ಪಡಿತರ ಅಂಗಡಿಗಳಲ್ಲಿ ಸಾಕಷ್ಟು ಪಡಿತರ ಇದ್ದರೂ ತಿಂಗಳ ಮೊದಲ ವಾರದಲ್ಲಿಯೇ ಪಡೆಯಬೇಕಿದ್ದ ಪಡಿತರವು, ಸರ್ವರ್‌ ಸಮಸ್ಯೆಯಿಂದ ಪಡಿತರ ಪಡೆಯಲಾಗದೇ ಪರದಾಡುವಂತಾಗಿದೆ.

ಧಾರವಾಡ:

ಪಡಿತರ ಅಂಗಡಿಗಳಲ್ಲಿ ಸಾಕಷ್ಟು ಪಡಿತರ ಇದ್ದರೂ ತಿಂಗಳ ಮೊದಲ ವಾರದಲ್ಲಿಯೇ ಪಡೆಯಬೇಕಿದ್ದ ಪಡಿತರವು, ಸರ್ವರ್‌ ಸಮಸ್ಯೆಯಿಂದ ಪಡಿತರ ಪಡೆಯಲಾಗದೇ ಪರದಾಡುವಂತಾಗಿದೆ.

ಜಿಲ್ಲೆಯ ಪ್ರತಿಯೊಂದು ಪಡಿತರ ಅಂಗಡಿಯಲ್ಲಿ ಸುಮಾರು 700ರ ವರೆಗೆ ಪಡಿತರ ಚೀಟಿಗಳಿದ್ದು, ಸರ್ವರ್‌ ಸಮಸ್ಯೆಯಿಂದ ಫಲಾನುಭವಿಗಳು ನಿತ್ಯ ಪಡಿತರ ಅಂಗಡಿಗೆ ಬಂದು ಖಾಲಿ ಚೀಲದೊಂದಿಗೆ ಹೋಗುವ ಸ್ಥಿತಿ ಉಂಟಾಗಿದೆ. ನಗರದ ಸೈದಾಪುರ ಬಡಾವಣೆಯಲ್ಲಿ ಸೋಮವಾರ ನೂರಕ್ಕೂ ಹೆಚ್ಚು ಜನರು ಅಕ್ಕಿ-ಗೋದಿ ಹಾಗೂ ಪಡಿತರಕ್ಕೆ ಬೆಳಗ್ಗೆಯಿಂದ ಪಾಳಿ ಹಚ್ಚಿ ಸರ್ವರ್‌ ಕೈಕೊಟ್ಟ ಕಾರಣ ಬಂದ ದಾರಿಗೆ ಸುಂಕವಿಲ್ಲ ಎಂದು ಮರಳಿದರು.

ಪ್ರತಿ ತಿಂಗಳು ಇಷ್ಟೊತ್ತಿಗೆ ಸಂಪೂರ್ಣವಾಗಿ ಪಡಿತರ ವಿತರಣೆಯಾಗುತ್ತಿತ್ತು. ಆದರೆ, ಈ ತಿಂಗಳು ಇನ್ನೂ 100 ಜನರಿಗೂ ಪಡಿತರ ನೀಡಿಲ್ಲ. ಕಾರಣ ಸರ್ವರ್‌ ಸಮಸ್ಯೆ. ಜನರು ತಮ್ಮ ಕೆಲಸ ಬಿಟ್ಟು ಸಂಜೆ ವರೆಗೂ ನಿಂತು ಖಾಲಿ ಕೈಯಲ್ಲಿ ಹೋಗುವಂತಾಗಿದೆ. ನಿತ್ಯ ಕೇವಲ ಹತ್ತು ಜನರಿಗೆ ಮಾತ್ರ ವಿತರಿಸುವಂತಾಗಿದೆ. ಇದರಿಂದ ಜನರು ನಮ್ಮ ಮೇಲೂ ಆಕ್ರೋಶರಾಗುತ್ತಿದ್ದಾರೆ. ಈ ಮೊದಲು ಮೂರು ಸರ್ವರ್‌ ಇದ್ದು, ಇದೀಗ ರಾಜ್ಯಾದ್ಯಂತ ಒಂದೇ ಆಗಿದ್ದರಿಂದ ಈ ಸಮಸ್ಯೆ ಆಗುತ್ತಿದೆ. ಸರಿಯಾಗಿ ಸರ್ವರ್‌ ಕೊಡಬೇಕು. ಇಲ್ಲದೇ ಹೋದಲ್ಲಿ ಮ್ಯಾನುವಲ್ ಸಹಿ ಮಾಡಿ ರೇಶನ್ ಪಡೆಯಲು ಅವಕಾಶ ಕೊಡಬೇಕು ಎಂದು ಪಡಿತರ ಅಂಗಡಿ ಮಾಲೀಕರು ಸರ್ಕಾರಕ್ಕೆ ಒತ್ತಾಯಿಸಿದರು.

ಇನ್ನು, ಪಡಿತರ ಇಲ್ಲದೇ ಕಿರಾಣಿ ಅಂಗಡಿಯಿಂದ ವಸ್ತುಗಳನ್ನು ತಂದು ಜೀವನ ನಿರ್ವಹಿಸಬೇಕಿದೆ. ಇದಕ್ಕಿಂತ ದಿನಗಟ್ಟಲೇ ಪಡಿತರಕ್ಕೆ ಕಾಯ್ದು ಸುಸ್ತಾಗಬೇಕಿದೆ. ಕೂಡಲೇ ಸರ್ವರ್‌ ಸಮಸ್ಯೆಗೆ ಮುಕ್ತಿ ಹಾಡಿ ಸರಳವಾಗಿ ಪಡಿತರ ಹಂಚಿಕೆಗೆ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಬಿಪಿಎಲ್‌ ಕಾರ್ಡ್‌ದೊರರೊಬ್ಬರು ಆಗ್ರಹಿಸಿದರು.