ಸಾರಾಂಶ
ರೈತಾಪಿ ಕುಟುಂಬ ಹಿನ್ನೆಲೆಯ ನನಗೆ ರೈತರ, ಕೃಷಿ ಕಾರ್ಮಿಕರ ಮತ್ತು ಶ್ರಮಿಕರ ಸಂಕಷ್ಟಗಳ ಅರಿವಿದೆ. ಅದಕ್ಕಾಗಿ ತಮ್ಮ ಆಪ್ತ ಸ್ನೇಹಿತನಾಗಿ, ಸೋದರನಾಗಿ ತಮ್ಮ ಭಾವನೆಗಳನ್ನು ಗೌರವಿಸುವೆ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.
ಕನ್ನಡಪ್ರಭ ವಾರ್ತೆ ಹಾವೇರಿ
ನನ್ನ ಜೀವನದ ಕೊನೆಯ ಕ್ಷಣದ ವರೆಗೂ ಒಂದು ಕಪ್ಪು ಚುಕ್ಕೆ ಇಲ್ಲದಂತೆ ತಮ್ಮ ಸೇವೆಗೆ ಸದಾ ಶ್ರಮಿಸುವೆ. ಜನಸಾಮಾನ್ಯರ ಸಂಕಷ್ಟಗಳಿಗೆ ಧ್ವನಿ ಆಗಬೇಕೆಂಬುದು ನನ್ನಿಚ್ಛೆ. ಈ ಹಿನ್ನೆಲೆಯಲ್ಲಿ ತಮ್ಮೆಲ್ಲರ ಆಶೀರ್ವಾದ ಬಯಸುವೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಕಾಗಿನೆಲೆ ಗ್ರಾಮದಲ್ಲಿ ಜರುಗಿದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ರೈತಾಪಿ ಕುಟುಂಬ ಹಿನ್ನೆಲೆಯ ನನಗೆ ರೈತರ, ಕೃಷಿ ಕಾರ್ಮಿಕರ ಮತ್ತು ಶ್ರಮಿಕರ ಸಂಕಷ್ಟಗಳ ಅರಿವಿದೆ. ಅದಕ್ಕಾಗಿ ತಮ್ಮ ಆಪ್ತ ಸ್ನೇಹಿತನಾಗಿ, ಸೋದರನಾಗಿ ತಮ್ಮ ಭಾವನೆಗಳನ್ನು ಗೌರವಿಸುವೆ ಎಂದರು.ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಜನರ ಮಧ್ಯೆ ಇದ್ದು ಸೇವೆ ಮಾಡುವ ವಿಶ್ವಾಸದಿಂದ ನಮ್ಮ ಪಕ್ಷ ಆನಂದಸ್ವಾಮಿ ಅವರನ್ನು ಅಭ್ಯರ್ಥಿಯನ್ನಾಗಿಸಿದೆ. ಅವರಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಹಸ್ತದ ಗುರುತಿಗೆ ಮತ ನೀಡಿ ನನ್ನ ಕೈಬಲಪಡಿಸಬೇಕು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ ಮಾತನಾಡಿ, ಕಾಂಗ್ರೆಸ್ ಪಕ್ಷ ಅನುಷ್ಠಾನಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ಮತದಾರರ ಮನ ಸೆಳೆದಿವೆ. ಕೇಂದ್ರದಲ್ಲೂ ನಮ್ಮ ಪಕ್ಷ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಅಮೂಲ್ಯ ಮತ ನೀಡಬೇಕೆಂದು ಹೇಳಿದರು.ಜಿಪಂ ಮಾಜಿ ಸದಸ್ಯ ಅಬ್ದುಲ್ ಮುನಾಫ್ ಯಲಿಗಾರ, ಮುಖಂಡರಾದ ದಾನಪ್ಪಗೌಡ ತೋಟದ, ಶಿವನಗೌಡ ಪಾಟೀಲ, ರವಿ ಪೂಜಾರ, ವೀರನಗೌಡ ಪಾಟೀಲ, ಸುರೇಶ ಪೂಜಾರ, ವಿರೇಶ ಮತ್ತಿಹಳ್ಳಿ, ಹಜರತ್ ಅಲಿ ಹುಳ್ಳಿ, ಗೌಸ್ ನಾಯಕ್, ಸಯ್ಯದ್ ತಹಸೀಲ್ದಾರ್, ಆಯೂಬ್ ಖಾನ್ ಮಲ್ಲೂರ, ಹೂರಾಂಬಿ ಮಲ್ಲೂರ ಇದ್ದರು.