ಅರುಣೋದಯ ಸಂಸ್ಥೆಯು ನಿರಂತರವಾಗಿ ಕಳೆದ 20 ವರ್ಷಗಳಿಂದ ಸಮಾಜದಲ್ಲಿರುವ ಬಡವರ, ನಿರ್ಗತಿಕರ, ಹಿರಿಯ ನಾಗರಿಕರ ಸೇವೆಯ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಅತ್ಯಂತ ಶ್ಲಾಘನೀಯ ಸಂಗತಿ.
ಅರುಣೋದಯ ಸಂಸ್ಥೆಯ 20ನೇ ವರ್ಷದ ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷ
ಕನ್ನಡಪ್ರಭ ವಾರ್ತೆ ಶಿರಸಿಅರುಣೋದಯ ಸಂಸ್ಥೆಯು ನಿರಂತರವಾಗಿ ಕಳೆದ 20 ವರ್ಷಗಳಿಂದ ಸಮಾಜದಲ್ಲಿರುವ ಬಡವರ, ನಿರ್ಗತಿಕರ, ಹಿರಿಯ ನಾಗರಿಕರ ಸೇವೆಯ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಅತ್ಯಂತ ಶ್ಲಾಘನೀಯ ಸಂಗತಿ ಎಂದು ರಾಜ್ಯ ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ನುಡಿದರು.ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಅರುಣೋದಯ ಸಂಸ್ಥೆಯ 20ನೇ ವರ್ಷದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಲ್ಲದೆ ಕಳೆದ 19 ವರ್ಷದಿಂದ ಯಾವುದೇ ದಾನಿಗಳ ಸಹಾಯ ಸಹಕಾರವಿಲ್ಲದೆ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬಂದು ಸಮಾಜದಲ್ಲಿರುವ ಬಡವರ ಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ ಅದು ಸಾಮಾನ್ಯವಾದ ಕೆಲಸವಲ್ಲ ಎಂದರು.ಸಮಾಜಕ್ಕೆ ಏನಾದರೂ ಒಂದು ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಈ ಸಂಸ್ಥೆ ಸ್ಥಾಪಿಸಿದ ಸತೀಶ್ ನಾಯ್ಕ್ ಅವರ ಚಿಂತನೆ, ದೂರದೃಷ್ಟಿ ಅಪಾರವಾದದ್ದು, ಇದು ಹೀಗೆ 50 ವರ್ಷ ಪೂರೈಸಲಿ ಎಂದು ಆಶಿಸಿದರು.
ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರು ಹೊಟ್ಟೆ ಹಸಿವಿನಿಂದ ಯಾರು ಬಳಲಬಾರದು ಮತ್ತು ಆರ್ಥಿಕ ಸ್ಥಿತಿಯಿಂದ ಹೊರ ಬರಬೇಕು ಎಂಬ ಉದ್ದೇಶದಿಂದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಅವುಗಳನ್ನು ಅತ್ಯಂತ ಸಮರ್ಪಕವಾಗಿ ಜನಸಾಮಾನ್ಯರಿಗೆ ತಲುಪಿಸಿದ ಕೀರ್ತಿ ನಮ್ಮ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.ನಂತರ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಸಿಸಿಎಫ್ ಹಿರಾಲಾಲ್ ನಾಯಕ್, ಜೀವನ ಎಂದರೆ ಕೇವಲ ಬದುಕುವುದಲ್ಲ, ಸಮಾಜದಲ್ಲಿನ ಜನರ ಬದುಕಿಗೆ ನೂರಾರು ಜೀವಿಗಳಿಗೆ ಬೆಳಕಾಗುವುದು ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು.
