ವಾದ್ಯ ಕಲಾವಿದರಿಗೂ ಮಾಸಾಶನ: ‍‍‍‍‍‍‍ವಾದ್ಯ ಕಲಾಮೇಳದಲ್ಲಿ ಆಗ್ರಹ

| Published : Nov 06 2023, 12:45 AM IST

ವಾದ್ಯ ಕಲಾವಿದರಿಗೂ ಮಾಸಾಶನ: ‍‍‍‍‍‍‍ವಾದ್ಯ ಕಲಾಮೇಳದಲ್ಲಿ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ವಾದ್ಯಕಲಾವಿರಿಗೂ ಮಾಸಾಶನಕ್ಕೆ ಆಗ್ರಹ

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯದ ವಿವಿಧ ಪ್ರಕಾರಗಳ ಕಲಾವಿದರಿಗೆ ಸರ್ಕಾರ ಮಾಸಾಶನ ನೀಡುತ್ತಿದೆ. ಅದೇ ರೀತಿ ವಾದ್ಯ ಕಲಾವಿದರಿಗೂ ಮಾಸಾಶನ ಸವಲತ್ತನ್ನು ವಿಸ್ತರಿಸಬೇಕು ಎಂದು ಶ್ರೀ ಕ್ಷೇತ್ರ ಕಚ್ಚೂರಿನ ಧರ್ಮದರ್ಶಿ ಗೋಕುಲ್‌ದಾಸ್‌ ಬಾರ್ಕೂರು ಒತ್ತಾಯಿಸಿದ್ದಾರೆ.

ದ.ಕ. ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ವಾದ್ಯ ಕಲಾವಿದರ ಸಂಘದ ವತಿಯಿಂದ ಭಾನುವಾರ ನಗರದ ಉರ್ವ ಡಾ.ಬಿ.ಆರ್‌. ಅಂಬೇಡ್ಕರ್‌ ಸಭಾಭವನದಲ್ಲಿ ‘ವಾದ್ಯ ಕಲಾ ಮೇಳ’ ಉದ್ಘಾಟಿಸಿ ಅವರು ಮಾತನಾಡಿದರು.

ವಾದ್ಯ ಕಲಾವಿದರಿಗೆ ಮಾಸಾಶನ ಸಿಗುವಂತಾಗಲು ಸಂಘಟನೆ ಪ್ರಯತ್ನ ಮಾಡಬೇಕಿದೆ. ಮಾಸಾಶನದ ಮೂಲಕ ಈ ಕಲಾವಿದರಿಗೆ ಆರ್ಥಿಕ ಭದ್ರತೆ ಸಿಗಲಿದೆ ಎಂದು ಸಲಹೆ ನೀಡಿದರು.

ದಶಕಗಳ ಹಿಂದೆ ತಳ ಸಮುದಾಯದವರ ಮನೆ ಬಾಗಿಲಿಗೆ ಬ್ಯಾಂಡ್‌ ವಾದ್ಯಗಳನ್ನು ಇತರ ಸಮುದಾಯದವರು ಮಾಡಲು ಅವಕಾಶ ಇರಲಿಲ್ಲ. ಇದೇ ವಿಚಾರದಿಂದ ಸ್ವಾಭಿಮಾನಿಗಳಾದ ತಳಸಮುದಾಯದವರು ವಾದ್ಯಗಳನ್ನು ನುಡಿಸಲು ಕಲಿತುಕೊಂಡರು. ನೋವಿನಿಂದ ಬಂದ ಈ ಕಲೆಯನ್ನು ನೆಚ್ಚಿಕೊಂಡು ಇಂದು ದೈವಾರಾಧನೆ, ನಾಗಾರಾಧನೆ ಸೇರಿದಂತೆ ಮುಜರಾಯಿ ದೇವಸ್ಥಾನಗಳಲ್ಲಿ ವಾದ್ಯಗಳನ್ನು ನುಡಿಸುತ್ತಿದ್ದಾರೆ ಎಂದು ಗೋಕುಲ್‌ದಾಸ್ ಹೇಳಿದರು.

