ಜನರ ಸೇವೆಯೇ ಜನಪ್ರತಿನಿಧಿಯ ಮೊದಲ ಕರ್ತವ್ಯ. ನಮ್ಮ ಕ್ಷೇತ್ರದ ಪ್ರತಿಯೊಬ್ಬ ನಾಗರಿಕನಿಗೂ ಸರ್ಕಾರದ ಸೌಲಭ್ಯಗಳು ತಲುಪುವಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಸಂಕಲ್ಪ ನಮ್ಮದು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಕುಮಟಾ: ಜನರ ಮನೆ ಬಾಗಿಲಿಗೆ ಸರ್ಕಾರದ ಯೋಜನೆಗಳು ಹಾಗೂ ವಿವಿಧ ಇಲಾಖೆಗಳ ಸೇವೆಗಳನ್ನು ತಲುಪಿಸುವುದು, ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಒದಗಿಸುವುದು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸುವುದು ಪ್ರಜಾಸೇವಾ ಅಂದೋಲನದ ಮುಖ್ಯ ಉದ್ದೇಶ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಕೂಜಳ್ಳಿಯ ಕುಳಿಹಕ್ಕಲು ಶ್ರೀ ಶಾಂತಿಕಾ ಪರಮೇಶ್ವರಿ ಸಭಾಭವನದಲ್ಲಿ ತಾಲೂಕಾಡಳಿತ ಮತ್ತು ತಾಲೂಕು ಪಂಚಾಯಿತಿ ವತಿಯಿಂದ ಕೂಜಳ್ಳಿ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಸಭೆ ಉದ್ಘಾಟಿಸಿ ಸಾರ್ವಜನಿಕರ ಅಹವಾಲಿಗೆ ಪ್ರತಿಕ್ರಿಯಿಸಿದರು. ಜನರ ಸೇವೆಯೇ ಜನಪ್ರತಿನಿಧಿಯ ಮೊದಲ ಕರ್ತವ್ಯ. ನಮ್ಮ ಕ್ಷೇತ್ರದ ಪ್ರತಿಯೊಬ್ಬ ನಾಗರಿಕನಿಗೂ ಸರ್ಕಾರದ ಸೌಲಭ್ಯಗಳು ತಲುಪುವಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಸಂಕಲ್ಪ ನಮ್ಮದು ಎಂದರು.ಕಲ್ಲಬ್ಬೆಯ ರವಿ ಹೆಗಡೆ ಬೊಗ್ರಿಬೈಲ ಸೇತುವೆ ಕೊಂಡಿ ರಸ್ತೆ ದುರಸ್ತಿ ಹಾಗೂ ಕುಡವಳ್ಳಿ ರಸ್ತೆ ನಿರ್ಮಾಣ ಕುರಿತು ವಿನಂತಿಸಿದರು. ವಾಲಗಳ್ಳಿಯಲ್ಲೂ ರಸ್ತೆ ಹೊಂಡಗಳ ಕುರಿತು ಪ್ರಸ್ತಾಪವಾಯಿತು. ಪ್ರತಿಕ್ರಿಯಿಸಿದ ಶಾಸಕ ಶೆಟ್ಟಿ, ರಸ್ತೆಗಳ ನಿರ್ವಹಣೆ, ದುರಸ್ತಿ ಹಾಗೂ ಹೊಸ ಕಾಮಗಾರಿಗಳನ್ನು ಮಳೆಗಾಲದ ನಡುವೆ ನಡೆಸುವುದು ಹಾನಿಕರ. ಆದರೂ ಅನಿವಾರ್ಯವಾದಲ್ಲಿ ತುರ್ತು ದುರಸ್ತಿ ಮಾಡಿಕೊಡಲಾಗುವುದು. ಕುಡವಳ್ಳಿ ರಸ್ತೆಗೆ ಈಗಾಗಲೇ ಮಂಜೂರಿ ದೊರೆತಿದ್ದು, ಟೆಂಡರ್ ಕರೆದು ಕಾಮಗಾರಿ ನಡೆಸಲಾಗುವುದು. ಬಹುಗ್ರಾಮ ಯೋಜನೆ ಜಾರಿ ಬಳಿಕ ಜೆಜೆಎಂ ಯೋಜನೆಯಡಿ ಎಲ್ಲೆಡೆ ಸಮರ್ಪಕ ನೀರು ವಿತರಣೆ ಸಾಧ್ಯವಾಗಲಿದೆ ಎಂದರು.
