ಮಹದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ

| Published : Apr 08 2024, 01:05 AM IST

ಸಾರಾಂಶ

ಪ್ರಸಿದ್ಧ ಧಾರ್ಮಿಕ ಪುಣ್ಯ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವದ ಪ್ರಯುಕ್ತ ಎಣ್ಣೆ ಮಜ್ಜನ ಸೇವೆ ಧಾರ್ಮಿಕವಾಗಿ ಪೂಜಾ ಕಾರ್ಯಕ್ರಮಗಳು ವಿಧಿ ವಿಧಾನಗಳೊಂದಿಗೆ ಜರುಗಿತು.

ಕನ್ನಡಪ್ರಭ ವಾರ್ತೆ ಹನೂರು

ಪ್ರಸಿದ್ಧ ಧಾರ್ಮಿಕ ಪುಣ್ಯ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವದ ಪ್ರಯುಕ್ತ ಎಣ್ಣೆ ಮಜ್ಜನ ಸೇವೆ ಧಾರ್ಮಿಕವಾಗಿ ಪೂಜಾ ಕಾರ್ಯಕ್ರಮಗಳು ವಿಧಿ ವಿಧಾನಗಳೊಂದಿಗೆ ಜರುಗಿತು.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಚಾಂದ್ರಮಾನ ಯುಗಾದಿ ಜಾತ್ರಾ ಮಹೋತ್ಸವದ ಪ್ರಯುಕ್ತ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಬೆಳಗಿನ ಜಾವ ಸಾರಥಿ ಸಾಲಿನ ಬುಡಕಟ್ಟು ಸಮುದಾಯದ ಬೇಡಗಂಪಣ ಅರ್ಚಕರಿಂದ ಮಾದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ ವಿಶೇಷ ಧೂಪದ ಅಭಿಷೇಕ ಪೂಜಾ ಕಾರ್ಯಕ್ರಮಗಳು ಮಹಾ ಮಂಗಳಾರತಿಯೊಂದಿಗೆ ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಸಂಭ್ರಮ ಸಡಗರದೊಂದಿಗೆ ನಡೆಯಿತು.

ಬೃಹತ್ ಪರದೆಯ ಮೇಲೆ ಮಾದಪ್ಪನ ದರ್ಶನ:

ಮೊದಲ ಬಾರಿಗೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮಲೆ ಮಹದೇಶ್ವರ ಬೆಟ್ಟದಲ್ಲಿ ಬೃಹತ್ ಪರದೆಯ ಮೇಲೆ ಮಾದಪ್ಪನ ದರ್ಶನ ವ್ಯವಸ್ಥೆಯನ್ನು ನೇರ ಪ್ರಸಾರವನ್ನು ಭಕ್ತರಿಗಾಗಿ ವ್ಯವಸ್ಥೆ ಕಲ್ಪಿಸಲಾಗಿತ್ತು ಜೊತೆಗೆ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಮೊಬೈಲ್ ಚಾರ್ಜರ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ವಿಶೇಷ ವಿದ್ಯುತ್ ದೀಪ ಅಲಂಕಾರ:

ಧಾರ್ಮಿಕ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಹೊತ್ತ ಭಕ್ತಾದಿಗಳಿಂದ ವಿಶೇಷ ವಿದ್ಯುತ್ ದೀಪಾಲಂಕಾರ ರಾಜಗೋಪುರ ದೇವಾಲಯದ ಸುತ್ತಲೂ ಆಲಂಬಾಡಿ ಬಸವ ಹಾಗೂ ವಿವಿಧೆಡೆ ಜಗಮಗಿಸಿದ ವಿಶೇಷ ವಿದ್ಯುತ್ ದೀಪ ಅಲಂಕಾರ ನೋಡುಗರ ಕಣ್ಮನ ಸೆಳೆಯಿತು.

ಸಾರಿಗೆ ವ್ಯವಸ್ಥೆ: ಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಚಂದ್ರಮಾನ ಯುಗಾದಿ ಹಬ್ಬದ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಕರ್ನಾಟಕ ರಾಜ್ಯ ಸಾರಿಗೆ ವಾಹನ ವ್ಯವಸ್ಥೆ ಕಲ್ಪಿಸುವ ಮೂಲಕ ಚಾಮರಾಜನಗರ ಸಾರಿಗೆ ಘಟಕ ವತಿಯಿಂದ 100 ಸಾರಿಗೆ ವಾಹನ ಮೈಸೂರು ಘಟಕ ವತಿಯಿಂದ 50 ಸಾರಿಗೆ ವ್ಯವಸ್ಥೆ ಮೈಸೂರು, ನಂಜನಗೂಡು ಘಟಕದ ವತಿಯಿಂದ 20 ಸಾರಿಗೆ, ರಾಮನಗರ ಮತ್ತು ಮಂಡ್ಯ 40 ಸಾರಿಗೆ ವ್ಯವಸ್ತೆಯನ್ನು ಭಕ್ತರ ಅನುಕೂಲಕ್ಕಾಗಿ 250 ಕರ್ನಾಟಕ ರಾಜ್ಯ ಸಾರಿಗೆ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ತಮಿಳುನಾಡಿನಿಂದಲೂ ಸಹ 350ಕ್ಕೂ ಹೆಚ್ಚು ಸಾರಿಗೆ ವಾಹನವನ್ನು ಕಲ್ಪಿಸಿದೆ.

ಆಲಂಬಡಿ ಬಸವನಿಗೆ ಪೂಜೆ: ಭಕ್ತರು ಹಾಗೂ ರೈತರು ವಿಶೇಷವಾಗಿ ದೇವಾಲಯದ ಹಿಂಭಾಗದ ಮೇಲಂತಸ್ತಿನಲ್ಲಿ ಬರುವ ಆಲಂಬಾಡಿ ಬಸವನಿಗೆ ಮಾದಪ್ಪನ ಭಕ್ತರು ಎಣ್ಣೆ ಹಾಗೂ ಹಾಲಿನಲ್ಲಿ ಅಭಿಷೇಕ ಮಾಡಿ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಸುವಂತೆ ಮತ್ತು ರೈತರು ತಾವು ಬೆಳೆದ ದವಸ ಧಾನ್ಯಗಳನ್ನು ತಂದು ಬಸವನಿಗೆ ಎರಚುವ ಮೂಲಕ ಇಷ್ಟಾರ್ಥ ಸಿದ್ಧಿಸುವಂತೆ ನಿವೇದನೆ ಮಾಡಿಕೊಳ್ಳುವ ಮೂಲಕ ಭಕ್ತ ಸಮೂಹ ಪೂಜೆ ಸಲ್ಲಿಸಿತು.

ಭಕ್ತರ ದಂಡು: ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ಬೆಂಗಳೂರು ಮೈಸೂರು ಮಂಡ್ಯ ಚಾಮರಾಜನಗರ ಜಿಲ್ಲೆ ಸೇರಿದಂತೆ ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಬರ ಬಿಸಿಲು ಲೆಕ್ಕಿಸದೆ ಆಗಮಿಸಿದ್ದಾರೆ. ದೇವಾಲಯದ ಮುಂಭಾಗ ಇಷ್ಟಾರ್ಥ ಸಿದ್ಧಿಸುವಂತೆ ದೂಪಹಾಕಿ ಜೈಕಾರಗಳನ್ನು ಕೂಗಿ ಉಘೇ ಮಾದಪ್ಪ ಕೂಗು ಮುಗಿಲು ಮುಟ್ಟುವಂತಿತ್ತು.