ಸಚಿವ ಮಂಕಾಳ ವೈದ್ಯ ಅವರು ರಸ್ತೆಯಲ್ಲಿ ತೆರಳುವ ಭಕ್ತರಿಗೆ ತೊಂದರೆಯಾಗಬಾರದು ಎಂದು ಹೊಸ ರಸ್ತೆ ನಿರ್ಮಿಸಿ ಕೊಡುವುದರ ಮೂಲಕ ದೇವತಾ ಕಾರ್ಯಕ್ಕೆ ನೆರವಾಗಿದ್ದಾರೆ.
ಭಟ್ಕಳ: ಜನಪ್ರತಿನಿಧಿಗಳು ಜನರ ಸಮಸ್ಯೆಗಳನ್ನು ಅರಿತು ಜನರ ಕೆಲಸ ಮಾಡಿಕೊಡಬೇಕು. ಪ್ರತಿಯೊಬ್ಬ ಜನಪ್ರತಿನಿಧಿಗಳದ್ದು ಜನಸೇವೆಯೇ ಪ್ರಮುಖ ಧ್ಯೇಯವಾಗಬೇಕು. ಜನರ ಸೇವೆಯೇ ಜನಾರ್ದನನ ಸೇವೆ ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಕಾಮಾಕ್ಷಿ ನಿಲಯದ ಬಳಿ ಒಂದು ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಕಾಂಕ್ರಿಟ್ ರಸ್ತೆಯ ಉದ್ಘಾಟನೆ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಸಚಿವ ಮಂಕಾಳ ವೈದ್ಯ ಅವರು ರಸ್ತೆಯಲ್ಲಿ ತೆರಳುವ ಭಕ್ತರಿಗೆ ತೊಂದರೆಯಾಗಬಾರದು ಎಂದು ಹೊಸ ರಸ್ತೆ ನಿರ್ಮಿಸಿ ಕೊಡುವುದರ ಮೂಲಕ ದೇವತಾ ಕಾರ್ಯಕ್ಕೆ ನೆರವಾಗಿದ್ದಾರೆ ಎಂದರು.
ಗುರುಗಳಿಂದ ಮಾರ್ಗದರ್ಶನ ಪಡೆಯುವ ಅವರು ಗುರುಗಳು ತೆರಳುವ ಕ್ಷೇತ್ರದಲ್ಲಿ ನೂತನ ರಸ್ತೆ ನಿರ್ಮಿಸಿ ನೂತನ ಮಾರ್ಗದಲ್ಲೆ ತೆರಳುವಂತೆ ಮಾಡುತ್ತಿರುವುದು ಜನಪರವಾದ ಕಾರ್ಯವಾಗಿದ್ದು, ಅವರ ಜನಪರ ಕಾರ್ಯಗಳು ಹೀಗೆಯೇ ಮುಂದುವರಿಯಲಿ ಎಂದು ಹರಸಿದರು.ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ದೇವರು, ಗುರುಗಳ ಬಗ್ಗೆ ಭಕ್ತಿ, ಗೌರವ ಹೊಂದಬೇಕು. ಯಾರು ದೇವರಿಗೆ, ಗುರುಗಳಿಗೆ ತಲೆಬಾಗುತ್ತಾರೊ ಅವರು ಎತ್ತರದ ಸ್ಥಾನಕ್ಕೆ ಬೆಳೆಯುತ್ತಾರೆ. ಗುರುಗಳ ಪಾದಸ್ಪರ್ಶ ಎಲ್ಲಿ ಆಗುತ್ತದೋ ಅಲ್ಲಿ ಎಲ್ಲವೂ ಸಾಧ್ಯ. ಮಠ- ಮಂದಿರಗಳಿಗೆ ಎಂದೂ ಕೊರತೆ ಆಗಬಾರದು ಎನ್ನುವುದು ನನ್ನ ಆಶಯ ಎಂದರು.
ಗುರು ಪರಂಪರೆಯೊಂದಿಗೆ ನಾನು ಸದಾ ಇದ್ದೇನೆಂದರು. ಹಾಂಗ್ಯೋ ಐಸ್ ಕ್ರೀಂ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಪ್ರದೀಪ ಪೈ ಮಾತನಾಡಿದರು. ಜಿಎಸ್‌ಬಿ ಸಮಾಜದ ಗೌರವಾಧ್ಯಕ್ಷ ಸುರೇಂದ್ರ ಶ್ಯಾನಭಾಗ, ಹಾಂಗ್ಯೋ ಐಸ್‌ಕ್ರೀಂನ ದಿನೇಶ ಪೈ, ಸಮಾಜದ ಮುಖಂಡ, ಉದ್ಯಮಿ ರಾಜೇಶ ನಾಯಕ, ಜಿಎಸ್‌ಬಿ ಸಮಾಜದ ಅಧ್ಯಕ್ಷ ನಾಗೇಶ ಕಾಮತ, ಕಾಮಾಕ್ಷಿ ದೇವಸ್ಥಾನದ ಅಧ್ಯಕ್ಷ ಹರೀಶ ಕಾಮತ ಮುಂತಾದವರು ಇದ್ದರು.ಕಾರ್ಯಕ್ರಮದಲ್ಲಿ ಸ್ವಾಮೀಜಿಯವರು ಸಚಿವ ಮಂಕಾಳ ವೈದ್ಯ ಹಾಗೂ ಪುತ್ರಿ ಬೀನಾ ವೈದ್ಯ ಅವರನ್ನು ಸಮಾಜದ ಪರವಾಗಿ ಶಾಲು ಹೊದಿಸಿ ಗೌರವಿಸಿದರು.