ಅಧಿಕಾರಿಗಳಿಗೆ ಸೇವಾ ಮನೋಭಾವ ಮುಖ್ಯ: ಜಿ ಪದ್ಮಾವತಿ

| Published : Oct 24 2024, 12:30 AM IST

ಸಾರಾಂಶ

ಲಿಂಗತ್ವ ಅಲ್ಪ ಸಂಖ್ಯಾತರಿಗೆ ಟ್ರಾನ್ಸ್‌ಜೆಂಡರ್ ಗುರುತಿನ ಚೀಟಿ ಹಾಗೂ ಗೃಹಲಕ್ಷ್ಮೀ ಯೋಜನೆಯ ಆದೇಶ ಪತ್ರವನ್ನು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರತಿಯೊಬ್ಬ ಮಹಿಳೆಯೂ ಶಕ್ತಿಯುತರಾಗಿ ಸ್ವಾವಲಂಬಿಯಾಗಬೇಕು. ಸರ್ಕಾರಿ ಅಧಿಕಾರಿಗಳು ಮಹಿಳೆಯರ ಸಬಲೀಕರಣಕ್ಕಾಗಿ ಇರುವ ಯೋಜನೆಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಬೇಕು. ಯೋಜನೆಗಳನ್ನು ಪಡೆಯಲು ಮಹಿಳೆಯರನ್ನು ಅಲೆದಾಡಿಸಬೇಡಿ. ಯೋಜನೆಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ.ಜೆ.ಎಲ್ ಜವರೇಗೌಡ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಂಯುಕ್ತಾಶ್ರಯದಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ದೇವದಾಸಿಯರಿಗೆ ಪಿಂಚಣಿ, ಎಚ್‌ಐವಿ ಸೊಂಕಿತರಿಗೆ ಸಹಾಯಧನ, ದಮನಿತ ಮಹಿಳೆಯರಿಗೆ ಹಾಗೂ ವಿಕಲಚೇತನ ಮಹಿಳೆಯರಿಗೆ ಸಾಕಷ್ಟು ರೀತಿಯ ಸಹಾಯಧನವನ್ನು ನೀಡುತ್ತಿದೆ. ಕಳೆದ ವರ್ಷ ಉದ್ಯೋಗಿನಿ ಯೋಜನೆಯಡಿ ೮೩,೦೦೦ ಮಹಿಳೆಯರು ಅರ್ಜಿಗಳನ್ನು ಸಲ್ಲಿಸಿದ್ದು, ಅನುದಾನ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಉದ್ಯೋಗಿನಿ ಯೋಜನೆಯಡಿ ಗುರಿಯನ್ನು ಜಾಸ್ತಿ ಮಾಡುವಂತೆ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಬ್ಯಾಂಕ್‌ಗಳಲ್ಲಿ ಸಾಲ ನೀಡಲು ತೊಂದರೆ:

ಸಾಕಷ್ಟು ಬ್ಯಾಂಕ್‌ಗಳಲ್ಲಿ ಸಾರ್ವಜನಿಕರಿಗೆ ಅನೇಕ ತೊಂದರೆಗಳು ಉಂಟಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಜನರು ಬ್ಯಾಂಕ್ ನಲ್ಲಿ ಸಾಲ ಪಡೆಯಲು ಮುಂದಾದಾಗ ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಮಧ್ಯಮ ವರ್ಗದ ಹೆಣ್ಣು ಮಕ್ಕಳನ್ನು ಅಲೆದಾಡುವಂತೆ ಮಾಡುತ್ತಿದ್ದಾರೆ. ಬ್ಯಾಂಕ್‌ನ ಈ ವ್ಯವಸ್ಥೆ ಬದಲಾಗಬೇಕು. ಮಹಿಳೆಯರ ಅಲೆದಾಟ ನೋಡಲಾಗದೆ ಬೆಂಗಳೂರಿನಲ್ಲಿ ಮಹಿಳಾ ಕೋ-ಆಪರೇಟಿವ್ ಬ್ಯಾಂಕ್ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಮಹಿಳೆಯರ ಸಬಲೀಕರಣಕ್ಕಾಗಿ ಕಿರುಸಾಲ ಯೋಜನೆ, ಮಾರುಕಟ್ಟೆ ನೆರವು ಹಾಗೂ ಸ್ತ್ರೀಶಕ್ತಿ ಸಂಘಗಳ ಒಕ್ಕೂಟಕ್ಕೆ ಕೈಸಾಲ ನೀಡುವಂತೆ ಒಟ್ಟು ೩ ಮನವಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ಆ್ಯಸಿಡ್ ದಾಳಿಗೊಳಗಾದವರಿಗೆ ೫ ಲಕ್ಷ ರು. ಸಾಲ:

ರಾಜ್ಯದಲ್ಲಿ ಆ್ಯಸಿಡ್ ದಾಳಿಗೆ ಒಳಗಾದ ಸಾಕಷ್ಟು ಮಹಿಳೆಯರಿಗೆ ಅಭಿವೃದ್ಧಿ ನಿಗಮದಿಂದ ೫ ಲಕ್ಷ ರು.ಸಾಲ ನೀಡುವ ಮೂಲಕ ಫ್ಯಾನ್ಸಿ ಸ್ಟೋರ್, ಪ್ರಾವಿಜನ್ ಸ್ಟೋರ್, ಬಳೆ ಅಂಗಡಿ ಹಾಗೂ ಇನ್ನಿತರೆ ವ್ಯಾಪಾರ ನಡೆಸುವುದಕ್ಕೆ ಅವಕಾಶ ಕಲ್ಪಿಸಿದ್ದೇವೆ. ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಎಲ್ಲಾ ರಂಗದಲ್ಲಿಯೂ ಮುನ್ನುಗ್ಗಿ ತನ್ನ ಛಾಪನ್ನು ಮೂಡಿಸಿದ್ದಾರೆ. ಜಿಲ್ಲೆಯಲ್ಲಿ ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಿದ್ದಾರೆ. ಜೊತೆಗೆ ಜಿಲ್ಲೆಯ ಆಡಳಿತವು ಕೂಡ ಉತ್ತಮ ರೀತಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಜಮೂರ್ತಿ ಮಾತನಾಡಿ, ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸುಮಾರು ೪೨ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರ ಉದ್ದೇಶವೆಂದರೆ ಸಮಾಜದಲ್ಲಿ ಮಹಿಳೆಯರನ್ನು ಸಮಾನವಾಗಿ ಕಾಣುವುದಾಗಿದೆ. ಹೆಣ್ಣು ಮಕ್ಕಳ ಮೇಲೆ ಆಗುವಂತಹ ದೌರ್ಜನ್ಯ, ದಬ್ಬಾಳಿಕೆ, ಶೋಷಣೆ, ಬಾಲ್ಯ ವಿವಾಹ, ಅತ್ಯಾಚಾರ, ವರದಕ್ಷಿಣೆ ಇನ್ನಿತರೆ ಅಂಶಗಳಿಂದ ಮಹಿಳೆಯರನ್ನು ರಕ್ಷಣೆ ಮಾಡಬೇಕು ಎಂದು ಹೇಳಿದರು.

ಲಿಂಗತ್ವ ಅಲ್ಪ ಸಂಖ್ಯಾತರಿಗೆ ಟ್ರಾನ್ಸ್‌ಜೆಂಡರ್ ಗುರುತಿನ ಚೀಟಿ ಹಾಗೂ ಗೃಹಲಕ್ಷ್ಮೀ ಯೋಜನೆಯ ಆದೇಶ ಪತ್ರವನ್ನು ವಿತರಿಸಲಾಯಿತು.

ಸಭೆಯಲ್ಲಿ ಮಂಡ್ಯ ಜಿಲ್ಲೆಯ ಮಹಿಳಾ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಲಕ್ಷ್ಮೀಚಂದ್ರಾಜು, ಮಹಿಳಾ ಅಭಿವೃದ್ಧಿ ನಿರೀಕ್ಷಕಿ ಮಹಾದೇವಮ್ಮ ಸೇರಿದಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಆರ್ಥಿಕ ಸಬಲೀಕರಣಕ್ಕೆ ಯೋಜನೆ: ಸರ್ಕಾರವು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಉದ್ಯೋಗಿನಿ ಯೋಜನೆಯಡಿಯಲ್ಲಿ ೩,೩೩೪ ಫಲಾನುಭವಿಗಳಿಗೆ ೫,೨೪,೪೪,೩೮೦ ರು., ಕಿರುಸಾಲ ಯೋಜನೆಯಡಿ ೯೪ ಫಲಾನುಭವಿಗಳಿಗೆ ೧,೭೧,೮೫,೦೦೦ ರು, ಸಮೃದ್ಧಿ ಯೋಜನೆಯಲ್ಲಿ ೧೨೨೭ ಫಲಾನುಭವಿಗಳಿಗೆ ೧,೨೨,೭೦೦೦೦ ರು., ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ೧೬೩ ಫಲಾನುಭವಿಗಳಿಗೆ ೫೩,೦೩,೮೮೦ ರು., ಧನಶ್ರೀ ಯೋಜನೆಯಡಿ ೧೫೮ ಫಲಾನುಭವಿಗಳಿಗೆ ೭೧,೩೩,೭೦೦ ರು. ಹಾಗೂ ಚೇತನ ಯೋಜನೆಯಡಿ ೯೩ ಫಲಾನುಭವಿಗಳಿಗೆ ೪೨,೩೬,೧೦೦ ರು. ಸಹಾಯಧನವನ್ನು ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.

ಸಾಲ ಪಡೆಯಲು ತೊಂದರೆಗಳಿದ್ದರೆ ಗಮನಕ್ಕೆ ತನ್ನಿ:ಜಿಲ್ಲೆಯ ಮಹಿಳೆಯರು ಸರ್ಕಾರದ ಯೋಜನೆಗಳಾದ ಉದ್ಯೋಗಿನಿ ಹಾಗೂ ಇನ್ನಿತರೆ ಯೋಜನೆಯ ಮೂಲಕ ಸ್ವಂತ ವ್ಯಾಪಾರ ಹಾಗೂ ಇನ್ನಿತರೆ ಕೆಲಸದಿಂದ ಆರ್ಥಿಕವಾಗಿ ಸಬಲರಾಗಲು ಕಿರುಸಾಲ ಹಾಗೂ ಸಹಾಯಧನ ನೀಡುತ್ತಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮೈಕ್ರೋ ಫೈನಾನ್ಸ್‌ನಿಂದ ಸಾಲ ಪಡೆದು ಅಧಿಕ ಬಡ್ಡಿಯನ್ನು ಕಟ್ಟಲಿಕ್ಕೆ ಹೋಗಬೇಡಿ. ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ತೊಂದರೆಗಳಿದ್ದಲ್ಲಿ ನಮ್ಮ ಗಮನಕ್ಕೆ ತರುವ ಕೆಲಸ ಮಾಡಿ.

ಅರುಣ್‌ ಕುಮಾರ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