ಸಂತೆಗುಳಿ ವಿನಾಯಕ ಭಟ್ ಅವರಿಗೆ ಸಂಬಂಧಿಸಿ ಹೆಸ್ಕಾಂ ೪ ತಿಂಗಳ ಬಿಲ್ ಒಟ್ಟಿಗೇ ಕೊಡಲಾಗಿದೆ. ಸಮಸ್ಯೆ ಬಗೆಹರಿಸಿ ಎಂದರು. ತಾಂತ್ರಿಕ ಸಮಸ್ಯೆಯಿದೆ. ವರ್ಷದಿಂದ ಬಗೆಹರಿಸಲು ಕಷ್ಟವಾಗಿದೆ ಎಂದು ಎಇಇ ರಾಜೇಶ ಮಡಿವಾಳ ವಿವರಿಸಿದರು.ರೈತರೊಬ್ಬರು ಫ್ರುಟ್ಸ್ ಐಡಿ ತಾಂತ್ರಿಕ ಸಮಸ್ಯೆಯಿಂದ ಬೆಳೆ ಸಾಲ ಸಿಗದಂತಾಗಿದೆ ಎಂದು ತಿಳಿಸಿದರು.
ಕೆಲವು ಕಡುಬಡವ ಅರಣ್ಯವಾಸಿಗಳ ಜಿಪಿಎಸ್ ಆಗದೇ ಉಳಿದಿದ್ದು, ಉಳ್ಳವರು ಮಧ್ಯಸ್ಥಿಕೆ ವಹಿಸಿಕೊಂಡವರು ಜಿಪಿಎಸ್ ಮಾಡಿಸಿಕೊಂಡಿದ್ದಾರೆ ಎಂದು ಸಭಿಕರೊಬ್ಬರು ಆರೋಪಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು, ಇದು ಸರ್ಕಾರದ ಮಟ್ಟದಲ್ಲಿ ಆಗಬೇಕಾದ ವಿಷಯ ಎಂದರು. ಮಧ್ಯಪ್ರವೇಶಿದ ಶಾಸಕರು, ಅರಣ್ಯ ಅಧಿಕಾರಿಗಳು ಅರಣ್ಯವಾಸಿಗಳಿಗೆ ತೊಂದರೆ ನೀಡಬಾರದು ಎಂದರು.ಬೆಳೆಗಳಿಗೆ ಮಂಗ ಹಾಗೂ ಕಾಡುಪ್ರಾಣಿಗಳ ಹಾವಳಿಯ ಕುರಿತು ರೈತರೊಬ್ಬರು ಪ್ರಸ್ತಾಪಿಸಿದರು. ಇ-ಪರಿಹಾರ ತಂತ್ರಾಂಶದಲ್ಲಿ ಅರಣ್ಯ ಸಿಬ್ಬಂದಿ ಬೆಳೆ ಹಾನಿ ಸರ್ವೆ ಮಾಡಿ, ಶಿಫಾರಸು ಮಾಡಿ, ನೇರವಾಗಿ ರೈತರ ಖಾತೆಗೆ ಪರಿಹಾರದ ಮೊತ್ತ ಜಮಾ ಮಾಡಲಾಗುತ್ತಿದೆ ಎಂದು ಕುಮಟಾ ಆರ್‌ಎಫ್‌ಒ ತಿಳಿಸಿದರು.
ಉಳಿದಂತೆ ಸಭೆಯಲ್ಲಿ ಪಹಣಿ ತಿದ್ದುಪಡಿ, ಸಂಧ್ಯಾ ಸುರಕ್ಷಾ ವೃದ್ಧಾಪ್ಯ ವೇತನ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಹೆಸ್ಕಾಂ ಮತ್ತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಾರ್ವಜನಿಕ ಸಮಸ್ಯೆಗಳು ಪ್ರಸ್ತಾಪವಾಯಿತು. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದ ಬದಲು ತಿಂಗಳಿಗೊಮ್ಮೆ ಪ್ರಜಾಸೇವೆ ಆಂದೋಲನ ಸಭೆ ನಡೆಸುವುದು ಉತ್ತಮವೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.ಸಂಧ್ಯಾ ಸುರಕ್ಷಾ ಯೋಜನೆಯಡಿ ೫ ಅರ್ಜಿಗಳಿಗೆ ಸಭೆಯಲ್ಲಿಯೇ ಮಂಜೂರಿ ಆದೇಶದ ಪ್ರತಿ ವಿತರಿಸಲಾಯಿತು. ಕಾರ್ಮಿಕ ಇಲಾಖೆಯಿಂದ ೪ ಜನರಿಗೆ ಮದುವೆ ಸಹಾಯಧನದ ಆದೇಶದ ಪ್ರತಿ ನೀಡಲಾಯಿತು. ನಾಡಗೀತೆಯೊಂದಿಗೆ ಆರಂಭವಾದ ಸಭೆಯಲ್ಲಿ ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ ಸ್ವಾಗತಿಸಿ, ಸಭೆಯ ಉದ್ದೇಶ ತಿಳಿಸಿದರು. ಶಿಕ್ಷಕ ರಾಮಚಂದ್ರ ಮಡಿವಾಳ ಕಾರ್ಯಕ್ರಮ ನಿರ್ವಹಿಸಿದರು.