ವಾದ್ಯ ಕಲಾ ಮೇಳವನ್ನು ತಾಸೆ ಬಡಿಯುವ ಮೂಲಕ ಉದ್ಘಾಟಿಸಿದ ಚಿತ್ರನಟ ರಾಜ್‌ ಬಿ. ಶೆಟ್ಟಿ ಮಾತನಾಡಿ, ತುಳುನಾಡಿನ ಸಂಸ್ಕೃತಿ ಉಳಿವಿನಲ್ಲಿ ವಾದ್ಯ ಕಲಾ ಮೇಳದ ಪಾತ್ರ ಬಹಳಷ್ಟಿದೆ. ಅವರು ಮಾಡುವ ದೈವಚಾಕರಿಗೆ ಬರೀ ಅಕ್ಕಿ, ತೆಂಗಿನಕಾಯಿ ಮಾತ್ರ ಪಡೆದುಕೊಂಡು ದೈವದ ಮೇಲೆ ನಿಷ್ಠೆ ತೋರಿಸಿದ ಅವರ ಕುರಿತು ಸದಾ ಕಾಲ ಎಲ್ಲರೂ ಹೆಮ್ಮೆ ಪಡಬೇಕು. ಅವರ ಮಕ್ಕಳು ಇಂತಹ ವಾದ್ಯ ಕಲೆಯನ್ನು ಕಲಿಯಲು ಮುಂದೆ ಬಂದಾಗ ಹೆತ್ತವರು ಪ್ರೋತ್ಸಾಹ ನೀಡಬೇಕು. ಸರ್ಕಾರ ಇಂತಹ ದೈವದ ಚಾಕರಿ, ನರ್ತಕ, ವಾದ್ಯ ಕಲೆಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಹೇಳಿದರು.

ವಾದ್ಯಕಲಾ ಸೇರಿದಂತೆ ದೈವದ ಚಾಕರಿ ಮಾಡಿದ ಹಿರಿಯರನ್ನು ಸನ್ಮಾನಿಸಲಾಯಿತು. ಮಂಗಳೂರು ಮಹಾನಗರ ಪಾಲಿಕೆ ಸದಸ್ಯ, ಮಾಜಿ ಮೇಯರ್‌ ಭಾಸ್ಕರ ಮೊಯ್ಲಿ, ನಮ್ಮ ಕುಡ್ಲದ ವ್ಯವಸ್ಥಾಪಕ ಲೀಲಾಕ್ಷ ಕರ್ಕೇರಾ, ಮಂಗಳೂರು ಕಂಬಳ ಅಧ್ಯಕ್ಷ ಕ್ಯಾ. ಬ್ರಿಜೇಶ್‌ ಚೌಟ, ದ.ಕ. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಬಾಲಕೃಷ್ಣ ರೈ ಬಾಂದೊಟ್ಟುಗುತ್ತು, ಲೋಕನಾಥ ಮಾರ್ಲ, ರಂಗನಾಥ ಎ, ಚಂದ್ರಶೇಖರ ವಾಮಂಜೂರು, ಕೃಷ್ಣ ಎಸ್ಕೋಡಿ ಮತ್ತಿತರರು ಇದ್ದರು. ಕೆ.ಕೆ. ಪೇಜಾವರ ಪ್ರಸ್ತಾವಿಕವಾಗಿ ಮಾತನಾಡಿದರು.

ವಾದ್ಯ ಕಲಾ ಮೇಳದ ಗೌರವಾಧ್ಯಕ್ಷ ಗಿರಿಧರ್‌ ಶೆಟ್ಟಿ ಸ್ವಾಗತಿಸಿದರು. ರೋಹಿತ್‌ ಉಳ್ಳಾಲ ಹಾಗೂ ದಯಾನಂದ ಕತ್ತಲ್‌ಸಾರ್‌ ನಿರೂಪಿಸಿದರು. ಇದಕ್ಕೂ ಮೊದಲು ಮಂಗಳಾ ಕ್ರೀಡಾಂಗಣದಿಂದ ಉರ್ವದ ಡಾ. ಅಂಬೇಡ್ಕರ್‌ ಭವನದ ತನಕ ಆಕರ್ಷಕ ವಾದ್ಯಮೇಳದ ಮೆರವಣಿಗೆ ನಡೆಯಿತು. ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.