ವಿಶೇಷ ಚೇತನ ಮಕ್ಕಳ ಸೇವೆಗೆ ಹೃದಯ ಶ್ರೀಮಂತಿಕೆ ಅಗತ್ಯ

| Published : Dec 27 2024, 12:48 AM IST

ವಿಶೇಷ ಚೇತನ ಮಕ್ಕಳ ಸೇವೆಗೆ ಹೃದಯ ಶ್ರೀಮಂತಿಕೆ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ವಿಶೇಷ ಚೇತನ ಮಕ್ಕಳು ದೇವರ ಮಕ್ಕಳಿದ್ದಂತೆ. ಅವರ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ. ಆ ಮಕ್ಕಳ ಸೇವೆ ಸಲ್ಲಿಸಲು ಹೃದಯ ಶ್ರೀಮಂತಿಕೆಯೂ ಬೇಕು ಎಂದು ಮಾಜಿ ಶಾಸಕ ಎ.ಮಂಜುನಾಥ್ ಅಭಿಪ್ರಾಯಪಟ್ಟರು.

ರಾಮನಗರ: ವಿಶೇಷ ಚೇತನ ಮಕ್ಕಳು ದೇವರ ಮಕ್ಕಳಿದ್ದಂತೆ. ಅವರ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ. ಆ ಮಕ್ಕಳ ಸೇವೆ ಸಲ್ಲಿಸಲು ಹೃದಯ ಶ್ರೀಮಂತಿಕೆಯೂ ಬೇಕು ಎಂದು ಮಾಜಿ ಶಾಸಕ ಎ.ಮಂಜುನಾಥ್ ಅಭಿಪ್ರಾಯಪಟ್ಟರು.

ಬಿಡದಿ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿರುವ ವಿಶೇಷ ಚೇತನ ಮಕ್ಕಳ ಶಾಲಾ ಸಿದ್ಧತಾ ಕೇಂದ್ರದಲ್ಲಿ ಎ.ಮಂಜು ಚಾರಿಬಟಲ್ ಟ್ರಸ್ಟ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಟೊಯೋಟಾ ಕಂಪನಿ ಹಾಗೂ ಬಿಡದಿ ಹೋಬಳಿ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಫೌಂಡೇಷನ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಅಂಗವಿಕಲ ದಿನಾಚರಣೆ ಪ್ರಯುಕ್ತ ವಿಶೇಷ ಚೇತನರಿಗೆ ಫಿಜಿಯೋಥೆರಫಿ ಸಲಕರಣೆಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮನೆಯಲ್ಲಿ ಒಂದು ವಿಶೇಷ ಚೇತನ ಮಗುವಿದ್ದರೆ ನೋಡಿಕೊಳ್ಳುವುದು ಕಷ್ಟ. ಆದರೆ, ಎ.ಮಂಜು ಚಾರಿಬಟಲ್ ಟ್ರಸ್ಟ್ ಸಂಸ್ಥೆ ಹತ್ತಾರು ಮಕ್ಕಳ ಪೋಷಣೆ ಮಾಡುತ್ತಿದೆ. ಇದು ನಿಜಕ್ಕೂ ದೇವರ ಸೇವೆ ಮಾಡಿದಂತೆಯೇ, ಇಲ್ಲಿ ಕೆಲಸ ಮಾಡುವ ಶಿಕ್ಷಕಿಯರು ಹಾಗೂ ಸಿಬ್ಬಂದಿ ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸುವಂತೆಯೇ ವಿಶೇಷ ಚೇತನ ಮಕ್ಕಳ ಪಾಲನೆ ಮಾಡುತ್ತಿರುವುದು ಇತರರಿಗೂ ಪ್ರೇರಣೆಯಾಗಿದೆ ಎಂದರು.