ಭಾರತ ಹಾಗೂ ಕರ್ನಾಟಕದಲ್ಲಿ ಪ್ರತಿನಿತ್ಯ ಜನಸಂಖ್ಯೆ ಹೆಚ್ಚಳವಾಗುತ್ತಿದೆ. ಈ ಜನಸಂಖ್ಯಾ ಸ್ಫೋಟದಿಂದ ಆರೋಗ್ಯ, ಆಹಾರದ ಕೊರತೆ ಮತ್ತು ಪರಿಸರ ನಾಶವಾಗುತ್ತಿದೆ. ಜೊತೆಗೆ ಮಾನವ ಮತ್ತು ಪ್ರಾಣಿ ಸಂಘರ್ಷ ವನ್ನು ತಡೆಗಟ್ಟುವುದು ಅತ್ಯಂತ ಸವಾಲಿನ ಕೆಲಸವಾಗಿದೆ ಎಂದು ಹೇಳಿದರು.ಅರುಣೋದಯ ಸಂಸ್ಥೆಯ ಸಂಸ್ಥಾಪಕರು ಕಳೆದ 20 ವರ್ಷದ ಹಿಂದೆ ಒಂದು ಬೀಜವನ್ನು ಬಿತ್ತಿ ಆ ಬೀಜವು ಮೊಳಕೆ ಒಡೆದು ಆ ಮೊಳಕೆಯು ಸಸಿಯಾಗಿ ಆ ಸಸಿಯು ಗಿಡವಾಗಿ ಆ ಗಿಡವು ಮರವಾಗಿ ಬೆಳೆದು ನಿಂತಿದೆ. ಈ ಮರವು ಒಂದು ದೊಡ್ಡ ವೃಕ್ಷವಾಗಿ ಸಾವಿರಾರು ಜನರಿಗೆ ನೆರಳು ನೀಡಲಿ ಎಂದು ಶುಭ ಕೋರಿದರು.ಸಂಸ್ಥೆಯ ಸಂಸ್ಥಾಪಕ ಸತೀಶ್ ಪಿ. ನಾಯ್ಕ್, ದೊಡ್ನಳ್ಳಿ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್. ಹೆಗಡೆ ಮಾತನಾಡಿದರು.
ನಂತರ ವೇದಿಕೆ ಮೇಲೆ ಹಿರಿಯ ನಾಗರಿಕರಿಗೆ ವೀಲ್ ಚೇರ್ ವಿತರಣೆ, ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಅಂಗನವಾಡಿಯ 5 ಜನ ಶಿಕ್ಷಕಿಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಪೌರಕಾರ್ಮಿಕರಿಗೆ, ಆಶಾ ಕಾರ್ಯಕರ್ತೆಯರಿಗೆ ಮತ್ತು ಅಂಚೆ ಕಚೇರಿಯ ಪೋಸ್ಟ್ ಮ್ಯಾನ್ ಗಳಿಗೆ ಸನ್ಮಾನಿಸಿ ಅರುಣೋದಯ ಟ್ರಸ್ಟ್‌ನ ನೂತನ ಆ್ಯಂಬುಲೆನ್ಸ್‌ನ್ನು ಲೋಕಾರ್ಪಣೆಗೊಳಿಸಲಾಯಿತು.ಈ ಸಂದರ್ಭ ಆ್ಯಂಬುಲೆನ್ಸ್ ದಾನಿಗಳಾದ ಗಣಪತಿ ಜೋಗುಳೇಕರ್, ಸುಮಾ ಉಗ್ರಾಣಕರ, ಪಂಡಿತ್ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ನೇತ್ರಾವತಿ ಸಿರ್ಸಿಕರ್, ಜ್ಯೋತಿ ಪಿ. ನಾಯ್ಕ್, ವಿನಾಯಕ್ ಶೇಟ್, ಚಂದ್ರಕಾಂತ್ ಪವಾರ್, ಅಪೂರ್ವ ನಾಯ್ಕ್, ದತ್ತುರಾವ್, ಎ.ಕೆ. ನಾಯ್ಕ, ಸವಿತಾ, ಸುಭಾಷ್ ಸೇರಿದಂತೆ ಅನೇಕರಿದ್ದರು.