ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ವಿಎಸ್ ಅಯ್ಯಂಗಾರ್ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್ ಬಡ ವಿದ್ಯಾರ್ಥಿಗಳ ನೆರೆವಿಗೆ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಮ್ಮ ತಾಯಿ ತಂಗಮ್ಮ ಅವರ ಅಭಿಲಾಷೆಯಂತೆ ಬಡ ಹೆಣ್ಣುಮಕ್ಕಳು ಆರ್ಥಿಕ ಪರಿಸ್ಥಿತಿಯಿಂದ ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸವನ್ನು ಅರ್ಧದಲ್ಲೆ ಮೊಟುಕುಗೊಳಿಸಬಾರದು ಎಂಬ ಕಾರಣಕ್ಕೆ ಟ್ರಸ್ಟ್ ವತಿಯಿಂದ ಅನೇಕ ಸೇವಾ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಗೋವಿಂದರಾಜನ್ ಹೇಳಿದರು.ಎಸ್‌ವಿಕೆ ಕಾಲೇಜಿನಲ್ಲಿ 1.20 ಲಕ್ಷ ರು.ಗಳ ಪ್ರೋತ್ಸಾಹಧನದ ಚೆಕ್ ಅನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿ, ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚಿ, ಅವರ ಜೀವನ ಪ್ರಗತಿ ಹೊಂದಲು ಸಹಕರಿಸಿ ಎಂದರು. ಕುಟುಂಬದ ಸದಸ್ಯರಾದ ನಾವು ನಮ್ಮ ತಾಯಿ ಇಚ್ಛೆಯಂತೆ ವಿಎಸ್ ಅಯ್ಯಂಗಾರ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ನ ಮೂಲಕ ಪ್ರತಿವರ್ಷವೂ ಎಸ್ವಿಕೆ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡುತ್ತಿದ್ದೇವೆ. ಇದೇ ಕಾಲೇಜಿನಿಂದ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ ಹೊಂದಿ ಇಂಜಿನಿಯರಿಂಗ್ ಅಥವಾ ವೈದ್ಯಕೀಯ ವೃತ್ತಿಪರ ಕೋರ್ಸ್ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಅವರು ಕೋರ್ಸ್ ಮುಗಿಸುವವರೆಗೂ ಪ್ರತಿವರ್ಷ ತಲಾ 25ಸಾವಿರದಂತೆ ಪ್ರೋತ್ಸಾಹದ ರೂಪದಲ್ಲಿ ಹಣ ನೀಡುತ್ತಿದ್ದೇವೆ. ಈ ಪ್ರೋತ್ಸಾಹ ಧನವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು, ಮುಂದಿನ ದಿನಗಳಲ್ಲೂ ಟ್ರಸ್ಟ್ ಸೇವೆ ಮುಂದುವರೆಸಲಿದೆ ಎಂದರು.
ಪ್ರಾಂಶುಪಾಲ ಶ್ರೀಧರ್ ಮಾತನಾಡಿ, ವಿಎಸ್ ಅಯ್ಯಂಗಾರ್ ಚಾರಿಟೇಬಲ್ ಟ್ರಸ್ಟ್‌ನವರು ಕಾಲೇಜಿಗೆ ಕಳೆದ 8 ವರ್ಷಗಳಿಂದ ಸಹಾಯ ಹಸ್ತ ನೀಡುತ್ತಿರುವುದು ಶ್ಲಾಘನೀಯ ವಿಚಾರ, ಅವರ ಕುಟುಂಬ ಸದಸ್ಯರಿಗೆ ಶುಭವಾಗಲಿ, ಇನ್ನಷ್ಟು ಮಕ್ಕಳಿಗೆ ಅನುಕೂಲ ಕಲ್ಪಿಸುವ ಶಕ್ತಿ ದೊರಕುವಂತಾಗಲಿ ಎಂದರು. ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಜೋಸೆಫ್ ಅಲೆಗ್ಸಾಂಡರ್ ಮಾತನಾಡಿ, ವಿಎಸ್ ಅಯ್ಯಂಗಾರ್ ಟ್ರಸ್ಟ್‌ನ ಪದಾಧಿಕಾರಿಗಳು ಕಾಲೇಜಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 8 ಕಂಪ್ಯೂಟರ್ ನೀಡಿರುತ್ತಾರೆ, ಈ ಕಂಪ್ಯೂಟರ್‌ಗಳನ್ನು ಬಳಸಿಕೊಂಡು ಕಾಲೇಜಿನಲ್ಲಿ ಪ್ರತ್ಯೇಕ ಕಂಪ್ಯೂಟರ್ ಸೈನ್ಸ್ ಕೋರ್ಸ್ ಪ್ರಾರಂಭಿಸಲಾಗಿದೆ. ಕಾಲೇಜಿನ ವಿದ್ಯಾರ್ಥಿಗಳು ಈ ಕೋರ್ಸಿನ ಪ್ರಯೋಜನ ಪಡೆದುಕೊಂಡಿದ್ದಾರೆ ಎಂಬುದು ಸಂತಸದ ವಿಚಾರ. ಕಾಲೇಜಿಗೆ 150 ಉತ್ತಮ ಗುಣಮಟ್ಟದ ಕುರ್ಚಿಗಳನ್ನುನೀಡಿದ್ದು, ಇಂದಿನ ಸಮಾರಂಭದಲ್ಲಿ ಹಿರಣ್ಮಯಿ ಅವರು ಮಕ್ಕಳು ಕೂರಲು ಕುರ್ಚಿ ಖರೀದಿಗಾಗಿ 25ಸಾವಿರ ದೇಣಿಗೆ ನೀಡಿರುವುದು ಸಹಾ ಸಂತಸದ ವಿಚಾರ ಎಂದರು.ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹರ್ಷ, ಕಾಲೇಜ್ ಅಭಿವೃದ್ಧಿ ಸಮಿತಿಯ ಶೈಕ್ಷಣಿಕ ಸಲಹೆಗಾರ ನರಸಿಂಹನ್, ಹಿರಿಯ ಉಪನ್ಯಾಸಕ ಮಹದೇವ, ದುಂಡಪ್ಪ ಶಾಂತರಾಜ್, ಶ್ರೀಮತಿ ಧನಲಕ್ಷ್ಮಿ ಇನ್ನಿತರ ಗಣ್ಯರಿದ್ದರು.