ನಾಗರಕಟ್ಟೆ,ಉಜ್ಜಯಿನಿ, ಕಾಳಾಪುರ ಮತ್ತು ನಿಂಬಳಗೆರೆಗಳಲ್ಲಿ ಈಗಾಗಲೇ ಮನೆ ಮನೆಗೆ ತೆರಳಿ ಕಾರ್ಯಕ್ರಮ ನಡೆಸಿದ್ದೇವು

ಕೊಟ್ಟೂರು: ಅಭಿವೃದ್ಧಿ ಕೆಲಸ ಕಾರ್ಯದಲ್ಲಿ ಯಾವುದೇ ರಾಜಕೀಯ ಮಾಡದೇ ಜನರ ಸೇವೆಯೇ ಜನಪ್ರತಿನಿಧಿ ಮತ್ತು ಜನನಾಯಕರ ಗುರಿಯಾಗಿರಬೇಕು ಎಂದು ಕೂಡ್ಲಿಗಿ ಶಾಸಕ ಡಾ. ಎನ್.ಟಿ.ಶ್ರೀನಿವಾಸ ಹೇಳಿದರು.

ಶನಿವಾರ ತಾಲೂಕಿನ ತೂಲಹಳ್ಳಿ ಗ್ರಾಮದಲ್ಲಿ ಕೊಟ್ಟೂರು ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ ಪ್ರಜಾಸೇವಾ ಆಂದೋಲನ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಸಮಸ್ಯೆ ಆಲಿಸುವ ಕೆಲಸ ಕೈಗೊಂಡಿದ್ದೇವೆ. ಇದೀಗ ಸರ್ಕಾರ ಇದನ್ನೇ ಆಂದೋಲನವನ್ನಾಗಿಸಿಕೊಂಡು ಜನರ ಸಮಸ್ಯೆ ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಪ್ರಜಾಸೇವಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ನೆಚ್ಚಿನ ವಿಷಯ ಎಂದರು.

ನಾಗರಕಟ್ಟೆ,ಉಜ್ಜಯಿನಿ, ಕಾಳಾಪುರ ಮತ್ತು ನಿಂಬಳಗೆರೆಗಳಲ್ಲಿ ಈಗಾಗಲೇ ಮನೆ ಮನೆಗೆ ತೆರಳಿ ಕಾರ್ಯಕ್ರಮ ನಡೆಸಿದ್ದೇವು. ಇದೀಗ ಪ್ರಜಾಸೇವಾ ಆಂದೋಲನ ತಾಲೂಕಾಡಳಿತದೊಂದಿಗೆ ಕೈಗೊಂಡಿದ್ದೇವೆ ಎಂದರು.

ಮನೆ ನಿವೇಶನ, ವಿದ್ಯುತ್, ರಸ್ತೆ, ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದು ನಮ್ಮ ಧ್ಯೆಯ ಮತ್ತು ಕರ್ತವ್ಯವಾಗಿದೆ. ನಿರಂತರ ವಿದ್ಯುತ್ ಸರಬರಾಜಿಗೆ ಕ್ಷೇತ್ರದಲ್ಲಿ ಹಾಲಿ ಇರುವ ಟಿಸಿಗಳ ಶಕ್ತಿ ತ್ರಿಗುಣಗೊಳಿಸುವ ಕೆಲಸ ಮಾಡಿದ್ದೇವೆ. ತೂಲಹಳ್ಳಿ ಶಾಲಾಭಿವೃದ್ದಿಗೆ ₹50 ಲಕ್ಷ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾವಜ್ಜಿ ರಾಜೇಂದ್ರಪ್ರಸಾದ್, ಹಾಲನಗೌಡ, ಬಂಡಾರಿಸಿದ್ದೇಶ, ಯರಿಸ್ವಾಮಿ, ಶಾಂತನಗೌಡ, ಹೊಟ್ಟೇರ್ ಅಜ್ಜಯ್ಯ, ತಹಸೀಲ್ದಾರ್ ಅಮರೀಶ ಜಿ.ಕೆ., ತಾಪಂ ಇಓ ಡಾ. ಆನಂದ್ ಕುಮಾರ, ಎಪಿಎಂಸಿ ಕಾರ್ಯದರ್ಶಿ ಎಡಿ ವೀರಣ್ಣ, ಪಿ.ಐ.ಬಿ.ದುರುಗಪ್ಪ, ಮುಖ್ಯ ಪಶುವೈದ್ಯಾಧಿಕಾರಿ ಚಂದ್ರನಾಯ್ಕ,ತೋಟಗಾರಿಕ ಸಹಾಯಕ ನಿರ್ದೇಶಕ ಕುಬೇರಚಾರ್, ಎ.ಇ.ಜಿ.ಬಸವರಾಜ, ಟಿ.ಎಚ್.ಓ.ಪ್ರದೀಪ್, ಗ್ರೇಡ್-2 ತಹಸೀಲ್ದಾರ್ ಎಂ.ಪ್ರತಿಭಾ, ವಿ.ಎ.ಸಿದ್ದೇಶ ಇದ್ದರು.

ಗ್ರಾಮ ಸೇವಾ ಆಂದೋಲನದಲ್ಲಿ ಕಂದಾಯ 34, ಆರ್.ಡಿಪಿಆರ್ 93, ಶಿಕ್ಷಣ 1, ಜೆಸ್ಕಾಂ 3, ಆಹಾರ 1 ಕೆ.ಕೆ.ಆರ್.ಟಿ 5, ಅಂಬೇಡ್ಕರ್ ಅಭಿವೃದ್ಧಿ ನಿಗಮ 4, ಪೊಲೀಸ್ 2, ಸಣ್ಣನೀರಾವರಿ 3, ಸಿಡಿಪಿಓ 4, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ 1 ಒಟ್ಟು 161 ಅರ್ಜಿ ಸ್ವೀಕೃತವಾದವು. ಮರಿಯಪ್ಪ ಸ್ವಾಗತಿಸಿದರು, ಶರಣಪ್ಪ ನಿರೂಪಿಸಿದರು.