ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆಗೆ ಅಡಚಣೆ ಉಂಟಾಗಿದ್ದು, ತಕ್ಷಣ ಇದನ್ನು ಸರಿಪಡಿಸಿಕೊಡಿಬೇಕು ಎಂದು ತಾಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಗಂಗೂರು ರಂಗೇಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಎನ್ . ಅನಂತು ತಹಸೀಲ್ದಾರ್‌ ಶ್ರೀಧರ್‌ ಕಂಕನವಾಡಿಯವರಿಗೆ ಮನವಿ ಸಲ್ಲಿಸಿದ್ದಾರೆ.ತಾಲೂಕು ಕಚೇರಿಯಲ್ಲಿ ಮನವಿ ಸಲ್ಲಿಸಿದ ನಂತರ ಮಾತನಾಡಿದ ಅಧ್ಯಕ್ಷ ರಂಗೇಗೌಡ ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಮಾಡಲು ಸರ್ವರ್‌ ಸಮಸ್ಯೆ ಉಂಟಾಗಿದ್ದು, ಇದರಿಂದ ಗ್ರಾಹಕರು ನ್ಯಾಯಬೆಲೆ ಅಂಗಡಿಗಳಿಗೆ ಅಲೆಯುವಂತಾಗಿದೆ ಎಂದರು. ಗ್ರಾಮೀಣ ಪ್ರದೇಶಗಳಲ್ಲಿ ಇದುವರೆಗೂ ಕೇವಲ ಶೇ. ೫೦ರಷ್ಟು ಪಡಿತರ ವಿತರಣೆಯಾಗಿದ್ದು, ಉಳಿದಿರುವ ನಾಲ್ಕು ದಿನಗಳಲ್ಲಿ ಸಮರ್ಪಕ ಪಡಿತರ ವಿತರಣೆ ಮಾಡುವುದು ಸಾಧ್ಯವಾಗುವುದಿಲ್ಲ. ಆಹಾರ ಇಲಾಖೆಯ ನಿಯಮದಂತೆ ತಿಂಗಳ ಕೊನೆಯೊಳಗೆ ಬಯೋಮೆಟ್ರಿಕ್‌ ನೀಡಿ ಅಕ್ಕಿ ಪಡೆಯಬೇಕಾಗಿರುತ್ತದೆ. ಇದೇ ರೀತಿ ಸರ್ವರ್‌ ಸಮಸ್ಯೆ ಮುಂದುವರಿದರೆ ಪಡಿತರ ಪಡೆಯಲು ಬಡ ಕುಟುಂಬಗಳು ಸಂಕಷ್ಟಕ್ಕೆ ಈಡಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಡಿಸಿದರು.

ಈ ಬಾರಿ ಕೇಂದ್ರ ಸರ್ಕಾರದ ಎರಡು ತಿಂಗಳ ಪಡಿತರ ವಿತರಣೆಯಾಗುತ್ತಿದ್ದು, ಒಬ್ಬ ಗ್ರಾಹಕನಿಂದ ಎರಡು ಬಾರಿ ಬಯೋಮೆಟ್ರಿಕ್‌ ಪಡೆಯಬೇಕಾಗಿರುತ್ತದೆ, ಇದು ತುಂಬ ಸಮಸ್ಯೆಯಾಗಿ ಕೆಲವು ಬಾರಿ ನ್ಯಾಯ ಬೆಲೆ ಅಂಗಡಿ ಮತ್ತು ಗ್ರಾಹಕರ ನಡುವೆ ಸಂಘರ್ಷ ಉಂಟಾಗುತ್ತಿದೆ. ಕೂಡಲೇ ಆಹಾರ ಇಲಾಖೆ ಈ ಸಮಸ್ಯೆಯನ್ನು ಬಗೆಹರಿಸಿ ಸುಗಮ ವಿತರಣೆಗೆ ಅನುವು ಮಾಡಿಕೊಡಬೇಕಾಗಿದೆ ಎಂದರು.ಈ ವೇಳೆ ಸಂಘ ನಿರ್ದೇಶಕ ದಯಾನಂದ್ ಹಾಜರಿದ್ದರು.