ಕನ್ನಡಪ್ರಭ ವಾರ್ತೆ ಮಂಡ್ಯ

ಗೃಹಲಕ್ಷ್ಮಿ, ಪಡಿತರ ಚೀಟಿ, ಪಿಂಚಣಿ ಯೋಜನೆಗಳ ಪರಿಷ್ಕರಣೆಯಿಂದಾಗಿ ಫಲಾನುಭವಿಗಳಿಗೆ ಹೊಸ ಪೀಕಲಾಟ ಶುರುವಾಗಿದೆ. ಯೋಜನೆಗಳ ಫಲಾನುಭವಿಗಳಾಗುವುದಕ್ಕೆ ಸಾರ್ವಜನಿಕರು ಮುಗಿಬಿದ್ದಿರುವುದರಿಂದ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಪಡೆಯಲು ಪರದಾಡುವಂತಾಗಿದೆ.

ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯುವುದಕ್ಕೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ಬೇಕಿರುವುದರಿಂದ ಅವರೂ ಹೆಣಗಾಡುವಂತಾಗಿದೆ. ತಾಲೂಕು ಕಚೇರಿ, ನಾಡಕಚೇರಿಗಳ ಬಳಿ ಜನರು ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಎಲ್ಲೆಡೆ ಕಂಡುಬರುತ್ತಿವೆ.

ಯೋಜನೆಗಳ ಸೌಲಭ್ಯ ಪಡೆದುಕೊಳ್ಳುವುದಕ್ಕಾಗಿ ಆತುರಪಡುತ್ತಿರುವ ಅರ್ಹರು ಒಂದೇ ಬಾರಿಗೆ ಜಾತಿ-ಆದಾಯ ಪ್ರಮಾಣಪತ್ರಗಳನ್ನು ಪಡೆಯಲು ಮುಂದಾಗಿರುವುದು ಸರ್ವರ್ ಸಮಸ್ಯೆ ಎದುರಾಗಲು ಮುಖ್ಯ ಕಾರಣ ಎನ್ನಲಾಗಿದೆ. ಲಕ್ಷಾಂತರ ಸಂಖ್ಯೆಯ ಜನರು ಅರ್ಜಿ ಸಲ್ಲಿಸುತ್ತಿರುವುದರಿಂದ ಸರ್ವರ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ನಿಗದಿತ ಸಮಯಕ್ಕೆ ಜಾತಿ-ಆದಾಯ ಪ್ರಮಾಣಪತ್ರಗಳು ಸಿಗದೆ ಜನರು ಪರದಾಡುತ್ತಿದ್ದಾರೆ.

ಯೋಜನೆ ಪರಿಷ್ಕರಣೆ ನೆಪದಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿದ್ದವರಲ್ಲಿ ೬೫ ಸಾವಿರ ಜನರನ್ನು ಜಿಲ್ಲೆಯಲ್ಲಿ ಕೈಬಿಡಲಾಗಿದೆ. ಅವರು ಪಿಂಚಣಿ ಪಡೆಯಬೇಕಾದರೆ ಆದಾಯ ಪ್ರಮಾಣಪತ್ರ ಬೇಕೇಬೇಕು. ಬಿಪಿಎಲ್ ಪಡಿತರ ಚೀಟಿ ವ್ಯವಸ್ಥೆಯಿಂದಲೂ ಲಕ್ಷಾಂತರ ಜನರನ್ನು ರಾಜ್ಯಸರ್ಕಾರ ಕೈಬಿಟ್ಟಿದೆ. ಬಿಪಿಎಲ್ ಪಡಿತರ ಚೀಟಿಗೆ ೩ ಲಕ್ಷ ರು.ವರೆಗೆ ಆದಾಯ ಮಿತಿ ನಿಗದಿಪಡಿಸಲು ಸರ್ಕಾರ ಚಿಂತನೆ ನಡೆಸಿದೆ. ಇವೆಲ್ಲದರ ಪರಿಣಾಮ ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಇವುಗಳಿಗಾಗಿ ಜನರು ನಾ ಮುಂದು, ತಾ ಮುಂದು ಎಂದು ಮುಗಿ ಬೀಳುತ್ತಿರುವುದರಿಂದ ಸರ್ವರ್ ಮೇಲೆ ಒತ್ತಡ ಹೆಚ್ಚಾಗಿ ಕಾರ್ಯನಿರ್ವಹಿಸದಂತಾಗಿದೆ.


ಮತ್ತೊಂದೆಡೆ ವಿದ್ಯಾರ್ಥಿಗಳ ಪೋಷಕರು ವಿದ್ಯಾರ್ಥಿ ವೇತನ ಪಡೆಯುವುದಕ್ಕೆ ಜಾತಿ-ಆದಾಯ ಪ್ರಮಾಣಪತ್ರ ಅಗತ್ಯವಿರುವುದರಿಂದ ಅವರೂ ಕೂಡ ಅರ್ಜಿ ಸಲ್ಲಿಕೆಗೆ ಮುಂದಾಗಿದ್ದಾರೆ. ಇದೆಲ್ಲದರಿಂದ ಸರ್ವರ್ ಸಮಸ್ಯೆ ಉಂಟಾಗಿ ದಿನವಿಡೀ ಕಾದು ಕುಳಿತರೂ ಅರ್ಜಿ ಸಲ್ಲಿಸಲಾಗದೆ, ಪ್ರಮಾಣಪತ್ರಗಳನ್ನು ಪಡೆಯಲಾಗದೆ ಜನರು ಪೇಚಿಗೆ ಸಿಲುಕಿದ್ದಾರೆ.