ಕೊನೆ ಉಸಿರು ಇರುವವರೆಗೆ ಜನರ ಸೇವೆ: ಸಚಿವ ಸಂತೋಷ್ ಲಾಡ್

| Published : Oct 09 2024, 01:46 AM IST

ಕೊನೆ ಉಸಿರು ಇರುವವರೆಗೆ ಜನರ ಸೇವೆ: ಸಚಿವ ಸಂತೋಷ್ ಲಾಡ್
Share this Article
  • FB
  • TW
  • Linkdin
  • Email

ಸಾರಾಂಶ

ಕೊನೆಯ ಉಸಿರಿರುವವರೆಗೆ ಪ್ರಾಮಾಣಿಕವಾಗಿ ಜನರ ಸೇವೆಗೈಯುವೆ. ದೊರೆತ ಅಧಿಕಾರವನ್ನು ಬಡವರಿಗಾಗಿ ಬಳಸುವೆ.

ಸಂಡೂರು: ಪಟ್ಟಣದ ಎಪಿಎಂಸಿ ಬಳಿಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಅಂಗವಿಕಲರಿಗೆ ೨೦ ತ್ರಿಚಕ್ರ ವಾಹನ, ಹಲವು ಮಹಿಳೆಯರಿಗೆ ಹೊಲಿಗೆ ಯಂತ್ರ ಮತ್ತು ೩೦೦೦ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.

ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಕೃಷಿ, ತೋಟಗಾರಿಕೆ, ಕ್ರೀಡಾ ಕ್ಷೇತ್ರಗಳಲ್ಲಿನ ಉತ್ತಮ ಸಾಧಕರಿಗೆ, ನಿವೃತ್ತ ಶಿಕ್ಷಕರಿಗೆ, ವಿವಿಧ ಇಲಾಖೆಗಳಲ್ಲಿ ಉತ್ತಮ ಸಾಧನೆಗೈದ ನೌಕರರನ್ನು ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಜನರ ಸೇವೆಗೆಂದು ತಾವು ರಾಜಕೀಯ ಪ್ರವೇಶಿಸಿದ್ದು, ಕೊನೆಯ ಉಸಿರಿರುವವರೆಗೆ ಪ್ರಾಮಾಣಿಕವಾಗಿ ಜನರ ಸೇವೆಗೈಯುವೆ. ದೊರೆತ ಅಧಿಕಾರವನ್ನು ಬಡವರಿಗಾಗಿ ಬಳಸುವೆ. ತಮ್ಮ ಸಮಾಜ ಸೇವೆಗೆ ಲಾಡ್ ಕುಟುಂಬದವರು ಬೆನ್ನೆಲುಬಾಗಿದ್ದಾರೆ ಎಂದರು.

ನಂಜುಂಡಪ್ಪ ವರದಿಯನ್ವರ ಅತಿ ಹಿಂದುಳಿದ ತಾಲ್ಲೂಕೆಂದು ಗುರುತಿಸಲ್ಪಟ್ಟಿದ್ದ ಸಂಡೂರು ತಾಲೂಕಿನಲ್ಲಿ ಇಂದು ಹಲವು ಶಾಲಾ ಕಾಲೇಜುಗಳು, ವಿದ್ಯಾರ್ಥಿ ವಸತಿನಿಲಯಗಳನ್ನು ಆರಂಭಿಸಲಾಗಿದೆ. ಕ್ಷೇತ್ರದಾದ್ಯಂತ ಉತ್ತಮ ರಸ್ತೆಗಳನ್ನು ನಿರ್ಮಿಸಲಾಗಿದೆ. ಶಾಸಕರಾಗಿದ್ದ ಈ. ತುಕಾರಾಂ ₹೨೫೦೦ ಕೋಟಿಗೂ ಅಧಿಕ ಅನುದಾನವನ್ನು ತಂದು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಕಾರಣ ತಾಲೂಕು ಇಂದು ಜಿಲ್ಲೆಯಲ್ಲಿಯೇ ಅಭಿವೃದ್ಧಿಯಲ್ಲಿ ನಂ.೧ ಸ್ಥಾನದಲ್ಲಿದೆ ಎಂದು ವಿವರಿಸಿದರು.