ಪ್ರಸ್ತುತ ದಿನಮಾನಗಳಲ್ಲಿ ರಾಜಕಾರಣಿಗಳು ಹಣದ ಆಸೆಗಾಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ವಿಶೇಷ ಚೇತನರ ಪಾಲನೆ ಪೋಷಣೆ ಸರ್ಕಾರದ ಕರ್ತವ್ಯವೆಂದು ಯಾವ ರಾಜಕಾರಣಿಯೂ ಮೈಮೇಲೆ ಎಳೆದುಕೊಳ್ಳುವುದಿಲ್ಲ. ಏಕೆಂದರೆ ವಿಶೇಷ ಚೇತನ ಮಕ್ಕಳಿಗೆ ಶಿಕ್ಷಣ ನೀಡುವುದು ಬಹಳ ತ್ರಾಸದ ಕೆಲಸ. ಇದನ್ನು ಸವಾಲಾಗಿ ಸ್ವೀಕರಿಸಿದ ನನಗೆ ಶಾಸಕನಾಗಿದ್ದಾಗ ವಿಶೇಷ ಚೇತನ ಮಕ್ಕಳ ಶಾಲಾ ಸಿದ್ಧತಾ ಕೇಂದ್ರ ಸ್ಥಾಪಿಸಲು ಸಾಕಷ್ಟು ಅಡೆತಡೆಗಳು ಬಂದವು. ಅದೆಲ್ಲವನ್ನು ನಿಭಾಯಿಸಿ ಸುಸಜ್ಜಿತ ಕೇಂದ್ರ ಸ್ಥಾಪನೆ ಮಾಡಿದ್ದಾಗಿ ಹೇಳಿದರು.

ನಮ್ಮ ಟ್ರಸ್ಟ್ ಆ ಮಕ್ಕಳ ಸೂಕ್ಷ್ಮ ಮನಸ್ಸಿನ ಭಾವನೆಗಳನ್ನು ಅರಿತು, ಆ ಮಕ್ಕಳ ಬುದ್ಧಿ ಮತ್ತೆ ಹೆಚ್ಚಿಸಿ ಮುಖ್ಯ ವಾಹಿನಿಗೆ ತರುವ ಹಾಗೂ ಸ್ವಾವಲಂಬಿ ಜೀವನ ನಡೆಸುವಂತೆ ಮಾಡುವ ಪ್ರಯತ್ನ ನಡೆಯುತ್ತಿದೆ. ನಾಲ್ಕು ವಿಶೇಷ ಚೇತನ ಮಕ್ಕಳಿಂದ ಆರಂಭಗೊಂಡ ಕೇಂದ್ರದಲ್ಲಿಂದು 30 ಮಕ್ಕಳ ಪಾಲನೆ ಪೋಷಣೆ ನಡೆಯುತ್ತಿದ್ದೆ. ನಾವು ಉದಾಸೀನತೆ ತೋರಿದ್ದರೆ ಇಷ್ಟು ದೇವರ ಮಕ್ಕಳ ಸೇವೆ ಮಾಡುವ ಭಾಗ್ಯ ಸಿಗುತ್ತಿರಲಿಲ್ಲ ಎಂದು ತಿಳಿಸಿದರು.

ಟ್ರಸ್ಟ್ ಸಹಯೋಗದಲ್ಲಿ ಆರಂಭವಾದ ಸಂಸ್ಥೆ ಎಲ್ಲರ ಮನಸ್ಸಿನಲ್ಲಿ ಉಳಿಯುವ ಶಾಶ್ವತ ಕಾರ್ಯ ಮಾಡುತ್ತಿದೆ. ಪ್ರಾರಂಭದಲ್ಲಿ ಕೇಂದ್ರದ ಸಿಬ್ಬಂದಿಗಳ ವೇತನವನ್ನು ಪೋಷಕರೆ ಪಾವತಿಸುತ್ತಿದ್ದರು. ನನ್ನ ಗಮನಕ್ಕೆ ಬಂದ ಮೇಲೆ ಅದನ್ನು ನಾವೇ ನೀಡುವ ನಿರ್ಧಾರ ಮಾಡಿದೇವು. ಕೆಲ ಪೋಷಕರಿಗೆ ಮಕ್ಕಳನ್ನು ಕರೆತಂದು ಹೋಗುವುದು ಹೊರೆ ಆಗುತ್ತಿದೆ. ಅಂತಹ ಮಕ್ಕಳಿಗಾಗಿ ಶಾಲಾ ವಾಹನ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.

