದೇಶಪ್ರೇಮ ಸೇರಿದಂತೆ ಪ್ರತಿಯೊಂದನ್ನೂ ಏಕೀಕರಿಸುವ ಪ್ರಯತ್ನಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ, ಕನ್ನಡ ಸಂಸ್ಕೃತಿಯ ಸಂಶೋಧನೆ ಕುರಿತು ಗಂಭೀರವಾಗಿ ಚರ್ಚಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಇಂದಿನ ಕಾಲಘಟ್ಟದಲ್ಲಿ ಬಹುಸಂಸ್ಕೃತಿಗೆ ಪೂರಕವಾದ ವಾತಾವರಣ ಕೊರತೆಯಾಗಿದ್ದು, ಅದರ ಬಗ್ಗೆ ಮಾತನಾಡುವುದೇ ದೋಷವೆನ್ನುವ ಸ್ಥಿತಿ ನಿರ್ಮಾಣವಾಗಿದೆ. ಭಾರತದಲ್ಲಿ ಇರುವ ಬಹುಮುಖ ಸಂಸ್ಕೃತಿಗಳು ನಿಧಾನವಾಗಿ ಮರೆಯಾಗುತ್ತಿವೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು.

ಮೈಸೂರಿನ ಹಿರಿಯ ವಿಜ್ಞಾನ ಲೇಖಕ ಕೊಳ್ಳೇಗಾಲ ಶರ್ಮ ಅವರು ತಂತ್ರಜ್ಞಾನ ಮತ್ತು ಸಂಶೋಧನೆ ಕುರಿತು ಮಾತನಾಡಿ, ಚರಿತ್ರೆಯಲ್ಲಿರುವ ಅಸ್ಪಷ್ಟ ಮಾಹಿತಿಯನ್ನು ಪತ್ತೆ ಹಚ್ಚಲು ರಾಸಾಯನಿಕ ತಂತ್ರಜ್ಞಾನಗಳು ಮಹತ್ವದ ನೆರವು ನೀಡುತ್ತವೆ. ಕೃತಕ ಬುದ್ಧಿಮತ್ತೆ ಹೊಸತನವನ್ನು ಸೃಷ್ಟಿಸಬಲ್ಲ ಸಾಮರ್ಥ್ಯ ಹೊಂದಿದ್ದು, ಇಂತಹ ತಂತ್ರಜ್ಞಾನಗಳನ್ನು ಸಂಶೋಧಕರು ಜಾಗರೂಕತೆಯಿಂದ ಮತ್ತು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.

ಎಐ (ಕೃತಕ ಬುದ್ಧಿಮತ್ತೆ) ಹೊಸ ಪಾಠಗಳು, ಸಂಗೀತ, ಚಿತ್ರಗಳು, ವಿಡಿಯೋಗಳು ಸೇರಿದಂತೆ ವಿವಿಧ ಸೃಜನಾತ್ಮಕ ವಿಷಯಗಳನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿದೆ. ಇಂತಹ ತಂತ್ರಜ್ಞಾನಗಳನ್ನು ಸಂಶೋಧನೆಯಲ್ಲಿ ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ. ಪಾಶ್ಚಾತ್ಯ ದೇಶಗಳಲ್ಲಿ ಎಐಯನ್ನು ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಮಟ್ಟದಲ್ಲಿ ಬಳಸಲಾಗುತ್ತಿದೆ ಎಂದು ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಮ್ಮ ಬುದ್ಧಿಶಕ್ತಿಗೆ ಪೂರಕವಾಗುವ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಇದರಿಂದ ಸಮಯ ಉಳಿತಾಯವಾಗುತ್ತದೆ. ಹಳೆಯತನ ಮತ್ತು ಹೊಸತನ ಸಮನ್ವಯಗೊಳಿಸಿ, ಹೊಸ ದೃಷ್ಟಿಕೋನದೊಂದಿಗೆ ಸಂಶೋಧನೆ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಧ್ಯಯನಾಂಗ ನಿರ್ದೇಶಕ ಡಾ. ಅಮರೇಶ ಯತಗಲ್ ಸ್ವಾಗತಿಸಿದರು.