ಸಾರಾಂಶ
ಕುರುಗೋಡು: ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಜನಸೇವೆ ಮತ್ತು ಗ್ರಾಮದ ಅಭಿವೃದ್ಧಿ ಮಾಡುವ ಉದ್ದೇಶವಿರಬೇಕು ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಸಮೀಪದ ಸಿರಿಗೇರಿ ಗ್ರಾಮದಲ್ಲಿ ಕರ್ನಾಟಕ ರಾಜಕೀಯ ಅಕಾಡೆಮಿ ವತಿಯಿಂದ ಭಾನುವಾರ ಆಯೋಜಿಸಿದ್ದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಪುನಶ್ಚೇತನ ಶಿಬಿರ ಉದ್ಘಾಟಿಸಿ ಮಾತನಾಡಿದರು.ಒಂದು ಗ್ರಾಮ ಪಂಚಾಯಿತಿಗೆ ಮನೆ, ವಿದ್ಯುತ್, ರಸ್ತೆ, ನೀರು, ಶೌಚಾಲಯದಂತಹ ವ್ಯವಸ್ಥೆಯನ್ನು ಸರಿಪಡಿಸಲು ಒಬ್ಬ ಪ್ರಮಾಣಿಕ ಗ್ರಾಪಂ ಅಧ್ಯಕ್ಷ ಮತ್ತು ಸದಸ್ಯನಿಂದ ಮಾತ್ರ ಸಾಧ್ಯ. ಗ್ರಾಮ ಪಂಚಾಯಿತಿಯು ಸರ್ಕಾರ ಇದ್ದಂತೆ. ಸರ್ಕಾರದಿಂದ ಅನುದಾನದ ಜತೆಗೆ ಸ್ಥಳೀಯರಿಂದ ತೆರಿಗೆ ವಸೂಲಿ ಮಾಡಿ ಸಾರ್ವಜನಿಕರಿಗೆ ಬಳಕೆಯಾಗುವ ಮತ್ತು ಗ್ರಾಮದ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು ಎಂದರು.
ಡಾ. ಬಿ.ಆರ್. ಅಂಬೇಡ್ಕರ ಅವರ ಆಶಯದಂತೆ ಪ್ರಜಾಪ್ರಭುತ್ವದಲ್ಲಿ ಅಧಿಕಾರ, ಅವಕಾಶ ಇವೆರಡು ಸಮಪ್ರಮಾಣದಲ್ಲಿ ಹಂಚಿಯಾಗಬೇಕು. ಇಲ್ಲಿ ಮತದಾರರೇ ಶ್ರೇಷ್ಠ. ಗ್ರಾಮ ಬದಲಾವಣೆಗೆ ಗ್ರಾಮ ಪಂಚಾಯಿತಿ ಮುಖ್ಯವಾಗುತ್ತದೆ. ವ್ಯವಸ್ಥೆಗಳಗೆ ಅನಿವಾರ್ಯತೆಗಾಗಿ ಒಗ್ಗಿಕೊಳ್ಳಬೇಕು ಎಂದರು.ಜಾತಿ ಮತ್ತು ಆದಾಯ ಪ್ರಮಾಣಪತ್ರ, ವಿಧವಾ ವೇತನಾ, ವಿವಾಹ ನೋಂದಣಿ ಇತರೆ ಗ್ರಾಮ ಪಂಚಾಯಿತಿಯ ಕಾರ್ಯಾಲಯದಲ್ಲೇ ನಡೆಯಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆಯಲ್ಲಿ ಮನವಿ ಮಾಡಿದ್ದೇನೆ.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಬರುವ ಮೊರಾರ್ಜಿ ಶಾಲೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಶಿಕ್ಷಕರು/ ಪ್ರಾಶುಂಪಾಲರು ಸುಮಾರು 15 ವರ್ಷದಿಂದ ಕಡಿಮೆ ವೇತನದಲ್ಲಿ ಕರ್ತವ್ಯ ನಿರ್ವಹಿಸುತ್ತರುವ ಸಮಸ್ಯೆ ಬಗ್ಗೆ ಶಿಕ್ಷಕರೊಬ್ಬರು ಮನವಿ ಸಲ್ಲಿಸಿ ಅಳಲನ್ನು ತೋಡಿಕೊಂಡಾಗ, ಕೂಡಲೇ ಪ್ರಧಾನ ಕಾರ್ಯದರ್ಶಿ ಮಣಿವಣ್ಣಿನ್ ಅವರಿಗೆ ಕರೆ ಮಾಡಿ ಅವರನ್ನು ಕಾಯಂಮಾತಿ ಮಾಡುವ ಅವಕಾಶಗಳಿದ್ದರೆ ಮಾಡಿ ಕೊಡಿ, ನಾನು ಸಚಿವರಲ್ಲಿ ಮಾತನಾಡುವೆ ಎಂದು ಅಧಿಕಾರಿಗೆ ಸೂಚನೆ ನೀಡಿದರು.ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಮಾತನಾಡಿ, ಸಾಂಸ್ಕೃತಿಕ, ಸಾಹಿತ್ಯ, ರೈತ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಸಿರಿಗೇರಿ ಗ್ರಾಮ. ಗ್ರಾಪಂ ಸದಸ್ಯರು ಸಾರ್ವಜನಿಕರಿಗೆ ಸ್ಪಂದಿಸುವ ಕಾರ್ಯಗಳನ್ನು ಮಾಡಿ ಎಂದರು. ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬರೂ ಪಡೆಯಿರಿ ಎಂದರು.
ಪಂಚಾಯಿತಿ ಸದಸ್ಯರ ಒಕ್ಕೂಟದ ಜಿಲ್ಲಾಧ್ಯಕ್ಷ ನಾಗರಾಜ್ ಗೌಡ ಮಾತನಾಡಿ, ಇಂದಿನ ಸರ್ಕಾರಗಳು ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರವನ್ನು ಮೊಟಕುಗೊಳಿಸುತ್ತಿರುವುದು ಗ್ರಾಮಗಳ ಅಭಿವೃದ್ಧಿಗೆ ಮಾರಕವಾಗುತ್ತಿದೆ ಎಂದರು.ಆಯೋಜಕರಾದ ಸಿರಿಗೇರಿ ಯರ್ರಿಸ್ವಾಮಿ, ಗ್ರಾಮ ನಾಗನಾಥೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ. ಮಹಾರುದ್ರಗೌಡ ಇದ್ದರು.