ಐಎಎಸ್ ಹಾಗೂ ಐಪಿಎಸ್ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಪರೀಕ್ಷೆ ನಡೆಸಲಾಗುವುದು. ಅದರಲ್ಲಿ ಉತ್ತೀರ್ಣರಾಗುವವರಿಗೆ ಐಎಎಸ್, ಐಪಿಎಸ್ ಪರೀಕ್ಷೆಗೆ ಅಗತ್ಯವಾದ ತರಬೇತಿ ಪಡೆಯಲು ಬೇಕಾದ ಸಂಪೂರ್ಣ ವೆಚ್ಚವನ್ನು ಸಂತೋಷ್ ಲಾಡ್ ಫೌಂಡೇಶನ್ ಭರಿಸಲಿದೆ. ಕಾರ್ಮಿಕ ಇಲಾಖೆಯಿಂದ ೨೩ ಅಸಂಘಟಿತ ವಲಯಗಳನ್ನು ಗುರುತಿಸಿ, ಅವುಗಳಲ್ಲಿ ತೊಡಗಿಕೊಂಡವರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲಾಗಿದೆ. ರಾಜ್ಯ ಸರ್ಕಾರ ವಾರ್ಷಿಕ ₹೬೦ ಸಾವಿರ ಕೋಟಿಯನ್ನು ವಿವಿಧ ಭಾಗ್ಯಗಳಿಗೆ ಖರ್ಚು ಮಾಡಲಾಗುತ್ತಿದೆ. ಈ ಹಣ ಪುನಾ ಮರಳಿ ಮಾರುಕಟ್ಟೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿಯೇ ರಾಜ್ಯ ಜಿಡಿಪಿಯಲ್ಲಿ ದೇಶದಲ್ಲಿಯೇ ನಂ.೧ ಸ್ಥಾನದಲ್ಲಿದೆ ಎಂದು ತಿಳಿಸಿದರು.

ವಚನಾನಂದ ಸ್ವಾಮೀಜಿಯವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಮಾಜಿಕ ಬದ್ಧತೆಯನ್ನು ಅಳವಡಿಸಿಕೊಂಡಿರುವ ಸಂತೋಷ್ ಲಾಡ್ ಸಾಮಾಜಿಕ ಸೇವೆ ಶ್ಲಾಘನೀಯ ಎಂದರು.

ಶ್ರೀಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿದರು.

ಶಾಸಕ ಡಾ. ಶ್ರೀನಿವಾಸ್, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಇದ್ದರು. ಸಂಡೂರಿನ ಪ್ರಭುಸ್ವಾಮೀಜಿ, ಭೋವಿಮಠದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಈ. ತುಕಾರಾಂ ಅಧ್ಯಕ್ಷತೆ ವಹಿಸಿದ್ದರು.

ಹಾಸ್ಯ ಕಲಾವಿದರಾದ ಅಪ್ಪಣ್ಣ, ವಾಣಿ ಗೌಡ ಮತ್ತವರ ತಂಡದವರಿಂದ ಹಾಸ್ಯಸಂಜೆ ಕಾರ್ಯಕ್ರಮ ಜನರನ್ನು ನಗೆಗಡಲಲ್ಲಿ ತೇಲಿಸಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿತ್ರಿಕಿ ಸತೀಶಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ೩೫ಕ್ಕೂ ಹೆಚ್ಚು ವಿವಿಧ ಮಠಾಧೀಶರು, ಶಾಸಕ ಬಿ.ಎನ್. ನಾಗರಾಜ, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ಮಾಜಿ ವಿಪ ಸದಸ್ಯ ಕೆ.ಎಸ್.ಎಲ್ ಸ್ವಾಮಿ, ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಆಶಾಲತಾ ಸೋಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ಏಕಾಂಬ್ರಪ್ಪ, ಚಿತ್ರಿಕಿ ಮಹಾಬಲೇಶ್ವರ, ರೋಷನ್ ಜಮೀರ್ ಭಾಗವಹಿಸಿದ್ದರು.

ಸಂಡೂರಿನ ಎಪಿಎಂಸಿ ಬಳಿಯ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದ ಚೆಕ್‌ ವಿತರಿಸಲಾಯಿತು.

ಸಂಡೂರಿನ ಎಪಿಎಂಸಿ ಬಳಿಯ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭವನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ವಿವಿಧ ಮಠಾಧೀಶರು ಉದ್ಘಾಟಿಸಿದರು.