ಜಾತಿ ನಿಂದನೆ ಕೇಸ್‌ಗಳ ಹಿನ್ನೆಲೆಯಲ್ಲಿ ದಲಿತರಿಗೆ ಅವಮಾನ ಆಗುವಂತಹ ಹೇಳಿಕೆ ನೀಡುವವರ ವಿರುದ್ಧ ಗಂಭೀರ ಹೋರಾಟ ಕೈಗೊಳ್ಳಲಾಗುವುದು ಎಂದು ಬಹುಜನ ಸಮಾಜ ಪಕ್ಷ ಜಿಲ್ಲಾಧ್ಯಕ್ಷ ಡಿ.ಹನುಮಂತಪ್ಪ ಎಚ್ಚರಿಸಿದರು.
ದಾವಣಗೆರೆ: ಜಾತಿ ನಿಂದನೆ ಕೇಸ್‌ಗಳ ಹಿನ್ನೆಲೆಯಲ್ಲಿ ದಲಿತರಿಗೆ ಅವಮಾನ ಆಗುವಂತಹ ಹೇಳಿಕೆ ನೀಡುವವರ ವಿರುದ್ಧ ಗಂಭೀರ ಹೋರಾಟ ಕೈಗೊಳ್ಳಲಾಗುವುದು ಎಂದು ಬಹುಜನ ಸಮಾಜ ಪಕ್ಷ ಜಿಲ್ಲಾಧ್ಯಕ್ಷ ಡಿ.ಹನುಮಂತಪ್ಪ ಎಚ್ಚರಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯಕ್ಕೆ ಅವಹಮಾನ ಆಗುವಂತಹ ಹೇಳಿಕೆ ನೀಡಿದ್ದ ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ್ ವಿರುದ್ಧ ತಾವು ಈ ಹಿಂದೆ ದಾಖಲಿಸಿದ್ದ ಜಾತಿ ನಿಂದನೆ ಪ್ರಕರಣ ಹೈಕೋರ್ಟ್‌ನಿಂದ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದೆ. ಶಾಸಕರ ವಿರುದ್ಧ ಮತ್ತೆ ಇದೀಗ ಜಾತಿ ನಿಂದನೆ ಕೇಸ್ ದಾಖಲಾಗಿದೆ. ಅದರ ಸತ್ಯಾಸತ್ಯತೆ ಬಗ್ಗೆ ನಮಗೆ ಮಾಹಿತಿ ಇಲ್ಲ. ಆದರೂ, ಕೆಲ ಬಿಜೆಪಿ ನಾಯಕರು ಪದೇಪದೇ ಸುಳ್ಳು ಜಾತಿನಿಂದನೆ ಕೇಸ್ ದಾಖಲಿಸಿರುವುದಾಗಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.ಹರಿಹರ ತಾಲೂಕಿನಲ್ಲಿ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ, ಮಣ್ಣುಗಾರಿಕೆ ನಡೆಯುತ್ತಿದೆ. ಯಾರೇ ಶಾಸಕರಾಗಿದ್ದರೂ, ಯಾವುದೇ ಪಕ್ಷದವರ ಸರ್ಕಾರವಿದ್ದರೂ ಆಯಾ ಶಾಸಕರ ಹಿಂಬಾಲಕರು ಅಕ್ರಮದಲ್ಲಿ ತೊಡಗುವುದು ಸಾಮಾನ್ಯ ಎಂಬಂತಾಗಿದೆ ಎಂದು ಆರೋಪಿಸಿದರು.
ಹರಿಹರ ಕ್ಷೇತ್ರದಲ್ಲಿ ನಡೆದಿರುವ ಅಕ್ರಮ ಮರಳುಗಾರಿಕೆ, ಮಣ್ಣುಗಾರಿಕೆಗೆ ಶಾಸಕರು ಮೊದಲು ಕಡಿವಾಣ ಹಾಕಬೇಕು. ಅದನ್ನು ಬಿಟ್ಟು ದಲಿತ ಸಮುದಾಯದ ಅಧಿಕಾರಿಗಳು ಹಾಗೂ ಸಮುದಾಯಕ್ಕೆ ಅವಮಾನ ಆಗುವಂತೆ ಮಾತನಾಡಿದರೆ ಬಹುಜನ ಸಮಾಜ ಪಕ್ಷದಿಂದ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಬೇಕಾದೀತು ಎಂದು ಪುನರುಚ್ಛರಿಸಿದರು.ಪಕ್ಷದ ಮುಖಂಡರಾದ ಇಬ್ರಾಹಿಂ, ಎಂ.ಚಂದ್ರಪ್ಪ, ಮಹಮ್ಮದ್ ಖಲೀಂ, ಜಿ.ಮಂಜುನಾಥ, ಎನ್.ಉಚ್ಚೆಂಗೆಪ್ಪ, ಸಿದ್ದಪ್ಪ, ಜಬೀವುಲ್ಲಾ ಇತರರು ಇದ್ದರು.