ಉಳ್ಳವರಿಂದ ಡೋನೇಷನ್ ಕೇಳುವ ಬದಲು ಅವರುಗಳೇ ಇಲ್ಲಿ ಬಂದು ನೋಡಿದಾಗ ವಾಸ್ತವ ಗೊತ್ತಾಗುತ್ತದೆ. ಹೃದಯ ಶ್ರೀಮಂತಿಕೆ ಉಳ್ಳವರು ಇಲ್ಲಿ ಬಂದು ವಿಶೇಷ ಚೇತನರನ್ನು ನೋಡಿದರೆ ಅವರ ಹೃದಯವೇ ಕರಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿನ ಪರಿಣಿತರನ್ನು ಇಲ್ಲಿಗೆ ಕರೆತಂದು ವಿಶೇಷ ಚೇತನರ ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಟ್ರಸ್ಟ್ ವತಿಯಿಂದ ಈವರೆಗೆ ಜಿಲ್ಲೆಯಲ್ಲಿ ಒಂದು ಲಕ್ಷಕ್ಕು ಅಧಿಕ ಮಕ್ಕಳ ಕಣ್ಣಿನ ತಪಾಸಣೆ ಮಾಡಿಸಲಾಗಿದ್ದು, ನ್ಯೂನತೆ ಉಳ್ಳ ಮಕ್ಕಳಿಗೆ ಚಿಕಿತ್ಸೆ ಕೊಡಿಸುವ ಜೊತೆಗೆ ಕನ್ನಡಕ ವಿತರಣೆ ಮಾಡಿದ್ದೇವೆ. ಈಗಲೂ ಪ್ರತಿ ನಾಲ್ಕನೇ ಮಂಗಳವಾರ ನೇತ್ರ ತಪಾಸಣಾ ಶಿಬಿರಗಳು ನಡೆಯುತ್ತಿವೆ. ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಗರ್ಭ ಕೋಶ, ಸ್ತನ ಕ್ಯಾನ್ಸರ್ ತಪಾಸಣೆ ನಡೆಸಿ ಉಚಿತ ಚಿಕಿತ್ಸೆ ಕೊಡಿಸಿದ್ದೇವೆ. ಟ್ರಸ್ಟ್ ನಡೆಸುತ್ತಿರುವ ಇಂತಹ ಸಮಾಜಮುಖಿ ಕಾರ್ಯಗಳಿಗೆ ಜನರ ಸಹಕಾರವೂ ಅಗತ್ಯವಿದೆ ಎಂದು ಮಂಜುನಾಥ್ ಮನವಿ ಮಾಡಿದರು.

ಜಿಪಂ ಮಾಜಿ ಸದಸ್ಯ ಎಚ್.ಎಲ್ .ಚಂದ್ರು, ಸಮಾಜ ಸೇವಕ ಚಿಕ್ಕಣ್ಣಯ್ಯ, ಶಿಕ್ಷಕ ಗುರುಮೂರ್ತಿ, ಡಯಟ್ ನಿವೃತ್ತ ಹಿರಿಯ ಉಪನ್ಯಾಸಕಿ ಭಾರತಿ, ಪುರಸಭೆ ಅಧ್ಯಕ್ಷ ಹರಿಪ್ರಸಾದ್ ಮಾತನಾಡಿದರು.

ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಮಂಜುನಾಥ್ ರವರು ಬಹುಮಾನ ವಿತರಿಸಿದರು. ಜೆಡಿಎಸ್ ಮುಖಂಡರಾದ ಡಾ.ಭರತ್ , ಶೆಟ್ಟಿಗೌಡನದೊಡ್ಡಿ ನರಸಿಂಹಯ್ಯ, ಖಲೀಲ್ , ರಾಮಣ್ಣ, ಟ್ರಸ್ಟ್ ನ ಮಂಜುನಾಥ್ , ಶಿಕ್ಷಕ ದುಂಡುಮಾದಯ್ಯ ಮತ್ತಿತರರು ಉಪಸ್ಥಿತರಿದ್ದರು.

26ಕೆಆರ್ ಎಂಎನ್ 1,2.ಜೆಪಿಜಿ

1.ಬಿಡದಿ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿರುವ ವಿಶೇಷ ಚೇತನ ಮಕ್ಕಳ ಶಾಲಾ ಸಿದ್ಧತಾ ಕೇಂದ್ರದಲ್ಲಿ ವಿಶೇಷ ಚೇತನರಿಗೆ ಫಿಜಿಯೋ ಥೆರಫಿ ಸಲಕರಣೆಗಳ ವಿತರಣೆ ಕಾರ್ಯಕ್ರಮವನ್ನು ಮಾಜಿ ಶಾಸಕ ಎ.ಮಂಜುನಾಥ್ ಉದ್ಘಾಟಿಸಿದರು.

2.ಬಿಡದಿ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿರುವ ವಿಶೇಷ ಚೇತನ ಮಕ್ಕಳ ಶಾಲಾ ಸಿದ್ಧತಾ ಕೇಂದ್ರದಲ್ಲಿ ವಿಶೇಷ ಚೇತನರಿಗೆ ಫಿಜಿಯೋ ಥೆರಫಿ ಸಲಕರಣೆಗಳವನ್ನು ಮಾಜಿ ಶಾಸಕ ಎ.ಮಂಜುನಾಥ್ ವಿತರಿಸಿದರು.